ಯಾದಗಿರಿ: ಯಾವುದೇ ಕಾಮಗಾರಿ ಇರಲಿ, ಇಲಾಖವಾರು ಕರೆಯಬೇಕಾದ ಟೆಂಡರ್ ವಿಳಂಬ ಮಾಡಬೇಡಿ, ಪರಿಶೀಲಿಸಿ ಬೇಗನೆ ಕಾಮಗಾರಿ ಟೆಂಡರ್ ಕರೆಯಿರಿ, ಅಧಿಕಾರಿಗಳು ತಮ್ಮ ನಡುವೆ ಪತ್ರ ವ್ಯವಹಾರದ ಮೂಲಕ ಸಂಪರ್ಕಿಸುವುದಕ್ಕಿಂತ ನೇರ ಮಾತುಕತೆ ಮೂಲಕ ಮಾಹಿತಿ ಪಡೆದುಕೊಳ್ಳಿ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಹಾಗೂ ನಗರೋತ್ಥಾನ ಯೋಜನಯಡಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಚಿವ ದರ್ಶನಾಪುರ ಮಾತನಾಡಿದರು. ಟೆಂಬರ್ ಪ್ರಕ್ರಿಯೆಯಲ್ಲಿ ತಡವಾಗಬಾರದು, ಟೆಂಡರ್ ಕರೆಯುವುದೇ ವಿಳಂಬವಾದರೆ ಇನ್ನೂ ಕಾಮಗಾರಿ ಆರಂಭಿಸುವುದು ಯಾವಾಗ, ಪ್ರಗತಿ ಹೊಂದುವುದು ಹೇಗೆ ಎಂದು ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಖಡಕ್ಕಾಗಿ ಹೇಳಿದರು.
ಜಿಲ್ಲೆಯಲ್ಲಿ 410 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ,214 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು,50 ಘಟಕಗಳು ಸಂಪೂರ್ಣ ಹಾಳಾಗಿವೆ. ಬಾಕಿ ಉಳಿದ ದುರಸ್ತಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ 2.70 ಕೋ.ರೂಗಳ ಅನುದಾನ ಕೋರಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಅನುದಾನ ಲಭ್ಯವಾಗುವ ವರೆಗೆ ಆಯಾ ತಾಲೂಕು ಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ಶೇ.10 ರಷ್ಟು ಅನುದಾನವನ್ನು ಕಾಯ್ದಿರಿಸಿ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ,ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಗರೋತ್ತಾನ ಯೋಜನೆ ಹಂತ-3 ಹಾಗೂ ಹಂತ-4 ರ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಟೆಂಡರ್ ಪ್ರಕ್ರಿಯೆಗಳನ್ನು ತಕ್ಷಣ ತೀವ್ರಗೊಳಿಸಿ ಇರುವ ಅನುದಾನ ಸಮರ್ಪಕ ಬಳಕೆಯಾಗಬೇಕು. ಚರಂಡಿ, ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು.
ಜಿಲ್ಲೆಯಲ್ಲಿ ಎಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ಕಂಡುಬರಬಾರದು ಎನ್ನುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಮತ್ತು ಪ್ರತಿ ಗ್ರಾಮಕ್ಕು ವಿವಿಧ ಯೋಜನೆಗಳ ಮೂಲಕ ಕುಡಿಯುವ ನೀರು ತಲುಪಿಸುವ ಕಾರ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದು ನೆರವೇರುತ್ತದೆ ಬರ ಪರಿಹಾರ ಕಾಮಗಾರಿ ರಾಜ್ಯ ಸರ್ಕಾರದ ಸೂಚನೆಯಂತೆ ಮತ್ತು ಮುಖ್ಯಂತ್ರಿಗಳ ಸಲಹೆಯೊಂದಿಗೆ ಜಿಲ್ಲೆಯಲ್ಲಿ ಸೂಕ್ತ ಪರಿಹಾರ ರೈತರಿಗೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ, ಈಗಾಗಲೇ ಘೋಷಿಸಿರುವ ತಾಲೂಕು ಕೇಂದ್ರಗಳಲ್ಲಿ ಬರ ಪರಿಹಾರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಗಳು, ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಬರ, ನಗರೋತ್ತಾನ, ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ವಿವಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜನತಾ ದರ್ಶನ
ರಾಜ್ಯ ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ಹೆಚ್ಚಿನ ರೀತಿಯಲ್ಲಿ ಪರಿಹರಿಸಲು ಅನುಕೂಲವಾಗುವಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲು ನಿರ್ದೇಶನ ನೀಡಿದೆ. ಅದರಂತೆ ಬರುವ ಸೆಪ್ಟೆಂಬರ್.25 ರಂದು ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ನಂತರ ಪ್ರತಿ 15 ದಿನಗಳಿಗೊಮ್ಮೆ ವಿವಿಧ ತಾಲೂಕುಗಳಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು
ಪ್ರತಿ ಗ್ರಾಮಕ್ಕು ಶುದ್ಧ ಕುಡಿಯುವ ನೀರು ದೊರಕಿಸುವ ಸದುದ್ದೇಶ ನಮ್ಮದಾಗಿದೆ, ಜಿಲ್ಲೆಯಲ್ಲಿ ಎಲ್ಲೂ ಸಹ ನೀರಿನ ಸಮಸ್ಯೆ ಕಂಡುಬರಬಾರದು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.