ದೇವದುರ್ಗ: ಪಟ್ಟಣದಲ್ಲಿ ಮಿನಿ ವಿಧಾನಸೌಧದ ಎದುರಿನ ಆವರಣದಲ್ಲಿ ಶನಿವಾರ ನಡೆಯುವ ವಾರದ ಸಂತೆಯಲ್ಲಿ ಕರ ಪಾವತಿಸಿದರೂ ವ್ಯಾಪಾರಸ್ಥರಿಗೆ ಕುಡಿಯುವ ನೀರು, ಮೂತ್ರಾಲಯದಂತಹ ಕನಿಷ್ಠ ಸೌಲಭ್ಯಗಳು ಮರೀಚಿಕೆಯಾಗಿವೆ. ಪಟ್ಟಣದಲ್ಲಿ ಶನಿವಾರ ನಡೆಯುವ ವಾರದ ಸಂತೆ ಕರ ವಸೂಲಿ ಟೆಂಡರ್ ಕಳೆದ ವಾರ ಮುಗಿದ್ದು, 7 ಲಕ್ಷ 3 ಸಾವಿರ ರೂ.ಗೆ ಟೆಂಡರ್ ಆಗಿದೆ.
ಕರ ಹೆಚ್ಚಳ: ವಾರದ ಶನಿವಾರ ಸಂತೆಯಲ್ಲಿ ಒಂದೊಂದು ರೀತಿಯ ವ್ಯಾಪಾರಕ್ಕೆ ಒಂದೊಂದು ರೀತಿ ಕರ ನಿಗದಿ ಮಾಡಲಾಗಿದೆ. ಕರ ಶುಲ್ಕ ಹೆಚ್ಚಳವಾದರೂ ವ್ಯಾಪಾರಸ್ಥರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ತರಕಾರಿ ಮಾರಾಟಗಾರರಿಗೆ 20 ರೂ. ಬಟ್ಟೆ ವ್ಯಾಪಾರಿಗಳಿಗೆ 40 ರೂ., ಜಿಲ್ಲೆಯಿಂದ ತರಕಾರಿ ತರುವ ವಾಹನಕ್ಕೆ 50 ರೂ., ಕಾಳು ಕಡಿ ವ್ಯಾಪಾರಸ್ಥರಿಗೆ 30 ರೂ. ಶುಲ್ಕ ವಿಧಿಸಲಾಗುತ್ತಿದೆ. ಜಿಲ್ಲೆಯಲ್ಲೇ ದೇವದುರ್ಗ ಪಟ್ಟಣದಲ್ಲಿ ನಡೆಯುವ ವಾರದ ಶನಿವಾರ ಸಂತೆ ಪ್ರಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಲಿನ ನೂರಾರು
ಹಳ್ಳಿಗಳಿಂದ ಸಾವಿರಾರೂ ರೈತರು, ವ್ಯಾಪಾರಸ್ಥರು ಸಂತೆಗೆ ಆಗಮಿಸುತ್ತಾರೆ. ಬಯಲಿನಲ್ಲಿ ಸಂತೆ ನಡೆಯುವುದರಿಂದ ವ್ಯಾಪಾರಸ್ಥರಿಗೆ ನೆರಳಿನ ಸೌಲಭ್ಯವಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಸುಡು ಬಿಸಿಲಿನಲ್ಲೇ ವ್ಯಾಪಾರ ವಹಿವಾಟು ನಡೆಸಬೇಕಿದೆ. ಬಿಸಿಲಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಇಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಿಲ್ಲ.
ನೀರಿಗಾಗಿ ಅಲೆದಾಟ: ಸಂತೆ ಸ್ಥಳದಲ್ಲಿ ನೀರಿನ ಸೌಲಭ್ಯವಿಲ್ಲದ್ದರಿಂದ ವ್ಯಾಪಾರಸ್ಥರು ಹೋಟೆಲ್, ಖಾನಾವಳಿಗಳ ಮೊರೆ ಹೋಗುವಂತಾಗಿದೆ. ಪದೇಪದೇ ನೀರಿಗೆ ಹೋದರೆ ಹೋದರೆ ನಮಗೇ ನೀರಿಲ್ಲ, ನಿಮಗೆಲ್ಲಿಂದ ತರುವುದು ಎಂದು ಕೇಳುತ್ತಾರೆ. ಹೀಗಾಗಿ ಕೆಲ ವ್ಯಾಪಾರಸ್ಥರು ಹಣ ಕೊಟ್ಟು ನೀರಿನ ಪಾಕೀಟು, ಬಾಟಲಿಗಳನ್ನು ಖರೀದಿಸಿ ನೀರು ಕುಡಿಯಬೇಕಿದೆ. ಇಲ್ಲವೇ ತಂಪು ಪಾನೀಯ, ಐಸ್ ಕ್ರೀಮ್ ಮೊರೆ ಹೋಗುವಂತಾಗಿದೆ.
ಬಿಸಿಲಿಗೆ ಬಾಡುವ ತರಕಾರಿ: ಸಂತೆಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ ನೆರಳಿನ ಸೌಲಭ್ಯವಿಲ್ಲ. ಅಲ್ಲಲ್ಲಿ ಒಬ್ಬರು ಛತ್ರಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡಿದರೆ ಬಹುತೇಕರು ಬಿಸಿಲಲ್ಲೇ ವ್ಯಾಪಾರ ಮಾಡುವುದರಿಂದ ಬಿಸಿಲಿಗೆ ಮೆಂತೆಪಲ್ಲೆ, ಮೂಲಂಗಿ, ಕೋತಂಬರಿ, ಕರಿಬೇವು, ಪಾಲಕ, ಬದನಿಕಾಯಿ, ಟೊಮೆಟೋ, ಆಲೂಗಡ್ಡೆ ಇತರೆ ತರಕಾರಿ ಬಾಡುತ್ತವೆ. ಬಾಡಿದ ತರಕಾರಿಯನ್ನು ಖರೀದಿಸಲು ಗ್ರಾಹಕರೂ ಮುಂದಾಗುತ್ತಿಲ್ಲ. ಹೀಗಾಗಿ ಹಾನಿ ಅನುಭವಿಸುವಂತಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರಾದ
ಶಿವಗಂಗಮ್ಮ, ಶಾಂತಮ್ಮ.
ಆಗ್ರಹ: ವಾರದ ಸಂತೆಯಲ್ಲಿ ವ್ಯಾಪಾರಸ್ಥರಿಂದ 20ರಿಂದ 50 ರೂ.ವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ ಕನಿಷ್ಠ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲವಾಗಿದೆ. ಪರಿಣಾಮ ವ್ಯಾಪಾರಸ್ಥರು, ಗ್ರಾಹಕರು ಪರದಾಡುವಂತಾಗಿದೆ. ಮುಂದಿನ ವಾರ ನಡೆಯುವ ಸಂತೆಯಲ್ಲಿ ಸಂತೆ ಸ್ಥಳದಲ್ಲಿ ಪುರಸಭೆ ಕನಿಷ್ಠ ಟ್ಯಾಂಕರ್ ಇರಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಕರವೇ ಮುಖಂಡ ಉಸ್ಮಾನ ಗೌರಂಪೇಟೆ ಆಗ್ರಹಿಸಿದರು.