ಬೆಂಗಳೂರು: ತವರಿನಂಗಳದಲ್ಲಿ ಕೊನೆಯ ಲೀಗ್ ಪಂದ್ಯವಾಡಿದ ಆರ್‌ಸಿಬಿ ದೊಡ್ಡ ಮೊತ್ತದ ರೋಚಕ ಹೋರಾಟದಲ್ಲಿ ಯುಪಿ ವಾರಿಯರ್ ವಿರುದ್ಧ 23 ರನ್ನುಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 3 ವಿಕೆಟಿಗೆ 198 ರನ್ ಪೇರಿಸಿದರೆ, ಬೆನ್ನಟ್ಟಿ ಬಂದ ಯುಪಿ 8 ವಿಕೆಟಿಗೆ 175 ರನ್ ಮಾಡಿತು. ಇದು 5 ಪಂದ್ಯಗಳಲ್ಲಿ ಆರ್‌ಸಿಬಿಗೆ ಒಲಿದ 3ನೇ ಜಯ. ಯುಪಿ ಇಷ್ಟೇ ಪಂದ್ಯಗಳಿಂದ 3ನೇ ಸೋಲನುಭವಿಸಿತು.
ಮಂಧನಾ, ಪೆರ್ರಿ ಫಿಫ್ಟಿ
ನಾಯಕಿ ಸ್ಮತಿ ಮಂಧನಾ ಮತ್ತು ವನ್‌ಡೌನ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಆರ್‌ಸಿಬಿ ಬೃಹತ್ ಮೊತ್ತ ದಾಖಲಿಸಿತು. ಭರ್ತಿ 50 ಎಸೆತಗಳನ್ನು ಎದುರಿಸಿದ ಮಂಧನಾ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 80 ರನ್ ಸಿಡಿಸಿದರು. ಸ್ಮತಿ ಮಂಧನಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪೆರ್ರಿ ಗಳಿಕೆ 37 ಎಸೆತಗಳಿಂದ 58 ರನ್ (10 ಬೌಂಡರಿ, 4 ಸಿಕ್ಸರ್). ಮಂಧನಾ ಮತ್ತು ಎಸ್. ಮೇಘನಾ (28) ಮೊದಲ ವಿಕೆಟಿಗೆ 5.3 ಓವರ್‌ಗಳಿಂದ 51 ರನ್ ರಾಶಿ ಹಾಕಿದರು. ಬಳಿಕ ಮಂಧನಾ-ಪೆರ್ರಿ ಜೋಡಿಯಿಂದ 2ನೇ ವಿಕೆಟಿಗೆ 95 ರನ್ ಒಟ್ಟುಗೂಡಿತು. ರಿಚಾ ಘೋಷ್ ಅಜೇಯ 21 ರನ್ ಹೊಡೆದರು.
ಯುಪಿ ವಾರಿಯರ್ ಪರ ನಾಯಕಿ ಅಲಿಸ್ಸಾ ಹೀಲಿ ಅರ್ಧ ಶತಕದ ಮೂಲಕ ಮಿಂಚಿದರು. 38 ಎಸೆತಗಳಿಂದ 55 ರನ್ ಬಾರಿಸಿದರು (7 ಫೋರ್, 3 ಸಿಕ್ಸರ್). ಕಿರಣ್ ನವಿYರೆ (18), ದೀಪ್ತಿ ಶರ್ಮ (33) ಕೂಡ ಬಿರುಸಿನ ಆಟವಾಡಿದರು.