ತುಟಿಯಂಚಿಗೆ ಜಾರಿ ಅಲ್ಲೇ ನಿಂತ ಕಪ್ಪು ಮಚ್ಚೆ, ಕೆಂಪು ರಂಗಿನ ನಡುವೆ ದೃಷ್ಟಿ ಬೊಟ್ಟಿನಂಥ ಅದರ ಚೆಲುವು, ಕೂದಲು ಒಂದರೊಳಗೊಂದು ಹೆಣೆದುಕೊಂಡು ಮೂಗುತಿಯ ಚೆಲುವನ್ನು ಕದ್ದು ನೋಡುವ ಆತುರಕ್ಕೆ ಮತ್ತೆ ಬಾಗುವ ಸೊಬಗು, ಎರಡು ಹುಬ್ಬುಗಳ ಮಧ್ಯೆ ತನ್ನ ಪಾಡಿಗೆ ಮೆಲ್ಲಗೆ ನಗುವ ಕೆಂಪು ಬಿಂದಿ, ನನ್ನದೇ ಕಲೆ ಕೂರಿಸಿಕೊಂಡ ಕಣ್ಣಿನಲ್ಲಿ ನೀ ಕದ್ದು ನೋಡುವ ಪ್ರಯತ್ನಕ್ಕೆ ಒಲವಿನ ಅಂಗಡಿಯಲ್ಲಿದ್ದ ನನ್ನ ಮನಸ್ಸು ಸೇಲಾಯಿತು!
ಕೊಳ್ಳಲು ಬಂದವಳು ಇವೆಲ್ಲವನ್ನೂ ಮುಂದಿಟ್ಟುಕೊಂಡು ಸುಮ್ಮನೆ ಕೂತರೆ ಹೇಗೆ? “ಲೇ ಪೆದ್ದ, ಇವೆಲ್ಲವನ್ನೂ ಮುಂದಿಟ್ಟ ಮೇಲೆ ಇನ್ನೇನೋ ವ್ಯಾಪಾರದ ಮಾತು? ಅರ್ಜೆಂಟಾಗಿ ಎರಡೂ ಹೃದಯಗಳನ್ನು ಸಕ್ರಮಗೊಳಿಸಿ ಒಂದು ಮಾಡಬೇಕಾಗಿದೆ. ಇಬ್ಬರಿಂದ ಸೇರಿ ಒಂದೇ ಹೃದಯ ಸಾಕು’ ಅನ್ನುವ ನಿನ್ನ ಕಣ್ಣೊಳಗಿನ ಗ್ರಾಮರ್ ಅನ್ನು ನಾನು ಓದಲೇ ಇಲ್ಲ! ಅಷ್ಟಕ್ಕೂ ನಿನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಾದರೂ ನನಗೆ ಎಲ್ಲಿತ್ತು? ನೋಡುವ ಆಸೆಯಿದ್ದರೂ, ಗೆಲ್ಲುವ ಆಸೆಯಿದ್ದರೂ ಅಡ್ನಾಡಿ ಭಯವೊಂದು ಬೆನ್ನಿಗೆ ಬಿದ್ದು ಕಾಡುತ್ತಿತ್ತು ನೋಡು. ಅವತ್ತು ನಿನ್ನ ಕಣ್ಣಿನ ಭಾಷೆಯನ್ನು ಓದಿಕೊಂಡಿದ್ದರೆ ಇವತ್ತಿಗೆ ನಮ್ಮ ಬದುಕಿಗೊಂದು ಮಹಾಕಾವ್ಯ ಬರೆಯಬಹುದಿತ್ತು!
ಕಾಲದ ಹರವು ಎಲ್ಲವನ್ನೂ ತೊಳೆದು ಹಾಕಿತು. ಊರಿನ ನಿನ್ನ ಹಾದಿಯಿಂದ ನೀನು ಮರೆಯಾದೆ, ಕಾಲೇಜು ಮುಗಿಸಿ ನಾನು ಅಲ್ಲಿಂದ ಹೊರಟುಹೋದೆ. ದೂರ ಅನ್ನುವುದು ಎಲ್ಲವನ್ನೂ ದೂರ ಮಾಡುತ್ತಾ? ದೂರ ಮತ್ತು ಕಾಲ ಸೇರಿಕೊಂಡರೆ ಎಲ್ಲವನ್ನೂ ಮುಚ್ಚಿ ಹಾಕಿ “ಇಲ್ಲೇನೂ ಇರಲೇ ಇಲ್ಲ ಬಿಡು’ ಅನ್ನುವಂತೆ ಮಾಡುತ್ತವೆ. ಆದರೆ ಅವಕ್ಕೆ ಸವಾಲೆಸೆದು ನಿನ್ನನ್ನು ನನ್ನಲ್ಲೇ ಉಳಿಸಿಕೊಂಡೆ. “ನೀ ಇಷ್ಟ ಕಣೇ’ ಅಂತ ಹೇಳದಿದ್ದರೂ, ನೀನೇ ನನ್ನ ಪ್ರಾಣ ಅನ್ನುವಂತೆ ಬದುಕಿದೆ. ನನ್ನ ಕಣ್ಣೊಳಗಿನ ನಿನ್ನ ರೂಪು ನಿನಗೆ ಕಾಣಿಸುತ್ತದೆ ಅಂದುಕೊಂಡಿದ್ದೆ. ನಿನಗೂ ನನಗಿದ್ದಂಥ ದಿಗಿಲೇ ಇತ್ತಾ? ಗೊತ್ತಿಲ್ಲ. ಅಪರೂಪಕ್ಕೆ ಸಿಕ್ಕ ಗೆಳೆಯ, ನಿನ್ನ ಮದುವೆಗೆ ಹೋಗಿದ್ದೆ ಅಂತ ಹೇಳಿದ್ದು ನನ್ನ ಪಾಲಿನ ಅತ್ಯಂತ ಅರಗಿಸಿಕೊಳ್ಳಲಾಗದ ವಾಕ್ಯ. ಕಣ್ಣಿನಲ್ಲಿ ಇಷ್ಟದ ಗ್ರಾಮರ್ ಇಟ್ಟುಕೊಂಡು ತಿರುಗುತ್ತಿದ್ದವಳು ಅಷ್ಟು ಬೇಗ ಡಿಲೀಟ… ಮಾಡಿಕೊಂಡು ಹೊಸ ಎಬಿಸಿಡಿ ಬರೆದುಕೊಂಡಿದ್ಹೇಗೆ? ಎಂಬುದು ಅರ್ಥವಾಗಲಿಲ್ಲ. ಇದೆಲ್ಲವೂ ನನ್ನದೇ ತಪ್ಪಾ? ಕನಿಷ್ಠ ಗ್ರಾಮರ್ ಕಲಿಯದ ನಾನು ಮಹಾಕಾವ್ಯ ಬರೆಯಲು ಹೇಗೆ ಸಾಧ್ಯ ಅಂದುಕೊಂಡೆಯೋ, ಹೇಗೆ? ಅದ್ಯಾವುದೊ ಸಂಕಟ, ಹೊಟ್ಟೆಕಿಚ್ಚು, ಅಯ್ಯೋ.. ಇತ್ಯಾದಿಗಳು ನನ್ನ ಬಳಿ ಸುಳಿಯಲೇ ಇಲ್ಲ ನೋಡು. ಅವನ ಬಳಿ ಅವಳು ಚೆನ್ನಾಗಿರಲಿ ಮಗಾ ಅಂದಷ್ಟೇ ಹೇಳಿ ಕಳುಹಿಸಿದೆ.
ಇದೆಲ್ಲವನ್ನು ಬರೆದು ನಿನ್ನ ಕೈಗಿಟ್ಟು ಒಮ್ಮೆ ನಿರಮ್ಮಳವಾಗಿ ಬಿಡಬೇಕು ಅಂದುಕೊಂಡೆ. ಹಾಗೆ ಅಂದುಕೊಂಡೇ ಬರೆದೆ. ಕೊಡಲು ಯಾಕೋ ಮತ್ತದೇ ಭಯ ಸುತ್ತಿಕೊಳ್ಳತ್ತಿದೆ. ಈಗ ನೀನೊಂದು ನಿಶ್ಚಲವಾದ ಕಲ್ಯಾಣಿಯ ನೀರು. ಪತ್ರ ನೀಡಿ ಕೊಳಕ್ಕೆ ಕಲ್ಲು ಎಸೆಯಲಾ? ಬರೆದ ಪತ್ರ ಅಂಗೈ ಬೆವರಿನಲ್ಲಿ ಪ್ರಾಣ ಬಿಡುತ್ತಿದೆ. ದಾರಿಯಲ್ಲಿ ಅದೆಲ್ಲಿ ನಿಲ್ದಾಣವಿದೆಯೋ ನಾ ಅರಿಯೆ. ತೇರಿಗೆ ಬಂದಾಗ, ಕೇರಿಯ ಹಾದಿ ತುಳಿದಾಗ ನಿನಗೆ ನನ್ನ ನೆನಪಾದರೆ ಸಾಕು. ನನ್ನ ಕಣ್ಣೊಳಗೆ ನಿನ್ನ ರೂಪ ಕುಣಿಯುತ್ತದೆ. ಸಾಕು ಈ ಜನ್ಮಕಿಷ್ಟು!
ಸದಾಶಿವ್ ಸೊರಟೂರು