Advertisement

ಡಯಟ್‌ನ ಗೋಡೆಯಲ್ಲಿ ಅರಳಿದ ವರ್ಲಿ ಕಲೆ 

06:00 AM Mar 30, 2018 | |

ಪಠ್ಯವನ್ನು ಸರಳಗೊಳಿಸಬೇಕಾದರೆ ಚಿತ್ರಕಲೆ ಬಹುಮುಖ್ಯವಾಗುತ್ತದೆ. ಅದಕ್ಕಾಗಿಯೇ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ಚಿತ್ರಗಳನ್ನು ಮುದ್ರಿಸಿರುತ್ತಾರೆ. ಹೊಸ ಪಠ್ಯ ಪುಸ್ತಕ ಕೈಗೆ ಸಿಕ್ಕಿದೊಡನೆ ಮಕ್ಕಳು ಮೊದಲು ಅದರೊಳಗೆ ಎಷ್ಟು ಚಿತ್ರಗಳಿವೆ ಎಂದು ಹುಡುಕುತ್ತಾರೆ. ಚಿತ್ರಗಳೇ ಇಲ್ಲದ ಪುಸ್ತಕ ಯಾರ ಮನಸ್ಸನ್ನೂ ಗೆಲ್ಲಲಾರದು.

Advertisement

 ಬಲ್ಲವರು ಹೇಳುತ್ತಾರೆ, ಚಿತ್ರವೆಂಬುದು ಅಡುಗೆಯಲ್ಲಿ ಕರಿಬೇವು ಇದ್ದಂತೆ. ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ. ಚಿತ್ರಗಳಿಲ್ಲದ ಪಾಠ ಮನಸ್ಸಿಗೆ ಮುದಕೊಡಲಾರದು. ಈ ಅಂಶವನ್ನು ಬಲ್ಲವರು ಚಿತ್ರಕಲೆಗೆ ಉತ್ತಮ ಸ್ಥಾನಮಾನವನ್ನು ಕೊಡುತ್ತಾರೆ. ದಿನನಿತ್ಯದ ಚಟುವಟಿಕೆಗಳಲ್ಲಿ ಅದನ್ನು ಹೊಂದಿಸಿಕೊಳ್ಳುತ್ತಾರೆ. ಚಿತ್ರಕಲೆ ಹೊಂದಿರುವ ಸಭಾಭವನ, ದೇಗುಲ, ಮನೆ. ಗೋಡೆ ಎಲ್ಲವೂ ನಮ್ಮನ್ನು ಆಕರ್ಷಿಸುತ್ತವೆ. ನಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಅಂತಹ ಸಾಂಸ್ಕೃತಿಕ ಕಲಾ ಪರಂಪರೆ ಉಡುಪಿ ಡಯಟ್‌ನ (ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ) ಗೋಡೆಗಳಲ್ಲಿ ಇತ್ತೀಚೆಗೆ ಮೂಡಿತು. ಶಿಕ್ಷಣ ಪ್ರೇಮಿಗಳನ್ನು, ದಾರಿಹೋಕರನ್ನು ಆಕರ್ಷಿಸುವ ಕೇಂದ್ರವಾಯಿತು. ಇದಕ್ಕೆ ಕಾರಣಕರ್ತರಾದವರು ಜಿಲ್ಲೆಯ ಚಿತ್ರಕಲಾ ಶಿಕ್ಷಕರು. ಬೆನ್ನುತಟ್ಟಿ ಹುರಿದುಂಬಿಸಿದವರು ಡಯಟ್‌ನ ಪ್ರಭಾರ ಪ್ರಾಂಶುಪಾಲರಾದ ಚಂದ್ರಶೇಖರ್‌ . 

 ಡಯಟ್‌ನಲ್ಲಿ ವರ್ಷವಿಡೀ ಉಳಿದ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನಡೆಯುತ್ತಿರುತ್ತದೆ. ಆದರೆ ಚಿತ್ರಕಲಾ ಶಿಕ್ಷಕರಿಗೆ ಇಂತಹ ಅವಕಾಶ ವಿರಳ. ಏಕೆಂದರೆ ಅವರಲ್ಲಿ ಎಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ ಎಂಬ ಪ್ರತಿಪಾದನೆಯಿದೆ. ಆದರೆ ಈ ಬಾರಿ ಆರ್‌.ಎಂ.ಎಸ್‌.ಎ. ಅನುದಾನದಡಿಯಲ್ಲಿ ಬೆಂಗಳೂರಿನ ಡಿ.ಎಸ್‌.ಇ.ಆರ್‌.ಟಿ. ಸಂಸ್ಥೆ ಪ್ರತಿ ಜಿಲ್ಲಾ ಡಯಟ್‌ನ ಮೂಲಕ ಚಿತ್ರಕಲಾ ಶಿಕ್ಷಕರಿಗೆ ಹತ್ತು ದಿನಗಳ ತರಬೇತಿಯನ್ನು ನಡೆಸಿತು. ಇದೊಂದು ಶೈಕ್ಷಣಿಕ ಯೋಜನೆಯ ತರಬೇತಿಯಾಗಿದ್ದರೂ ಇದನ್ನು ಹೇಗೆ ಮತ್ತಷ್ಟು ಕಲಾತ್ಮಕಗೊಳಿಸಬಹುದೆಂದು ಚಿಂತಿಸಲಾಯಿತು. ತರಬೇತಿಯ ಹೊಣೆಯನ್ನು ಹೊತ್ತಿದ್ದ ಪ್ರಾಂಶುಪಾಲರಾದ ಚಂದ್ರಶೇಖರ್‌ ಅವರು ಚಿತ್ರಕಲಾ ಶಿಕ್ಷಕರಲ್ಲಿರುವ ಸೃಜನಶೀಲತೆಯನ್ನು ಬಳಸಿಕೊಂಡು ಡಯಟ್‌ನ ಗೋಡೆಗಳಲ್ಲಿ ವರ್ಲಿ ಕಲೆಯನ್ನು ಚಿತ್ರಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪರಿಣಾಮವಾಗಿ ಡಯಟ್‌ನ ಗೋಡೆಗಳು ಕಾವಿ ಚಿತ್ರಗಳಿಂದ ಕಂಗೊಳಿಸಿದವು. ವರ್ಲಿ ಚಿತ್ರಕಲೆಯ ವಿವಿಧ ರೂಪಗಳು ಮೂಡಿಬಂದವು. ಜನಪದ ಆಚರಣೆಗಳಾದ ಯಕ್ಷಗಾನ, ಭೂತದ ಕೋಲ, ಆಟಿಕಳಂಜ, ಕಂಬಳ, ನಾಗಮಂಡಲ, ರಥೋತ್ಸವ, ಗೋಪೂಜೆ, ಮೆರವಣಿಗೆ, ಗ್ರಾಮೀಣ ಬದುಕು, ಕೃಷಿ ಕೆಲಸಗಳು, ಕರಾವಳಿ ತೀರ, ಬೆಸ್ತರು, ಜಾತ್ರೆ, ಸಂಭ್ರಮಾಚರಣೆ ಮುಂತಾದ ಅನೇಕ ವಿಷಯಗಳು ಗೋಡೆಯ ಮೇಲೆ ಮೂಡಿಬಂದುವು. ವರ್ಲಿಕಲೆಯ ಶೈಲಿಯನ್ನು ಮೂಲಾಧಾರವಾಗಿಟ್ಟುಕೊಂಡು ಸೃಜನಶೀಲ ಕಲಾಕೃತಿಗಳು ಚಿತ್ರಕಲಾ ಶಿಕ್ಷಕರ ಕೈಯ್ಯಲ್ಲಿ ರೂಪುಗೊಂಡವು. 

 ಉಡುಪಿ ಡಯಟ್‌ ಪ್ರಾಂಶುಪಾಲರು ಚಿತ್ರಕಲೆಗೆ ಪೂರಕ ಚಿಲುಮೆಯಾಗಿದ್ದಾರೆ. ಅವರ ಕಾಳಜಿಯಿಂದಾಗಿ ಡಯಟ್‌ ತನ್ನ ಸ್ವರೂಪದಲ್ಲಿ ಹೊಸತನವನ್ನು ಕಾಣುವಂತಾಯ್ತು. ತರಬೇತಿಯ ಸಂದರ್ಭದಲ್ಲಿ ಡಯಟ್‌ಗೆ ಭೇಟಿಕೊಟ್ಟ ಬೆಂಗಳೂರಿನ ಆರ್‌.ಎಂ.ಎಸ್‌.ಎ. ನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹಾಗೂ ಉಡುಪಿ ಡಿ.ಡಿ.ಪಿ.ಐ. ಶೇಷಶಯನ ಕಾರಿಂಜರವರು ಚಿತ್ರಕಲಾ ಶಿಕ್ಷಕರ ಕೈಚಳಕದಿಂದ ಮೂಡಿದ ಡಯಟ್‌ನ ಸುಂದರ ದೃಶ್ಯವನ್ನು ಕಂಡು ಶ್ಲಾ ಸಿದರು. ಶಿಕ್ಷಕರು, ಶಿಕ್ಷಣ ತಜ್ಞರು ಆಗಮಿಸುವ ಈ ಸ್ಥಳ ಸುಂದರವಾಗಿದ್ದರೆ ಇಡಿಯ ಶಿಕ್ಷಣ ವ್ಯವಸ್ಥೆಯೇ ಸುಂದರಗೊಳ್ಳುವುದು ಎಂದರು. ಹಾಗಿರುವಾಗ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪುರುಸೋತ್ತು ಇರುವಾಗ ಡಯಟ್‌ಗೆ ಬಂದು ಒಮ್ಮೆ ಚಿತ್ರಗಳನ್ನು ನೋಡಿಕೊಂಡು ಹೋದರೆ ಸಾಂಸ್ಕೃತಿಕ ಜ್ಞಾನ ಹೆಚ್ಚುವುದು ಖಂಡಿತ.

ಉಪಾಧ್ಯಾಯ ಮೂಡುಬೆಳ್ಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next