Advertisement

ಇಂಟರ್‌ನ್ಯಾಶನಲ್‌ ಕುಸ್ತಿ: ಭಜರಂಗ್‌, ಪಿಂಕಿ ಬಂಗಾರದ ಮೆರುಗು

03:06 PM Jul 30, 2018 | Harsha Rao |

ಹೊಸದಿಲ್ಲಿ: ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ “ಯಾಸರ್‌ ಡೋಗು ಇಂಟರ್‌ನ್ಯಾಶನಲ್‌ ರೆಸ್ಲಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾರತ ಒಟ್ಟು 10 ಪದಕಗಳ ಸಾಧನೆಗೈದಿದೆ. ರವಿವಾರ 70 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಭಜರಂಗ್‌ ಪೂನಿಯ ಚಿನ್ನದ ಪದಕ ಗೆದ್ದು ಮೆರೆದರು. ವನಿತೆಯರ 55 ಕೆಜಿ ವಿಭಾಗದಲ್ಲಿ ಪಿಂಕಿ ಕೂಡ ಚಿನ್ನಕ್ಕೆ ಕೊರಳೊಡ್ಡಿದರು.

Advertisement

ಭಾರತದ 10 ಪದಕಗಳಲ್ಲಿ 3 ಪುರುಷರ ವಿಭಾಗದಲ್ಲಿ, ಉಳಿದ 7 ವನಿತಾ ವಿಭಾಗದಲ್ಲಿ ಒಲಿದು ಬಂತು. ಆದರೆ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ನಿರಾಸೆ ಮೂಡಿಸಿದರು.

ಭಜರಂಗ್‌ಗೆ ಸತತ 2 ಬಂಗಾರ
ಈ ಸಾಧನೆಯೊಂದಿಗೆ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಭಜರಂಗ್‌ ಪೂನಿಯ ಸತತ 2 ವಿಶ್ವ ಮಟ್ಟದ ಕೂಟಗಳಲ್ಲಿ ಚಿನ್ನದ ಪದಕ ಜಯಿಸಿದಂತಾಯಿತು. ಈ ತಿಂಗಳ ಆರಂಭದಲ್ಲಿ ಜಾರ್ಜಿಯಾದಲ್ಲಿ ನಡೆದ ಟಿಬಿಲಿಸಿ ಗ್ರ್ಯಾನ್‌ಪ್ರಿ ಚಾಂಪಿಯನ್‌ಶಿಪ್‌ನಲ್ಲೂ ಅವರು ಸ್ವರ್ಣ ಸಾಧನೆಗೈದಿದ್ದರು. 

ಟರ್ಕಿ ಕೂಟದಲ್ಲಿ ಭಜರಂಗ್‌ ಅಖಾಡಕ್ಕಿಳಿಯದೆ ಬಂಗಾರದ ಪದಕವನ್ನು ಒಲಿಸಿಕೊಂಡರು. ಉಕ್ರೇನಿನ ಎದುರಾಳಿ ಆ್ಯಂಡ್ರಿ ಕ್ಯಾಟ್ಕೊàವ್‌ಸ್ಕಿ ಗಾಯಾಳಾಗಿ ಹಿಂದೆ ಸರಿದುದರಿಂದ ಭಾರತೀಯನಿಗೆ ಸುಲಭದಲ್ಲಿ ಚಿನ್ನ ಸಿಕ್ಕಿತು. 

61 ಕೆಜಿ ವಿಭಾಗದಲ್ಲಿ ಸಂದೀಪ್‌ ತೋಮರ್‌ಕೂಡ ಭರವಸೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ ಅವರು ಇರಾನ್‌ನ ಮೊಹಮ್ಮದಾºಗರ್‌ ಯಾಕೇಶಿ ವಿರುದ್ಧ 2-8ರಿಂದ ಸೋತು ಬೆಳ್ಳಿಗೆ ಸಮಾಧಾನಪಡಬೇಕಾಯಿತು. ಶನಿವಾರ 57 ಕೆಜಿ ವಿಭಾಗದಲ್ಲಿ ವಿಕ್ಕಿ ಕಂಚಿನ ಪದಕ ಗೆದ್ದಿದ್ದರು. ಆದರೆ ಅಮಿತ್‌ (65 ಕೆಜಿ), ಜೀತೆಂದ್ರ (74 ಕೆಜಿ), ಪವನ್‌ (86 ಕೆಜಿ), ದೀಪಕ್‌ (92 ಕೆಜಿ), ಜಶ್ಕವಾರ್‌ ಸಿಂಗ್‌ (97 ಮತ್ತು 125 ಕೆಜಿ) ಪದಕ ಸುತ್ತು ತಲುಪುವಲ್ಲಿ ವಿಫ‌ಲರಾದರು.

Advertisement

ಸಾಕ್ಷಿ ವಿಫ‌ಲ
ರಿಯೋ ಸಾಧನೆಯ ಬಳಿಕ ಮೊದಲ ಸಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಸಾಕ್ಷಿ ಮಲಿಕ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. 

ಸಂಗೀತಾ ಪೋಗಟ್‌ (59 ಕೆಜಿ) ಮತ್ತು ಗೀತಾ (65 ಕೆಜಿ) ಕಂಚಿನ ಪದಕ ಗೆದ್ದರು. ಪೂಜಾ ಮತ್ತು ಪಿಂಕಿ ಭಾರತದ ಏಶ್ಯಾಡ್‌ ಕುಸ್ತಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಸಾಕ್ಷಿ ಮತ್ತು ಕಿರಣ್‌ ಕೂಡ ಈ ತಂಡದಲ್ಲಿದ್ದಾರೆ.

ಕೈಜಾರಿದ ಅವಳಿ ಚಿನ್ನ
ರವಿವಾರ ವನಿತೆಯರ ವಿಭಾಗದಲ್ಲಿ ಭಾರತಕ್ಕೆ ಇನ್ನೂ 2 ಚಿನ್ನದ ಪದಕಗಳ ಅವಕಾಶ ತೆರೆದಿತ್ತು. ಆದರೆ 53 ಕೆಜಿ ಹಾಗೂ 57 ಕೆಜಿ ವಿಭಾಗಗಳಲ್ಲಿ ಸೀಮಾ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ರಜತ ಪದಕ ವಿಜೇತೆ ಪೂಜಾ ದಂಡಾ ಫೈನಲ್‌ನಲ್ಲಿ ಎಡವಿದರು. 62 ಕೆಜಿ ವಿಭಾಗದಲ್ಲಿ  ಸರಿತಾ ಕಂಚಿನ ಪದಕ ಜಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next