ಬಾಗಲಕೋಟೆ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ಜಿಪಂ ಸಿಇಒ ಟಿ.ಭೂಬಾಲನ್ ಜಂಟಿಯಾಗಿ ಗುರುವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕಾರ್ಯಾಲಯ, ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಕ್ಷಯರೋಗ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಕ್ಷಯರೋಗದಿಂದ ಸಂಪೂರ್ಣ ಗುಣಮುಖರಾಗಬಹುದಾಗಿದ್ದು, ಪೌಷ್ಟಿಕ ಆಹಾರ ಗುಣಪಡಿಸುವಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ರೋಗಿಗಳನ್ನು ಗುರುತಿಸಲು, ಅನುಸರಿಸಲು ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ನಿಕ್ಷಯ ತಂತ್ರಾಂಶ ಪ್ರಾರಂಭಿಸಲಾಗಿದೆ. ಇದರಲ್ಲಿ ಎಲ್ಲ ರೋಗಿಗಳನ್ನು ಆನ್‌ಲೈನ್ ಮೂಲಕ ದಾಖಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕ್ಷಯರೋಗ ಮುಕ್ತ ಜಿಲ್ಲಾಯನ್ನಾಗಿಸಲು ಎಲ್ಲರೂ ಪಣ ತೊಡುವ ಅಗತ್ಯವಿದೆ ಎಂದು ತಿಳಿಸಿದರು.
ಜಾಥಾದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಯಶ್ರೀ ಎಮ್ಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪಿ.ಎ.ಹಿಟ್ನಳ್ಳಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಸಿ.ಎಸ್. ಪಾಟೀಲ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಬಿ.ಜಿ.ಹುಬ್ಬಳ್ಳಿ, ಆರೋಗ್ಯ ಸಹಾಯಕಿಯರು, ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಾದಲ್ಲಿ ಪಾಲ್ಗೊಂಡಿದ್ದ ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್, ಎ.ಎನ್‌ಎಂ ವಿದ್ಯಾರ್ಥಿಗಳು ಘೋಷಣಾ ಫಲಕ ಹಿಡಿದುಕೊಂಡು ಘೋಷಣೆ ಕೂಗಿದರು.
ಹಾಲನ್ನು ಕಾಯಿಸಿ ಸೇವಿಸಲು ಡಿಸಿ ಸಲಹೆ: ಹಾಲನ್ನು 121 ಡಿಗ್ರಿ ಉಷ್ಣಾಂಶದಲ್ಲಿ ಕಾಯಿಸಿದಾಗ ಮಾತ್ರ ಹಾಲಿನಲ್ಲಿರುವ ರೋಗದ ಬ್ಯಾಕ್ಟಿರಿಯಾವನ್ನು ಕೊಲ್ಲಲು ಸಾಧ್ಯವಾಗುತ್ತದೆ. ಈ ರೀತಿಯ ಕಾಯಿಸಿದ ಹಾಲನ್ನು ಸೇವಿಸುವ ಮೂಲಕ ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಸಲಹೆ ನೀಡಿದರು.
ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಜಿಲ್ಲಾಧಿಕಾರಿ