ಬೆಳಗಾವಿ: ನಾನು ಹಾಗೂ ನನ್ನ ಪತ್ನಿ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಆದಷ್ಟು ಬೇಗ ಇಬ್ಬರೂ ಒಂದಾಗಿ ಜನರ ಮುಂದೆ ಬರುತ್ತೇವೆ ಎಂದು ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸಾರ ಎಂದ ಮೇಲೆ ಸಣ್ಣಪುಟ್ಟ ಮನಸ್ತಾಪ ಇದ್ದೇ ಇರುತ್ತವೆ. ಆದರೆ ಪರಸ್ಪರ ಅರ್ಥಮಾಡಿಕೊಂಡು ಹೋದಮೇಲೆ ಎಲ್ಲವೂ ಸರಿಹೋಗುತ್ತದೆ. ಅದೇರೀತಿ ನಮ್ಮ ಸಮಸ್ಯೆಯೂ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಮದುವೆಯಾಗಿ 15 ವರ್ಷವಾಗಿದೆ. ಯಾವತ್ತೂ ನಮ್ಮಲ್ಲಿ ಸಮಸ್ಯೆ ಬಂದಿಲ್ಲ. ಆದರೆ ಕಳೆದ ವರ್ಷ ನಮ್ಮ ಅತ್ತೆಯವರ ಅಪೇಕ್ಷೆ ಮೇರೆಗೆ ಮನೆಗೆ ಅಡಿಗೆಯವರಾಗಿ ಬಂದ ಗಂಗಾ ಕುಲಕರ್ಣಿ ಅವರಿಂದ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿದೆ. ಯಾರದೋ ಮಾತು ಕೇಳಿ ನನ್ನ ಪತ್ನಿ ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ. ನನಗೆ ಅವರ ಆಸ್ತಿಯ ಮೇಲೆ ಯಾವ ಆಸೆಯೂ ಇಲ್ಲ ಎಂದರು.
ಇದನ್ನೂ ಓದಿ:ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು
ಗಂಗಾ ಕುಲಕರ್ಣಿ ಹಾಗೂ ಅವರ ಪರಿಚಿತ ಬಾಗಲಕೋಟೆ ಜಿಲ್ಲೆಯ ಶಿವಾನಂದ ವಾಲಿ ಅವರ ವಂಚನೆಗೆ ಬಲಿಯಾದ ಪತ್ನಿ ಅಶ್ವಿನಿ ಹಾಗೂ ಅತ್ತೆ ಮಾವರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಯಾವುದೇ ಸಂಬಂಧವಿಲ್ಲದ ಶಿವಾನಂದ ವಾಲಿ ಖಾತೆಗೆ ಸುಮಾರು 24 ಲಕ್ಷ ಹಣ ಹಾಗೂ ಆಸ್ತಿ ವರ್ಗಾವಣೆ ಆಗಿದೆ ಎಂದು ಕೆ ಕಲ್ಯಾಣ್ ಮಾಹಿತಿ ನೀಡಿದರು.
ನನಗೆ ಶಿವಾನಂದ ವಾಲಿ ಯಾರು ಎಂಬುದು ಇದುವರೆಗೆ ಗೊತ್ತಿಲ್ಲ. ನಾನು ಅವನ ಮುಖವನ್ನೂ ನೋಡಿಲ್ಲ. ಆದರೆ ಈ ವ್ಯಕ್ತಿಯಿಂದ ನನ್ನ ಪತ್ನಿ ಹಾಗೂ ಅತ್ತೆ ಮತ್ತು ಮಾವ ಮೋಸ ಹೋಗಿದ್ದಾರೆ ಎಂದರು.
ಒಂದು ದಿನ ನನ್ನ ಅತ್ತೆ ಮನೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಮಧ್ಯರಾತ್ರಿ 1 ಗಂಟೆಗೆ ಪೂಜೆ ಮಾಡುತ್ತಿದ್ದರು. ಇದರ ಬಗ್ಗೆ ಕೇಳಿದಾಗ ಅಂತಹ ವಿಶೇಷ ಏನಿಲ್ಲ ಎಂದಿದ್ದರು. ಇದಾದ ಕೆಲ ದಿನಗಳ ಬಳಿಕ 2020ರ ಜ.9ರಂದು ಊರಿಗೆ ಹೋಗುತ್ತೇನೆಂದು ಪತ್ನಿ. ಅತ್ತೆ ಹಾಗೂ ಮಾವ ಎಲ್ಲರೂ ಬೆಳಗಾವಿ ಗೆ ಹೋದರು. ನಂತರ ಜ.10ರಂದು ಪತ್ನಿಯ ನಂಬರ್ ಸ್ವಿಚ್ ಆಫ್ ಆಗಿತ್ತು. ಜ.17ರಂದು ನಾನು ಕೂಡ ಬೆಳಗಾವಿಗೆ ಬಂದೆ. ಆ ವೇಳೆ ಒಂದಿಷ್ಟು ನಿಂಬೆಹಣ್ಣು ಇಟ್ಟುಕೊಂಡು ನಮ್ಮ ಅತ್ತೆ ಪೂಜೆ ಮಾಡುತ್ತಿದ್ದರು ಎಂದು ಗೊತ್ತಾಯಿತು. ಆಗ ತಂದೆ-ತಾಯಿ ಜತೆ ಪತ್ನಿ ಬೇರೆ ಮನೆಗೆ ಶಿಫ್ಟ್ ಆಗಿದ್ದರು.
ತಿಲಕವಾಡಿಯಲ್ಲಿ ಪೋಷಕರ ಜತೆ ನನ್ನ ಪತ್ನಿ ಇದ್ದಳು.ಈ ವೇಳೆ ಶಿವಾನಂದ ವಾಲಿ ಹಾಗೂ ಗಂಗಾ ಕುಲಕರ್ಣಿ ಜತೆ ಪತ್ನಿಯ ಪಾಲಕರು ಸಂಪರ್ಕದಲ್ಲಿದ್ದರು. ಸ್ವಲ್ಪ ದಿನದ ಬಳಿಕ ನನ್ನ ಪತ್ನಿಯ ತಾಳಿ ಮತ್ತು ಕಾಲುಂಗುರ ಕಾಣಲಿಲ್ಲ. ನಾನು ಕೇಳಿದ್ದಕ್ಕೆ ಅವು ಇದ್ದರೆ ಮಾತ್ರಕ್ಕೆ ಗಂಡ-ಹೆಂಡತಿನಾ? ಎಂದು ಪ್ರಶ್ನಿಸಿದ್ದರು. ಆಮೇಲೆ ನಿಧಾನವಾಗಿ ಅವರ ವರ್ತನೆಯೂ ಬದಲಾಯಿತು. ನನ್ನನ್ನು ಅಪರಿಚಿತರಂತೆ ನನ್ನ ಪತ್ನಿ ನೋಡುತ್ತಿದ್ದಳು ಎಂದು ಕೆ ಕಲ್ಯಾಣ್ ಹೇಳಿದರು.
ಇದನ್ನೂ ಓದಿ:ದೀಪಿಕಾ, ಶೃದ್ಧಾ, ಸಾರಾ ವಿಚಾರಣೆ ನಡೆಸಿದ್ದ ಎನ್ ಸಿಬಿ ಅಧಿಕಾರಿಗೆ ಕೋವಿಡ್ ಸೋಂಕು ದೃಢ
ಇದಾದ ಕೆಲ ದಿನಗಳ ಬಳಿಕ ನನ್ನ ಪತ್ನಿ ಖಾತೆಯಿಂದ 1 ಲಕ್ಷದ 70 ಸಾವಿರ ಹಣ ಶಿವಾನಂದ ವಾಲಿ ಅವರ ಅಕೌಂಟ್ಗೆ ವರ್ಗಾವಣೆಯಾಗಿದೆ. ನನ್ನ ಅತ್ತೆ-ಮಾವನ ಹೆಸರಿನ ಆಸ್ತಿಯೂ ಶಿವಾನಂದ ವಾಲಿ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಾಗಿ ಕಾನೂನು ತಜ್ಞರ ಜತೆ ಚರ್ಚಿಸಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ನನ್ನ ಅತ್ತೆ, ಮಾವ, ಪತ್ನಿ ಕಾಣಿಸುತ್ತಿಲ್ಲ ಮತ್ತು ಅಪರಿಚಿತ ವ್ಯಕ್ತಿಯ ಖಾತೆ ಹಣ ವರ್ಗಾವಣೆಯಾಗಿದೆ ಎಂದು ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದರು.
ಕೇವಲ 8-10 ತಿಂಗಳಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದಿದೆ. ಅವರ ಆಸ್ತಿ ನನಗೆ ಮುಖ್ಯವಲ್ಲ. ನನ್ನ ಅತ್ತೆ, ಮಾವ ಮತ್ತು ಪತ್ನಿಯ ಯೋಗಕ್ಷೇಮ ಮುಖ್ಯ. ದೂರು ನೀಡಿದ ಬಳಿಕ ಶಿವಾನಂದ ವಾಲಿ ಸಿಕ್ಕಿದರು. ಇದಾದ ಬಳಿಕ ನನ್ನ ಪತ್ನಿಯಿಂದ ನನ್ನ ವಿರುದ್ಧವೇ ಆರೋಪ ಮಾಡಿಸಲಾಗಿದೆ. ಶಿವಾನಂದ ವಾಲಿ ಅರೆಸ್ಟ್ ಆಗುವವರೆಗೂ ಆರೋಪ ಇರಲಿಲ್ಲ. ಬಂಧನದ ಬಳಿಕ ಆರೋಪ ಮಾಡಿದ್ದಾರೆ ಎಂದು ಕೆ ಕಲ್ಯಾಣ್ ವಿವರಿಸಿದರು.