ಜೆಡ್ಡಾ: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು 2025 ಆರಂಭವಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಶನಿವಾರ (ನ.24) ನಡೆಯುತ್ತಿದೆ. ಮಲ್ಲಿಕಾ ಸಾಗರ್ ಐಪಿಎಲ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮೊದಲ ಸೆಟ್ ನಲ್ಲಿಯೇ ಭಾರಿ ಬಿಡ್ಡಿಂಗ್ ನಡೆದಿದ್ದು, ಪಂತ್ ಮತ್ತು ಅಯ್ಯರ್ ದಾಖಲೆಯ ಬೆಲೆಗೆ ಮಾರಾಟವಾದರು.
ಸಿರಾಜ್ ಗುಜರಾತ್ ತಂಡಕ್ಕೆ
ಆರ್ ಸಿಬಿ ತಂಡದಲ್ಲಿದ್ದ ವೇಗಿ ಮೊಹಮ್ಮದ್ ಸಿರಾಜ್ ಗೆ ಆರಂಭದಲ್ಲಿ ಗುಜರಾತ್ ಮತ್ತು ಚೆನ್ನೈ ತಂಡಗಳು ಬಿಡ್ ಮಾಡಿದವು. ಬಳಿಕ ಪಂಜಾಬ್ ಮತ್ತು ರಾಜಸ್ತಾನ ತಂಡಗಳು ಕೂಡಾ ಆಸಕ್ತಿ ತೋರಿದವು. ಕೊನೆಗೆ ಸಿರಾಜ್ 12.25 ಕೋಟಿ ರೂ ಗೆ ಗುಜರಾತ್ ತಂಡದ ಪಾಲಾದರು. ಬೆಂಗಳೂರು ತಂಡವೂ ಖರೀದಿಗೆ ಮನಸು ಮಾಡಲಿಲ್ಲ.
ಆರ್ ಸಿಬಿಗೆ ಲಿಯಾಮ್ ಲಿವಿಂಗ್ ಸ್ಟೋನ್
ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಗೆ ಆರ್ ಸಿಬಿ ಬಿಡ್ ಮಾಡಿತು. ಹೈದರಾಬಾದ್ ಕೂಡಾ ಆಸಕ್ತಿ ತೋರಿತು. ಚೆನ್ನೈ ಕೂಡಾ ಬಿಡ್ ಮಾಡಿತು. ಕೊನೆಗೆ ಲಿಯಾಮ್ ಬೆಂಗಳೂರು ತಂಡಕ್ಕೆ 8.75 ಕೋಟಿ ರೂ ಗೆ ಪಾಲಾದರು. ಇದು ಆರ್ ಸಿಬಿಯ ಮೊದಲ ಖರೀದಿ.
ಡೆಲ್ಲಿ ತಂಡಕ್ಕೆ ಕೆಎಲ್ ರಾಹುಲ್
ಕನ್ನಡಿಗ, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಗೆ ಕೆಕೆಆರ್ ಆರಂಭದಲ್ಲಿ ಬಿಡ್ ಮಾಡಿತು. ಬಳಿಕ ಆರ್ ಸಿಬಿ ಸೇರಿಕೊಂಡಿತು. 10 ಕೋಟಿವರೆಗೆ ಎರಡೂ ತಂಡಗಳೇ ಬಿಡ್ ಮಾಡಿದವು. ಬಳಿಕ ಡೆಲ್ಲಿ ಬಿಡ್ ಮಾಡಿತು. ಸಿಎಸ್ ಕೆ ಕೂಡಾ ಆಸಕ್ತಿ ತೋರಿಸಿತು. ಕೊನೆಗೆ 14 ಕೋಟಿ ರೂ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್ ಮಾರಾಟವಾದರು.