ಬೆಂಗಳೂರು: ಆದಾಯ ಪ್ರಮಾಣ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ, ಸರ್ಕಾರದಿಂದ ಅನುದಾನ ಪಡೆಯದ ಶಿಕ್ಷಣ ಸಂಸ್ಥೆಗಳಿಂದ ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಿಸುವ ಮೂಲಕ ಬರೆ ಎಳೆಯಲು ಮುಂದಾಗಿದೆ.
ಅಂಗೀಕೃತ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಕೆಎಂಸಿ ಕಾಯ್ದೆಯ ಸೆಕ್ಷನ್ 110ರ ತಿದ್ದುಪಡಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವ ಪಾಲಿಕೆ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ.
ಈ ಹಿಂದೆ ಸರ್ಕಾರದಿಂದ ಅನುದಾನ ಪಡೆಯದ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ.25ರಷ್ಟು ತೆರಿಗೆ ವಿನಾಯಿತಿ ನೀಡಲಾಗಿತ್ತು. ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದ ತೆರಿಗೆ ಪಾವತಿಸಬೇಕಾಗುತ್ತದೆ. ಇದರೊಂದಿಗೆ ವಿನಾಯಿತಿ ಪಡೆದು ತೆರಿಗೆ ಪಾವತಿಸದ ಶಿಕ್ಷಣ ಸಂಸ್ಥೆಗಳಿಂದಲೂ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸಲು ಪಾಲಿಕೆ ನಿರ್ಧರಿಸಿದೆ.
ಅದೇ ರೀತಿ ಕಂದಾಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಜಾಗೃತ ದಳ ಕಾರ್ಯನಿರ್ವಹಿಸಲಿದ್ದು, ಪಾಲಿಕೆಯಿಂದ ಈಗಾಗಲೇ ಟೋಟಲ್ ಸ್ಟೇಷನ್ ಸರ್ವೆ ಪೂರ್ಣಗೊಳಿಸಿರುವ ಬಹುಮಹಡಿ ಕಟ್ಟಡಗಳು, ಮಾಲ್‌ಗಳು, ಟೆಕ್‌ಪಾರ್ಕ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ 400 ಕೋಟಿ ರೂ. ಸಂಗ್ರಹಿಸಲು ಯೋಜನೆ ರೂಪಿಸಿದೆ. ಜತೆಗೆ ಪ್ರಸಕ್ತ ಸಾಲಿನಲ್ಲಿ 100 ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸುವುದಾಗಿ ಬಜೆಟ್‌ನಲ್ಲಿ ಉಲ್ಲೇಖೀಸಿದೆ.
ಪಾಲಿಕೆಯಲ್ಲಿ 2007-08ನೇ ಸಾಲಿನಲ್ಲಿ ಈವರೆಗೆ ಸರ್ಕಾರ ಸಂಗ್ರಹಿಸಿರುವ ಮುದ್ರಾಂಕ ಶುಲ್ಕದಲ್ಲಿ ಶೇ.2ರಷ್ಟು ಅಂದರೆ 500 ಕೋಟಿ ರೂ. ಸೆಸ್ ರೂಪದಲ್ಲಿ ಪಾಲಿಕೆಗೆ ಬರಬೇಕಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ಮೊದಲ ಹಂತವಾಗಿ 100 ಕೋಟಿ ರೂ. ಸರ್ಕಾರದಿಂದ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಯಡಿ ನಿರ್ಮಿಸಿದ ಬಸ್ ನಿಲ್ದಾಣಗಳು, ಪಾದಚಾರಿ ಸುರಂಗ ಮಾರ್ಗಗಳು, ಶೌಚಾಲಯಗಳಲ್ಲಿ ಅಳವಡಿಸಿರುವ ಫಲಕಗಳಿಂದ ಜಾಹೀರಾತು ಶುಲ್ಕ ಬಾಕಿಯಿದ್ದು, ಈ ಸಾಲಿನಲ್ಲಿ 41.95 ಕೋಟಿ ರೂ. ಸಂಗ್ರಹಿಸಲಾಗುವುದು.
ಹೊಸ ವಲಯಗಳಲ್ಲಿ ಭೂ ಪರಿವರ್ತನೆ ಆಗಿರುವ ಆಸ್ತಿಗಳಿಂದ ಸುಧಾರಣಾ ಶುಲ್ಕ ರೂಪದಲ್ಲಿ 400 ಕೋಟಿ ರೂ., ಕೇಂದ್ರ ಹಾಗೂ ಸರ್ಕಾರ ಕಟ್ಟಡಗಳಿಂದ 75 ಕೋಟಿ ರೂ. ಸೇವಾ ಶುಲ್ಕ, ಮೊಬೈಲ್ ಟವರ್‌ನಿಂದ 50 ಕೋಟಿ ರೂ., ಒಎಫ್ಸಿ ವಿಭಾಗದಿಂದ 175 ಕೋಟಿ ರೂ., ನಗರ ಯೋಜನೆ ವಿಭಾಗದಿಂದ 841 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ.