Advertisement

ಓ ನಲ್ಲ.. ನೀನಲ್ಲ… ಕರಿಮಣಿ ಮಾಲಕ ನೀನಲ್ಲ….

02:48 PM Feb 15, 2024 | Team Udayavani |

ಅವತ್ತು ಆಫೀಸನಲ್ಲಿ ಕೆಲಸ ಏನು ಇರಲಿಲ್ಲ, ಸುಮ್ಮನೆ ಫೇಸ್‌ಬುಕ್‌ ತೆಗೆದು ರೀಲ್ಸ್‌ಗಳನ್ನು ಒಂದೊಂದಾಗಿ ಸರಿಸತೊಡಗಿದೆ. ಈ ರೀಲ್ಸ್ ಎಂಬ ಪ್ರಪಂಚದಲ್ಲಿ ಒಳ ಹೊಕ್ಕರೆ ಮುಗಿತು‌, ಹೊರಗೆ ಬರುವುದು ಅಷ್ಟು ಸುಲಭವಲ್ಲ. ಅದರಲ್ಲಿ ಒಂದು ರೀಲ್‌ ಕನೆಕ್ಟ್ ಆದಂಗೆ ಅನಿಸಿತು, ಮತ್ತೂಮ್ಮೆ ಆ ವಿಡಿಯೋ ನೋಡಿದೆ ಅದರಲ್ಲಿ ಮಚ್ಚಾ ಹೋಗಬೇಕಾದಾಗ ಒಂದ ಮಾತ್ ಹೇಳಿ ಹೋದುಳು, ಏನ ಹೇಳಿ ಹೋದುಳು ಅಂದಾಗ..  ಓ ನಲ್ಲ ನೀ ನಲ್ಲ, ಕರಿಮಣಿ ಮಾಲಕ ನೀನಲ್ಲ ಎಂಬ ಹಾಡು ಬರುತ್ತದೆ. ಇಪ್ಪತೈದು ವರ್ಷದ ಹಿಂದೆ ಗುರುಕಿರಣ್ ಸಂಯೋಜನೆ ಮಾಡಿದ ಈ ಹಾಡು 2024 ರ ಮೊದಲ ಟ್ರೆಡಿಂಗ್‌ ಆಗಿದೆ.

Advertisement

ಎಲ್ಲಿ ನೋಡಿದರೂ ಇದೇ ಹಾಡು ಈಗ ಎಲ್ಲರ ಬಾಯಲ್ಲಿ ಗುಣಗುಡುತಿದೆ, ಸ್ವತಃ ಅದರ ಸಂಗೀತ ನಿರ್ದೇಶಕರಾದ ಗುರುಕಿರಣರವರು ಕೂಡ ಮತ್ತೂಮ್ಮೆ ಆ ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಅದು ಈಗ ಟ್ರೆಂಡಿಂಗ್‌. ಕೇವಲ ಟ್ರೆಂಡಿಂಗ್‌ ಅನ್ನುವ ಕಾರಣಕ್ಕಾಗಿ ಇದನ್ನು ಬರಿಯುತ್ತಿಲ್ಲ. ಕೇವಲ ಆ ಎರಡು ಸಾಲುಗಳಲ್ಲಿ ಅನೇಕ ಜನರ ಭಾವನೆ ಅಡಗಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಯುವ ಜನತೆಯ ಬದುಕಿನಲ್ಲಿ ಬ್ರೇಕಪ್‌ ಎಂಬುದು ಮಾಮೂಲಿ ವಿಷಯವಾಗಿದೆ.

ಮಹೇಶ ಎಂಬ ಯುವಕ ಎರಡು ಮೂರು ವರ್ಷ ತನ್ನ ಕಾಲೇಜಿನ ಸಮಯದಲ್ಲಿ ಬಸ್‌ನಲ್ಲಿ ಹುಟ್ಟಿದ ಆಕರ್ಷಣೆಗೆ ತನ್ನನ್ನು ಅರ್ಪಿಸಿಕೊಂಡಿದ್ದ. ಒಂದೇ ಕಾಲೇಜು ಆದರೆ ಆತ ಸೀನಿಯರ್‌ ಅವಳು ಜ್ಯೂನಿಯರ್‌. ಇವನ ಊರಿಂದ ಹೋಗುತ್ತಿದ ಬಸ್‌ ಅವಳ ಊರಿನ ಮೇಲೆ ಹಾದು ಹೋಗುತ್ತಿತ್ತು. ತನ್ನ ಊರಿನಲ್ಲಿ ಅವಳಿಗಾಗಿ ಬಸ್‌ ಸೀಟು ಹಿಡಿದು, ಅವಳ ಊರು ಬಂದ ಮೇಲೆ ಅವಳು ಬಸ್‌ ಒಳಗೆ ಬಂದ ಮೇಲೆ ಅವಳಿಗಾಗಿ ತಾನು ಎದ್ದು ನಿಂತು ಅವಳಿಗಾಗಿ ಬಸ್ಸಿನ ಸೀಟು ಬಿಟ್ಟುಕೊಡುತ್ತಿದ್ದ. ‌

ಈ ರೀತಿಯ ಸಹಾಯಹಸ್ತ ಅನೇಕ ತಿಂಗಳು ನಡೆಯಿತು. ನಿಧಾನವಾಗಿ ಅದು ಅವರಿಬ್ಬರ ನಡುವಿನ ಪ್ರೇಮಾಂಕುರಕ್ಕೆ ನಾಂದಿ ಹಾಡಿತು. ಮಹೇಶ ತನ್ನ ಪದವಿ ಪೂರ್ಣಗೊಳಿಸಿದ, ತದನಂತರ ಮನೆಯ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ. ಈ ಸಮಯದಲ್ಲಿ ಹುಡುಗಿಯ ಪದವಿಯ ಕೊನೆ ವರ್ಷ ಅಂತಿಮ ಹಂತದಲ್ಲಿ ಇತ್ತು. ಇತ್ತ ಮಹೇಶ ಅವಳಿಗಾಗಿ ಅಂಡ್ರಾಯ್ಡ್ ಫೋನ್‌ ಕೂಡ ಕೊಡಿಸಿದ್ದ. ಅವಳು ಪದವಿ ಮುಗಿಸಿ ಮುಂದಿನ ಹಂತಕ್ಕೆ ಹೋಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಳು. ಇದು ಅವಳ ಮನೆಯವರಿಗೆ ಗೊತ್ತಾಗಿ ಮದುವೆ ಗೊತ್ತು ಮಾಡಿದರು.‌

ಮಹೇಶ ಅವರ ಮನೆಗೆ ಹೋಗಿ ಮಾತು ಕಥೆ ನಡೆಸಿದ, ಸಂಬಳ, ಕೆಲಸ ಎಂಬ ಮಾತುಗಳ ಚರ್ಚೆ ಆಯಿತು. ಈತ ಹಠಕ್ಕೆ ಬಿದ್ದು ಅವಳ ಮನೆಯವರಿಗೆ ಮನವರಿಕೆ ಮಾಡಿ ಎರಡು ವರ್ಷ ಸಮಯ ಕೇಳಿ ದುಬಾೖಗೆ ದುಡಿಯಲು ಹೋದ. ಮಹೇಶ ಮನೆಗೆ ಬಂದಾಗ ಹುಡುಗಿಯ ಕಡೆಯವರು ಆಯಿತು ಎಂಬ ಮಾತು ಕೊಟ್ಟಿದ್ದರು. ಆದರೆ ಯಾವಾಗ ಮಹೇಶ ದುಬಾೖ ಸೇರಿ ಆರು ತಿಂಗಳ ಕಳೆದವು. ಆವಾಗ ತರಾತುರಿಯಲ್ಲಿ ಮದುವೆ ಮಾಡಿಬಿಟ್ಟರು. ಐದು ದಿನದಲ್ಲಿ ನಿಶ್ಚಯವಾಗಿ, ಮದುವೆ ಆಗಿದ್ದನ್ನು ಮಹೇಶನಿಗೆ ತಡೆ ಹಿಡಿಯಲು ಅವಕಾಶವೇ ಸಿಗಲಿಲ್ಲ.

Advertisement

ಮಹೇಶ ಮರಳಿ ತನ್ನ ಊರಿಗೆ ಬಂದ. ಅವಳ ನೆನಪಿನಲ್ಲಿ ದಿನಗಳನ್ನು ಇಂದಿಗೂ ಕಳೆಯುತ್ತಿದ್ದಾನೆ. ಈ ಬಾರಿಯ ಊರಿನ ಜಾತ್ರೆಗೆ ಮಹೇಶನ ಹುಡುಗಿ ಕೂಡ ಬಂದಿದ್ದಳು. ದೂರದಲ್ಲಿ ನಿಂತು ಕೈ ಮುಗಿದು ತನ್ನ ಕೊರಳಲ್ಲಿರುವ ತಾಳಿ ತೋರಿಸಿದಳು. ಆ ಕ್ಷಣಕ್ಕೆ ಮಹೇಶನ ತಲೆಗೆ ಬಂದಿದ್ದೆ.. ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನಿನಲ್ಲ ಎಂಬ ಉಪೇಂದ್ರ ಸಿನಿಮಾದ ಹಾಡು.

ಇವತ್ತು ಆ ಹಾಡು ಮರಳಿ ಟ್ರೆಂಡ್‌ ಆಗಿದೆ. ಕೇವಲ ಮಹೇಶನಿಗೆ ಮಾತ್ರ ಈ ಹಾಡು ಕನೆಕ್ಟ್ ಆಗುತ್ತಿಲ್ಲ. ಬದಲಿಗೆ ಪ್ರೀತಿಯ ಪಯಣ ಅರ್ಧ ದಾರಿಗೆ ಮುಕ್ತಾಯವಾದ ಜನರ ಹೃದಯಕ್ಕೆ ಈ ಹಾಡು ಲಾಲಿಹಾಡು. ಆದರೆ, ಅನೇಕ ಜನರಿಗೆ ಇದು ಇಷ್ಟವಾಗಿ ಬಿಟ್ಟಿದ್ದೆ. ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೇ ಏನಿಲ್ಲ ಎಂಬ ಸಾಲುಗಳಿಂತ ಓ ನಲ್ಲ, ನೀನಲ್ಲ, ಕರಿಮಣಿ ಮಾಲಕ ನೀನಲ್ಲ ಎಂಬುದು ಈಗ ಅನೇಕರಿಗೆ ನೋವಿನ ನೆನಪುಗಳಿಗೆ ಸಿಹಿಯಾದ ಯಾತನೆ ನೀಡುತ್ತಿದೆ.

ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಿಮ್ಮ ನೆನಪುಗಳಿಗೆ ಕಿವಿಯಾಗಿ, ಈ ಸಾಲುಗಳು ಕಿವಿಯ ಬಳಿ ಪ್ರತಿಧ್ವನಿಸಬಹುದು.

ಗಿರಿಧರ ಹಿರೇಮಠ

ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next