ಯಾದಗಿರಿ: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಆರೋಗ್ಯ ಮತ್ತು ಜೀವ ವಿಮೆ, ಸೇರಿ 14 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಪ್ರತಿಭಟನೆ ಆರಂಭವಾಗಿದೆ.
ಜಿಲ್ಲೆಯ ಗುರುಮಠಕಲ್ ನಗರದ ಕೋವಿಡ್ ಜ್ವರ ತಪಾಸಣಾ ಕೇಂದ್ರದಲ್ಲಿ ಆರೋಗ್ಯ ವೈದ್ಯಕೀಯ ಇಲಾಖೆ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಎಲ್ಲ ಹೊರ, ಒಳ ಗುತ್ತಿಗೆ ನೌಕರರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದು, ಕೊರೊನಾ ಸೈನಿಕರಿಗೆ ಪ್ರತಿಯೊಬ್ಬರೂ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದರು.
ಸಂಘದಿಂದ ಫೆಬ್ರವರಿ ತಿಂಗಳಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ಭರವಸೆ ನೀಡಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಸರ್ಕಾರ ಬದಲಾಗಿ ಯಡಿಯೂರಪ್ಪ ಸಿಎಂ ಆದ ಮೇಲೆ ನಮ್ಮ ಬೇಡಿಕೆ ಕುರಿತು ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳ ಹಂತದಲ್ಲಿ ಮಾತುಕತೆ ನಡೆದಿದ್ದು, 14 ಬೇಡಿಕೆ ಈಡೇರಿಕೆಗೆ ಭರವಸೆಯೂ ನೀಡಿದರು. ಆದರೆ ಅಷ್ಟರಲ್ಲಿಯೇ ಕೋವಿಡ್ ವೈರಸ್ ದಾಳಿಯಿಂದಾಗಿ ಬೇಡಿಕೆಗಳು ನನೆಗುದಿಗೆ ಬಿದ್ದಿವೆ ಎಂದರು.
ಕೋವಿಡ್ ತುರ್ತು ಪರಿಸ್ಥಿತಿಯಲ್ಲಿಯೂ ಬೇಡಿಕೆಗಳು ಈಡೇರಲಿಲ್ಲ. ಇದೀಗ ಬೇಡಿಕೆಗಳ ಜೊತೆಗೆ ಕೋವಿಡ್ ವಿಶೇಷ ಪ್ಯಾಕೇಜ್ ನೀಡುವುದು, ಈಗಾಗಲೇ ನೀಡಿದ ಬೋನಸ್‌ನಲ್ಲಿನ ನ್ಯೂನತೆಗಳು ಸರಿಪಡಿಸುವುದು, ಹೊರಗುತ್ತಿಗೆ ನೌಕರರಿಗೆ ಏಜೆನ್ಸಿ ಬದಲಾವಣೆ ಹೆಸರಿನಲ್ಲಿ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು, ಎನ್.ಎಚ್. ಎಂ. ಆಡಳಿತಾಧಿಕಾರಿ ಕಳೆದ 4 ವರ್ಷಗಳಿಂದ ಒಂದೇ ಜಾಗೆಯಲ್ಲಿದ್ದು, ಇವರು ನೌಕರರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಇವರನ್ನು
ಬದಲಾಯಿಸಿ ದಕ್ಷ ಅಧಿಕಾರಿ ನೇಮಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವ ಮೂಲಕ ನಿರಂತರ ಮೌನ ಪ್ರತಿಭಟನೆ ಮೂರನೇ ದಿನವಾದ ಗುರುವಾರ ಕರ್ತವ್ಯ ಪ್ರಾರಂಭಕ್ಕೂ ಮುನ್ನ 2 ನಿಮಿಷ ಹುತಾತ್ಮರಾದ ಕೊರೊನಾ ಸೈನಿಕರಿಗೆ ಶಾಂತಿ ಕೋರಿ ಮೌನಾಚರಣೆ ನಂತರ ಮೌನ ಪ್ರತಿಭಟನೆ ದಾಖಲಿಸಿ ನಂತರ ಕರ್ತವ್ಯಕ್ಕೆ ಹಾಜರಾದರು. ಜಿಲ್ಲಾ ಕಾರ್ಯದರ್ಶಿ ಡಾ. ಭಾಗರೆಡ್ಡಿ, ರಾಚಣ್ಣ ಗೌಡ, ಚಂದ್ರಶೇಖರ್ ಡಿ, ಬಸರೆಡ್ಡಿ, ಸೌಮ್ಯಾ ಬಿ, ಡಾ. ಜಯಶ್ರೀ ಇದ್ದರು.