ಬೆಂಗಳೂರು: ತುಳುಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಜ.13 ರಿಂದ ಎರಡು ದಿನಗಳ ಕಾಲ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅಖೀಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳು ಭಾಷೆಗೆ ತನ್ನದೇ ಆದ ಇತಿಹಾಸವಿದೆ.ಅಲ್ಲದೆ ರಾಷ್ಟ್ರ ಭಾಷೆಗಳಲ್ಲೊಂದಾಗುವ ಎಲ್ಲಾ ಅರ್ಹತೆಗಳೂ ಇದಕ್ಕಿದೆ. ಈ ಹಿನ್ನಲೆಯಲ್ಲಿ ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿ ತುಳು ಭಾಷೆಯನ್ನು ಸೇರ್ಪಡೆ ಗೊಳಿಸಿ ಸಂವಿಧಾನಿಕ ಮಾನ್ಯತೆ ನೀಡಬೇಕು.
ಈ ಬಗ್ಗೆ ಚರ್ಚೆಸಿ ನಂತರ ಹೋರಾಟದ ರೂಪುರೇಷೆಗಳ ಬಗ್ಗೆ ಚಿಂತನ-ಮಂಥನ ನಡೆಸಲುವಾಗಿಯೇ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಎರಡುದಿನಗಳ ಕಾಲ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಹಮ್ಮಿ ಕೊಂಡಿರುವುದಾಗಿ ತಿಳಿಸಿದರು.
ತುಳು ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ಸಿಗುವುದರಿಂದ ತುಳು ಸಾಹಿತ್ಯ, ಚಲನಚಿತ್ರ ರಂಗ, ಜಾನಪದೀಯ ಸಂಸ್ಕೃತಿ, ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಸ್ಥಾನಮಾನ ದೊರೆಯುತ್ತದೆ. ತುಳುವಿಗೆ ಸಿಗಬೇಕಾದಂತಹ ಪ್ರಶಸ್ತಿ-ಪುರಸ್ಕಾರಗಳು ಕೂಡ ಸಿಗಲಿವೆ. ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಸಿಗಬೇಕೆಂಬುವುದು ವಿಶ್ವದೆಲ್ಲಡೆ ನೆಲೆಸಿರುವ ತುಳುವರ ಒಕ್ಕೂರಳಿನ ಒತ್ತಾಯವಾಗಿದ್ದು,ಈ ಸಮ್ಮೇಳನದಲ್ಲಿ ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಹಲವು ತುಳು ಬಾಂಧವರು ಪಾಳೊYಳ್ಳಲಿದ್ದಾರೆ ಎಂದು ಹೇಳಿದರು.
ತುಳುವರು ತಮ್ಮ ನಂಬಿಗೆ ಆಚರಣೆ ಇನ್ನೂ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ.ತುಳುನಾಡಿನಲ್ಲಿ ಮಾತ್ರವಲ್ಲದೆ ಎಲ್ಲೆಲ್ಲಿ ಅವರು ನೆಲೆ ಸಿದ್ದಾರೂ ಅಲ್ಲಲ್ಲಿ ಒಟ್ಟಾಗಿ ತುಳು ಸಾಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾ ಬರುತ್ತಿದ್ದಾರೆ.ಇದು ತುಳು ಸಾಂಸ್ಕೃತಿಗೆ ಹಿಡಿದ ಕೈಗನ್ನಡಿ.ಇದನ್ನ ಮನಗಂಡು ಕೇಂದ್ರ ಸರ್ಕಾರ ತುಳು ಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಖೀಲ ಭಾರತ ತುಳು ಒಕ್ಕೂಟದ ಬೆಂಗಳೂರು ವಲಯ ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ್ ಕುಲಶೇಖರ್,ಉದಯ್ ಧರ್ಮಸ್ಥಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.