Advertisement

ಪ್ರಾಧ್ಯಾಪಕರ ಕಾರ್ಯಭಾರದ ಬಗ್ಗೆ ತಪ್ಪು ಮಾಹಿತಿ

10:47 AM Sep 01, 2017 | |

ಬೆಂಗಳೂರು: ಪ್ರಾಧ್ಯಾಪಕರ ಕಾರ್ಯಭಾರ ವಿಚಾರದಲ್ಲಿ 107 ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ಕಾಲೇಜು ಶಿಕ್ಷಣ ಇಲಾಖೆಗೇ ತಪ್ಪು ಮಾಹಿತಿ ನೀಡಿರುವ ವಿಚಾರ ಬಹಿರಂಗಗೊಂಡಿದೆ. ಆಯಾ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಅನುಪಾತಕ್ಕಿಂತ ಹೆಚ್ಚಾಗಿದ್ದರೂ ಅದನ್ನು ಮುಚ್ಚಿಟ್ಟು ಕಡಿಮೆ ಪ್ರಾಧ್ಯಾಪಕರು ಇರುವುದಾಗಿ ಅಸ್ಪಷ್ಟ ಅಂಕಿ-ಅಂಶ ನೀಡಿ ಆ ಮೂಲಕ ಕೆಲವು ಪ್ರಾಧ್ಯಾಪಕರನ್ನು ಕೆಲಸವಿಲ್ಲದೆ ಕಾಲೇಜುಗಳಲ್ಲಿ ಉಳಿಸಿಕೊಂಡಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ.

Advertisement

ಇದರಿಂದಾಗಿ ಕೆಲವು ಕಾಲೇಜುಗಳಲ್ಲಿ ಹೆಸರಿಗೆ ಮಾತ್ರ ಪ್ರಾಧ್ಯಾಪಕರು. ಆದರೆ, ಅವರು ತರಗತಿಗಳನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ವೇತನ ಮಾತ್ರ ಇಲಾಖೆಯಿಂದ ಹೋಗುತ್ತಿತ್ತು ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರಕರಣ ನಡೆದಿರುವುದು ಅಚ್ಚರಿ ತಂದಿದ್ದು, ಪ್ರಾಧ್ಯಾಪಕರ ಕಾರ್ಯಭಾರದ ತಪ್ಪು ಮಾಹಿತಿ ನೀಡಿದ 107 ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಪ್ರಾಂಶುಪಾಲರು ತಾವು ಮಾಡಿದ ತಪ್ಪಿಗೆ ವಿವರಣೆ ನೀಡುವಂತೆ ಸೂಚಿಸಲಾಗಿದ್ದು, ತಪ್ಪಿದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.

ಹಿನ್ನೆಲೆ: ಪ್ರತಿ ವರ್ಷ ಉಪನ್ಯಾಸಕರ ವರ್ಗಾವಣೆಯ ನಂತರ ಹೆಚ್ಚುವರಿಯಾಗಿ ಉಳಿದಿರುವ ಅಥವಾ ವಿದ್ಯಾರ್ಥಿಗಳ ದಾಖಲೆಗೆ ಅನುಗುಣವಾಗಿ ಪ್ರಾಧ್ಯಾಪಕರು ಸೇವೆ ಸಲ್ಲಿಸುತ್ತಿದ್ದು, ಹೆಚ್ಚುವರಿಯಾಗಿರುವ ಪ್ರಾಧ್ಯಾಪಕರ (ಕಾರ್ಯಭಾರದ) ಮಾಹಿತಿಯನ್ನು ಇಎಂಐಎಸ್‌ ತಂತ್ರಾಂಶದ ಮೂಲಕ ಇಲಾಖೆಗೆ ಸಲ್ಲಿಸಬೇಕು. ಆ ಮಾಹಿತಿ ಪ್ರಕಾರ ಕಾರ್ಯಭಾರದ ಕೊರತೆ ಇರುವ ಕಾಲೇಜುಗಳಿಗೆ ಹೆಚ್ಚುವರಿ ಇರುವ ಉಪನ್ಯಾಸಕರನ್ನು ನಿಯೋಜಿಸಲಾಗುವುದು.  ಆದರೆ, 2016-17ನೇ ಸಾಲಿನಲ್ಲಿ ರಾಜ್ಯದ 107 ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲರು ತಮ್ಮ ಕಾಲೇಜಿನ ಉಪನ್ಯಾಸಕರ ಕಾರ್ಯಭಾರಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಸಲ್ಲಿಸಿ, ಇಲಾಖೆಯಲ್ಲಿ ಹಲವು ಗೊಂದಲ ಸೃಷ್ಟಿದ್ದಾರೆ. 

ಕಾಲೇಜಿನ ಆಡಳಿತಾತ್ಮಕ ಅಂಶಗಳನ್ನು ಸಂಪೂರ್ಣವಾಗಿ ಪ್ರಾಂಶುಪಾಲರೇ ನಿಭಾಯಿಸಬೇಕು. ಎಲ್ಲಾ ಜವಾಬ್ದಾರಿಯನ್ನು ಅವರ ಮೇಲೆ ವಹಿಸಲಾಗುತ್ತದೆ. ಉಪನ್ಯಾಸಕರ ವರ್ಗಾವಣೆ ಸಂದರ್ಭದಲ್ಲಿ ಇಎಂಎಐಎಸ್‌ ನಲ್ಲಿ ಕಾರ್ಯಭಾರ ಅಥವಾ ಬೋಧಕರ ಮಾಹಿತಿಯನ್ನು ಸ್ವಷ್ಟವಾಗಿ ನಮೂದಿಸಬೇಕು. ಆದರೆ, 107 ಕಾಲೇಜಿನ ಪ್ರಾಂಶುಪಾಲರು ಮಾಡಿರುವ ಯಡವಟ್ಟಿನಿಂದಾಗಿ ಇಲಾಖೆಯಲ್ಲಿ ಸಾಕಷ್ಟು ಗೊಂದಲ ಹಾಗೂ ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ. ಕೆಲವು ಪ್ರಾಂಶುಪಾಲರು ಹುದ್ದೆಗಳನ್ನು ಸ್ಥಳಾಂತರಗೊಳಿಸಿದ್ದು, ಕಾರ್ಯಭಾರ ಇದೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕೊರತೆ ಇರುವ ಕಡೆ ಉಪನ್ಯಾಸಕರನ್ನು ನಿಯೋಜಿಸಲು ಸಾಧ್ಯವಾಗದೆ, ಇತ್ತ ಹೆಚ್ಚುವರಿ ಕಡೆಯೂ ಅವರಿಂದ ಕೆಲಸ
ತೆಗೆಸಲು ಆಗದೆ ಪುಕ್ಕಟೆ ವೇತನ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಉದ್ಯೋಗಿಗಳಾಗಿ ಈ ರೀತಿ ತಪ್ಪು ಮಾಡಿರುವುದು ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮ 1966ರ ಸ್ಪಷ್ಟ ಉಲ್ಲಂಘನೆಯಾಗಿದೆ. ನಿಮಯ 1657ರ ಪ್ರಕಾರ ಶಿಸ್ತು ಕ್ರಮ ತೆಗೆದುಕೊಳ್ಳಲು ಇಲಾಖೆ ತೀರ್ಮಾನಿಸಿದೆ. ತಪ್ಪಿತಸ್ಥ ಪ್ರಾಂಶುಪಾಲರ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಪ್ಪು ಮಾಹಿತಿ ನೀಡಿದ ಪ್ರಮುಖ ಕಾಲೇಜುಗಳು ತಪ್ಪು ಮಾಹಿತಿ ನೀಡಿದ ಕಾಲೇಜುಗಳಲ್ಲಿ ಬೆಂಗಳೂರಿನ ಗೃಹ ವಿಜ್ಞಾನ ಕಾಲೇಜು, ಆರ್‌.ಸಿ. ವಾಣಿಜ್ಯ ಕಾಲೇಜು, ಸಿಂಧನೂರು, ಕೆ.ಆರ್‌.ಪೇಟೆ, ಮಲ್ಲೇಶ್ವರ, ಯಲಹಂಕ, ರಾಮನಗರ, ಮೈಸೂರು, ಹಾಸನ, ಕಾರವಾರ, ಪುತ್ತೂರು, ಕುಂದಾಪುರ, ಆರ್‌.ಟಿ.ನಗರ, ಶಿರಾ, ಧಾರವಾಡ, ಶಿವಮೊಗ್ಗ… ಹೀಗೆ ವಿವಿಧ ಜಿಲ್ಲೆಯ ಒಟ್ಟು 107 ಸರ್ಕಾರಿ ಪದವಿ ಕಾಲೇಜುಗಳು ಸೇರಿವೆ.

Advertisement

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next