ಧಾರವಾಡ: ಬಲಿಷ್ಠ ದೇಹ, ಉತ್ಕೃಷ್ಠ ಬುದ್ಧಿ ಬೆಳೆಸಲು ಊರಿಗೊಂದು ಗರಡಿ, ಮನೆಗೊಬ್ಬ ಪೈಲ್ವಾನ್ ಇರಬೇಕು. ಇಂತಹ ಧ್ಯೇಯ ಅನುಷ್ಠಾನಕ್ಕೆ ಪೂರಕವಾಗಿ ದೇಶಿ ಕ್ರೀಡೆ ಕುಸ್ತಿಯನ್ನು ಪ್ರೋತ್ಸಾಹಿಸುವ ಸರ್ಕಾರದ ಕುಸ್ತಿ ಹಬ್ಬಕ್ಕೆ ಈ ವರ್ಷ ಕುತ್ತು ಬಂದಿದ್ದು, 2020-21ರ ಬಜೆಟ್ ಅನ್ವಯ ನಡೆಯುವ ಈ ವರ್ಷದ ಕುಸ್ತಿ ಹಬ್ಬ ಹೆಚ್ಚು ಕಡಿಮೆ ರದ್ದಾದಂತಾಗಿದೆ.
ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದ ಬಡವರ ಆರೋಗ್ಯ ವೃದ್ಧಿಗೆ ಒತ್ತಾಸೆಯಾಗಿ ನಿಂತ ಗರಡಿ ಕುಸ್ತಿ ಆಧುನಿಕತೆ ಪ್ರಭಾವಕ್ಕೆ ಒಳಗಾಗಿ ಮೊದಲೇ ನಶಿಸಿ ಹೋಗುತ್ತಿದೆ. ಇಂತಹ ದೇಶಿ ಕುಸ್ತಿ ಉಳಿಸಿ ಬೆಳೆಸುವುದಕ್ಕಾಗಿಯೇ ರಾಜ್ಯ ಸರ್ಕಾರ ಪ್ರತಿ ವರ್ಷ ಕುಸ್ತಿ ಹಬ್ಬ ಹಮ್ಮಿಕೊಳ್ಳುತ್ತಿದೆ. 2019ರಲ್ಲಿ ಬೆಳಗಾವಿಯಲ್ಲಿ ರಾಜ್ಯದ ಮೊದಲ ಕುಸ್ತಿ ಹಬ್ಬ ನಡೆದರೆ, 2020ರಲ್ಲಿ ಧಾರವಾಡದಲ್ಲಿ 2ನೇ ಕುಸ್ತಿ ಹಬ್ಬ ಯಶಸ್ವಿಯಾಗಿ ನಡೆದು 1176ಕ್ಕೂ ಹೆಚ್ಚು ಪೈಲ್ವಾನರು ಭಾಗಿಯಾಗಿದ್ದರು. ಆದರೆ 2021ರಲ್ಲಿ ಇಷ್ಟೊತ್ತಿಗಲೇ ನಡೆಯಬೇಕಿದ್ದ ಕುಸ್ತಿ ಹಬ್ಬದ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ.
ಕುಸ್ತಿ ಹಬ್ಬ ಮಾಡುವಂತೆ ಹಿರಿಯ ಪೈಲ್ವಾನರು, ಉಸ್ತಾದರು ಸರ್ಕಾರಕ್ಕೆ ಮನವಿ ಕೊಟ್ಟರೂ ಕ್ಯಾರೇ ಎನ್ನುತ್ತಿಲ್ಲ. ಪ್ರತಿ ವರ್ಷ ಕ್ರೀಡಾ ಇಲಾಖೆ ವ್ಯಾಪ್ತಿಯ ನಿರಂತರ ಬಜೆಟ್ ಅನುದಾನ 2 ಕೋಟಿ ರೂ. ಗಳ ವೆಚ್ಚದಲ್ಲಿ ಕುಸ್ತಿ ಹಬ್ಬ ನಡೆಸಲಾಗುತ್ತಿದೆ. ಈ ಪೈಕಿ 80 ಲಕ್ಷ ರೂ.ಗಳನ್ನು ಕುಸ್ತಿಯಲ್ಲಿ ಭಾಗಿಯಾದ ಪೈಲ್ವಾನರಿಗೆ ಗೌರವ ಧನ ರೂಪದಲ್ಲಿ ನೀಡಲಾಗುತ್ತಿದೆ. ಇದು ಬಡತನದಲ್ಲಿದ್ದು ಸಾಧನೆ ಮಾಡುವ ಪೈಲ್ವಾನರಿಗೆ ಅನುಕೂಲವಾಗಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದಲ್ಲಿ ಸರ್ಕಾರದಿಂದ ಪೈಲ್ವಾನರಿಗೆ ನಯಾ ಪೈಸೆ ಹಣ ಯಾವುದೇ ಕಾರ್ಯಕ್ರಮಕ್ಕೂ ಬಿಡುಗಡೆಯಾಗಿಲ್ಲ.
ಈಡೇರಿಲ್ಲ ಪಂಚ ಸೂತ್ರಗಳು: ಮೊದಲನೆಯದು ಊರಿಗೊಂದು ಗರಡಿಮನೆ, ಮನೆಗೊಬ್ಬ ಪೈಲ್ವಾನ್ ಸಜ್ಜಾಗುವಂತೆ ಮಾಡಬೇಕು. ಎರಡನೇಯದು ಕುಸ್ತಿ ಕಲಿಸುವ ಅಂದರೆ ಕುಸ್ತಿ ಬಲ್ಲ ಗುರುಗಳಿಂದ (ಉಸ್ತಾದ್) ಶಾಲಾ ಮಕ್ಕಳಿಗೆ ಕುಸ್ತಿ ಕಲಿಕೆ ಆರಂಭಿಸಬೇಕು. ಮೂರನೇಯದು ಕುಸ್ತಿ ಪಟುಗಳಿಗೆ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು. ನಾಲ್ಕನೇಯದಾಗಿ ಸೇನೆ ಮತ್ತು ಪೊಲೀಸ್ ಇಲಾಖೆಯ ಕೆಲವು ಹುದ್ದೆಗಳನ್ನು ಕಡ್ಡಾಯವಾಗಿ ಪೈಲ್ವಾನರಿಗೆ ಮೀಸಲಿಡಬೇಕು. ಕೊನೆಯದಾಗಿ ಕುಸ್ತಿ ಪಟುಗಳಿಗೆ ವಿಶೇಷ ವಸತಿ ನಿಲಯ ಮತ್ತು ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಈ ಪಂಚ ಸೂತ್ರಗಳಿಂದ ಕೇವಲ ಹತ್ತು ವರ್ಷದಲ್ಲಿ ಕುಸ್ತಿ ಆಡುವವರ ಸಂಖ್ಯೆ ಮೂರು ಪಟ್ಟು ಹೆಚ್ಚಳಗೊಳ್ಳುತ್ತದೆ. ಇಷ್ಟಾದರೆ ಕುಸಿ ಉಳಿಯುತ್ತದೆ. ಆದರೆ ಕಳೆದ ಒಂದು ವರ್ಷದಲ್ಲಿ ಕುಸ್ತಿಗೆ ಸರ್ಕಾರ ಹೇಳಿಕೊಳ್ಳುವ ಯಾವುದೇ ಕ್ರಮ ವಹಿಸಿಲ್ಲ. ವರ್ಷಕ್ಕೊಂದು ಕುಸ್ತಿ ಹಬ್ಬ ನಡೆದರೆ ಸಾಲದು ಈ ಪಂಚ ಸೂತ್ರಗಳು ಸರ್ಕಾರ, ಸಂಘ-ಸಂಸ್ಥೆಗಳು ಮತ್ತು ಸಮಾಜದಿಂದ ಜಾರಿಯಾಗಬೇಕಿದೆ ಎನ್ನುತ್ತಾರೆ ಪೈಲ್ವಾನರು.
ಜಾತ್ರೆ ಕುಸ್ತಿಗೂ ಅನುದಾನ ಅಗತ್ಯ: ಹಳ್ಳಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡುವ ಮಾದರಿಯಲ್ಲೇ ಹಳ್ಳಿಗಳಲ್ಲಿ ಜಾತ್ರೆ ನಿಮಿತ್ತ ನಡೆಯುವ ಬಯಲು ಕುಸ್ತಿ ಕಣಕ್ಕೂ ಅಗತ್ಯ ಹಣಕಾಸಿನ ನೆರವು ಲಭಿಸಬೇಕಿದೆ. ಇನ್ನು ಥೇಟರ್ ಕುಸ್ತಿ ಕಣಗಳಿಗೆ ಸರ್ಕಾರದಿಂದ ಚಲನಚಿತ್ರಗಳ ಮಾದರಿಯಲ್ಲಿ ಶೇ.50ರಷ್ಟು ಅನುದಾನ ಲಭಿಸಬೇಕೆನ್ನುವುದು ಉಸ್ತಾದರ ಹಳೆಯ ಬೇಡಿಕೆ. ಇದು ಇನ್ನೂ ಈಡೇರಿಲ್ಲ .
ಡಾ|ಬಸವರಾಜ ಹೊಂಗಲ್