ಕಾಪು: ಖ್ಯಾತ ಸಾಹಿತಿ, ಬರಹಗಾರ್ತಿ ಬೆಳಪು ಮಿಲಿಟರಿ ಕಾಲೊನಿ ನಿವಾಸಿ ಮಮ್ತಾಜ್ ಬೇಗಂ (73 ವ) ಅವರು ಎ. 6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದಿದ್ದ ಅವರು ಅವ್ಯಕ್ತ, ಪರದೇಶಿ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋತುಗಳೂ ನಿನಗಾಗಿ, ಅಂಕುರ ಸಹಿತ ಹಲವಾರು ಕಥೆ, ಕವನ, ಕಾದಂಬರಿ ಸಹಿತ ವಿವಿಧ ಪುಸ್ತಕಗಳನ್ನು ಬರೆದಿದ್ದರು. ಅವರು ಬರೆದಿದ್ದ ಪರದೇಶಿ ಧಾರವಾಹಿಯು ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಇದನ್ನೂ ಓದಿ:ಮನೆಗೇ ಬರಲಿದ್ದಾರೆ ಶಿಕ್ಷಕರು : ಹೊಸ ಮಾದರಿಯಲ್ಲಿ ವಿದ್ಯಾಗಮ ಜಾರಿ
ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿನ ಸಾಧನೆಗಾಗಿ ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವ ಸಾಹಿತ್ಯ ಕಲಾವೇದಿಕೆಯ ಬಸವ ಜ್ಯೋತಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು.
ಗುಜರಾತ್ ನಲ್ಲಿ ವೈದ್ಯೆಯಾಗಿರುವ ಮಗಳ ಜೊತೆಗಿದ್ದ ಅವರು, ತಾನೇ ಬರೆದ ಸೂರ್ಯಾಸ್ತ ಪುಸ್ತಕದ ಬಿಡುಗಡೆಗಾಗಿ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಕೋವಿಡ್ ಪಾಸಿಟಿವ್ ಗೆ ಸಿಲುಕಿ, ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ನೀರಿನ ಬವಣೆ ನೀಗಿಸಲು ಪೊಸ್ರಾಲು ಬಳಿ ತೆರೆದ ಬಾವಿ
ಮುಮ್ತಾಜ್ ಬೇಗಂ ಅವರ ನಿಧನಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಹಿತ ಕಲೆ, ಸಾಹಿತ್ಯ ಮತ್ತು ಬರಹ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.