Advertisement

ನಗರಸಭೆ ಕುರ್ಚಿಗಾಗಿ ಕೈ-ಕಮಲ ಕುಸ್ತಿ

12:50 PM Mar 26, 2022 | Team Udayavani |

ರಾಯಚೂರು: ನಗರಸಭೆಯ ಉಳಿದ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ಮತ್ತೂಮ್ಮೆ ರಾಜಕೀಯ ಪ್ರಹಸನಕ್ಕಿಳಿದಿವೆ. ಬಿಜೆಪಿ ತನ್ನ ಸದಸ್ಯರನ್ನು ಹಿಡಿದಿಡುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದರೆ, ಕಾಂಗ್ರೆಸ್‌ ಕೂಡ ತನಗಿರುವ ಸದಸ್ಯ ಬಲದಿಂದ ಅಧಿಕಾರ ಪಡೆಯುವ ತಂತ್ರಗಾರಿಕೆಯಲ್ಲಿದೆ.

Advertisement

ಕೇವಲ ಮೂರು ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಕೂಡ ಈ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ, ಜೆಡಿಎಸ್‌ ಸದಸ್ಯರು ಪಕ್ಷವನ್ನು ಲೆಕ್ಕಿಸದೆ ಬಿಜೆಪಿ ಸದಸ್ಯರೊಟ್ಟಿಗೆ ಗುರುತಿಸಿಕೊಂಡು ಪ್ರವಾಸ ಹೋಗಿದ್ದಾರೆ. ಈ ಕಾರಣಕ್ಕೆ ಪಕ್ಷದಿಂದ ವಿಪ್‌ ಜಾರಿ ಮಾಡಲಾಗಿದೆ.

ಆ ಮೂಲಕ ಜೆಡಿಎಸ್‌ ಸದಸ್ಯರ ಬೆಂಬಲ ಯಾರಿಗೆ ಎಂಬ ಲೆಕ್ಕಾಚಾರ ಶುರುವಾಗಿದೆ. ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ 12 ಬಿಜೆಪಿ ಸದಸ್ಯರಿದ್ದರೆ, 11 ಕಾಂಗ್ರೆಸ್‌ ಸದಸ್ಯರಿದ್ದಾರೆ. 9 ಪಕ್ಷೇತರ ಸದಸ್ಯರಿದ್ದಾರೆ. ಉಳಿದ ಮೂವರು ಜೆಡಿಎಸ್‌ ನಿಂದ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನ ಸದಸ್ಯ ಈ.ವಿನಯಕುಮಾರ್‌ ಕಾಂಗ್ರೆಸ್‌ ಮಾತ್ರವಲ್ಲದೇ ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಆದರೆ, ಅವರ ವಿರುದ್ಧ ಅವಿಶ್ವಾಸ ಮಂಡನೆಯಾಗಿದ್ದು, ಮಾ.30ರಂದು ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ ಬಿಜೆಪಿ ಇಬ್ಬರಲ್ಲೂ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಲ್ಲಿ ಲಲಿತಾ ಕಡಗೋಲು ಆಂಜನೇಯ ಅವರ ಹೆಸರು ಕೇಳಿ ಬರುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಸಾಜಿದ್‌ ಸಮೀರ್‌ ಹೆಸರು ಮುಂಚೂಣಿಯಲ್ಲಿದೆ. ಅಧಿಕಾರ ಹಿಡಿಯಲು 18 ಸದಸ್ಯ ಬಲದ ಅಗತ್ಯವಿದ್ದು, ಬಿಜೆಪಿಗೆ ಜೆಡಿಎಸ್‌ ಸದಸ್ಯರ ಜತೆಗೆ ಇನ್ನೂ ಮೂವರ ಬೆಂಬಲವೂ ಬೇಕಿದೆ.

Advertisement

ನಗರ ಶಾಸಕರು, ಸಂಸದರು ಕೂಡ ಹಕ್ಕು ಚಲಾಯಿಸಬಹುದಾಗಿದೆ. ಅದೇ ಕಾರಣಕ್ಕೆ ಈಚೆಗೆ ವಿಧಾನ ಪರಿಷತ್‌ಗೆ ಆಯ್ಕೆಯಾದ ಶರಣಗೌಡ ಬಯ್ನಾಪುರ ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಉದ್ದೇಶದಿಂದ ಲಿಂಗಸೂಗೂರಿನಿಂದ ರಾಯಚೂರಿಗೆ ವಿಳಾಸ ಬದಲಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಅವರ ಹಕ್ಕು ಚಲಾವಣೆಗೆ ಅವಕಾಶ ನೀಡದಂತೆ ಒತ್ತಾಯಿಸಿದೆ.

ಅವರು ಮತದಾನದ ಹಕ್ಕು ಕೇಳಿರುವುದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಇನ್ನೂ ಒಂಭತ್ತು ಜನ ಪಕ್ಷೇತರರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿದ್ದು, ಅವರು ಮತ್ತೆ ಕಾಂಗ್ರೆಸ್‌ನಲ್ಲಿಯೇ ಗುರುತಿಸಿಕೊಂಡಿದ್ದಾರೆ. ಆದರೆ, ಯಾವುದೇ ಚಿಹ್ನೆಯಡಿ ಗೆಲುವು ಸಾಧಿಸದ ಕಾರಣ ಅವರು ಯಾರಿಗಾದರೂ ಬೆಂಬಲ ನೀಡಬಹುದು. ಒಂದು ವೇಳೆ ಪಕ್ಷೇತರರಲ್ಲಿ ಕೆಲವರು ಬಿಜೆಪಿಯತ್ತ ವಾಲಿದರೂ ಅಧಿಕಾರ ಕಾಂಗ್ರೆಸ್‌ ಕೈ ತಪ್ಪಲಿದೆ.

ಶಾಸಕ ಡಾ| ಪಾಟೀಲ್‌ ಮುಂದಾಳತ್ವ

ಆಡಳಿತದಲ್ಲಿ ನಗರ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಚೆಗೆ ಅಧಿಕಾರದಿಂದ ಕೆಳಗಿಳಿದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್‌ ದೂರಿದ್ದರು. ಆದರೆ, ಈಗ ಪ್ರವಾಸ ಹೋಗಿರುವ ಬಿಜೆಪಿ-ಜೆಡಿಎಸ್‌ ಸದಸ್ಯರ ತಂಡದ ಮುಂದಾಳತ್ವವನ್ನು ಶಾಸಕರೇ ವಹಿಸಿಕೊಳ್ಳುವ ಮೂಲಕ ತಮ್ಮ ಪ್ರಾಬಲ್ಯ ಇರುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆಂಧ್ರದ ವಿಜಯವಾಡದಲ್ಲಿ ನಗರಸಭೆ ಸದಸ್ಯರ ಜತೆ ಶಾಸಕರು ಕೂಡ ಇರುವ ಫೋಟೋಗಳು ಹರಿದಾಡುತ್ತಿವೆ. ನಗರಸಭೆಯಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸುವ ನಿಟ್ಟಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಶಾಸಕರೇ ಜವಾಬ್ದಾರಿ ಹೊತ್ತಿರುವಂತೆ ಕಾಣಿಸುತ್ತದೆ.

ಮನೆಗಳಿಗೆ ನೋಟಿಸ್‌ !

ಕೇವಲ ಮೂರು ಸ್ಥಾನ ಪಡೆದ ಜೆಡಿಎಸ್‌ ನಿರ್ಣಾಯಕ ಸ್ಥಾನದಲ್ಲಿದೆ. ಜೆಡಿಎಸ್‌ ಸದಸ್ಯರು ಪಕ್ಷದ ಗಮನಕ್ಕೆ ತಾರದೆ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪಕ್ಷದಿಂದ ಅವರಿಗೆ ವಿಪ್‌ ಜಾರಿ ಮಾಡಲಾಗಿದೆ. ನಾವು ಯಾರಿಗೆ ಬೆಂಬಲ ನೀಡಿ ಎಂದು ಹೇಳುತ್ತೇವೆಯೋ ಅವರಿಗೆ ಮತ ನೀಡಬೇಕು. ಇಲ್ಲವಾದರೆ ಸದಸ್ಯತ್ವ ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿ ಸದಸ್ಯರ ಮನೆಗಳಿಗೆ ನೋಟಿಸ್‌ ಅಂಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next