ನವದೆಹಲಿ: ವಿಶ್ವಸಂಸ್ಥೆ ಇಡೀ ಜಗತ್ತಿಗೇ ಎಚ್ಚರಿಕೆ ನೀಡುವಂತಹ ಸಂದೇಶವೊಂದನ್ನು ರವಾನಿಸಿದೆ. ಅದರ ತಜ್ಞರ ತಂಡ ನೀಡಿರುವ ವರದಿಯ ಪ್ರಕಾರ; 2030ರ ಹೊತ್ತಿಗೆ ಇಡೀ ಜಗತ್ತಿನಲ್ಲಿ ವರ್ಷವೊಂದಕ್ಕೆ 560 ಪ್ರಾಕೃತಿಕ ಮಹಾದುರಂತಗಳು ಸಂಭವಿಸುತ್ತವೆ.
ಅಗ್ನಿ, ನೀರು, ಬರಗಾಲ, ಕಾಯಿಲೆಗಳು, ಆರ್ಥಿಕ ಕುಸಿತಗಳೆಲ್ಲ ಹವಾಮಾನ ವೈಪರೀತ್ಯದ ಕಾರಣಕ್ಕೆ ಸಂಭವಿಸುತ್ತವೆ.
ಈ ವೈಪರೀತ್ಯ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ವಿಷಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
2001ರಿಂದ 2015ರ ನಡುವೆ ನಡೆದ ದುರಂತಗಳಿಗಿಂತ ವರ್ಷಕ್ಕೆ 400 ದುರಂತಗಳು ಹೆಚ್ಚಾಗಿ ನಡೆಯುತ್ತವೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿಪರೀತ ಉಷ್ಣಾಂಶ ಹೆಚ್ಚುತ್ತದೆ. ಬೆಂಕಿ ಅನಾಹುತಗಳು, ಪ್ರವಾಹಗಳು ಸಂಭವಿಸುತ್ತವೆ. ಹಾಗೆಯೇ ರಾಸಾಯನಿಕ ದುರಂತಗಳೂ ಎದುರಾಗುತ್ತವೆ.
ಕೊರೊನಾದಂತಹ ಸರ್ವವ್ಯಾಪಿ ರೋಗಗಳು ಜಗತ್ತನ್ನು ಕಾಡುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಹವಾಮಾನ ವೈಪರೀತ್ಯ ಭಾರೀ ನಷ್ಟಕ್ಕೆ ಕಾರಣವಾಗುತ್ತದೆ, ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗುತ್ತದೆ. 1970ರಿಂದ 2000ನೇ ಇಸವಿಯ ನಡುವೆ ವರ್ಷಕ್ಕೆ ಕೇವಲ 90ರಿಂದ 100 ಮಧ್ಯಮ, ಬೃಹತ್ ಮಟ್ಟದ ದುರಂತಗಳು ಸಂಭವಿಸಿದ್ದವು.
2030ರ ಹೊತ್ತಿಗೆ ಬಿಸಿಮಾರುತಗಳು ಹಿಂದಿಗಿಂತ ಮೂರುಪಟ್ಟು ತೀವ್ರವಾಗಿರುತ್ತವೆ. ಶೇ.30 ಬರಗಾಲಗಳು ಹೆಚ್ಚಾಗುತ್ತವೆ ಎಂದು ವಿಶ್ಲೇಷಿಸಲಾಗಿದೆ.