Advertisement
ರಂಗಭೂಮಿ ಬೇರೆ ಬೇರೆ ಭಾಷೆಗಳಲ್ಲಿ ಜನಮನ್ನಣೆ ಪಡೆಯುತ್ತಿರುವಾಗ ರಾಜ್ಯದ ಕರಾವಳಿಯಲ್ಲಿ ತುಳು ರಂಗಭೂಮಿ ವ್ಯಾಪಿಸಿರುವ ಶೈಲಿ ಹಾಗೂ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ವಿಸ್ಮಯವನ್ನೇ ಮೂಡಿಸುತ್ತದೆ. 90 ವರ್ಷಗಳ ಇತಿಹಾಸ ಹೊಂದಿರುವ ತುಳು ರಂಗಭೂಮಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸಾವಿರಾರು ಕಲಾವಿದರು ಹಾಗೂ ಅದರ ಬೆಂಗಾವಲಾಗಿ ನಿಂತ ವಿವಿಧ ಸ್ತರದ ಕಲಾ ದಿಗ್ಗಜರನ್ನು ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅಂದಿನಿಂದ ಇಂದಿನವರೆಗೆ ಪ್ರದರ್ಶನ ಕಂಡ ನಾಟಕಗಳು ಅದೆಷ್ಟು ಸಾವಿರವೋ.. ಲೆಕ್ಕಕ್ಕೆ ಸಿಗಲಾರದು.
Related Articles
Advertisement
ಹಿಂದೆ ಸಾಮಾಜಿಕ ಜವಾಬ್ದಾರಿ ಆಧಾರಿತವಾಗಿಯೇ ನಾಟಕಗಳು ಪ್ರದರ್ಶನವಾಗು ತ್ತಿತ್ತು. ಜನರ ದೈನಂದಿನ ಸಮಸ್ಯೆಗಳು, ಕುಟುಂಬ ಸಂಗತಿಗಳ ಬಗ್ಗೆ ಉಲ್ಲೇಖ ವಾಗುತ್ತಿತ್ತು. ಈ ಮೂಲಕ ವಿಷಯ ಆಧಾರಿತವಾಗಿಯೇ ನಾಟಕ ನಡೆಯುತ್ತಿತ್ತು. ಹಾಸ್ಯ ಬಹುಭಾಗವಾಗಿ ಇರಲಿಲ್ಲ. ಗಾರ್ಡನ್, ರಸ್ತೆ, ಮನೆ ಸೇರಿದಂತೆ ಪರದೆಯ ಪರಿಕಲ್ಪನೆ ಇತ್ತು ಹಾಗೂ ನಾಟಕದ ಹಾಡನ್ನು ಕೂಡ ನಾಟಕ ಪ್ರದರ್ಶನದ ಸ್ಥಳದಲ್ಲಿಯೇ ಹಾಡುವ ಪರಿಸ್ಥಿತಿಯಿತ್ತು. ಆದರೆ ಈಗ ನಾಟಕದ ಸ್ವರೂಪ ಬದಲಾಗಿದೆ. ಹಾಸ್ಯದ ಜತೆಗೆ ಸಂದೇಶ ಬರುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ ಆಧುನಿಕ ವ್ಯವಸ್ಥೆಗಳು ಇಂದಿನ ನಾಟಕಕ್ಕೆ ಹೊಸ ರೂಪವನ್ನು ತಂದುಕೊಟ್ಟಿವೆ. ಪರದೆಗಳ ತಲೆಬಿಸಿಯಿಲ್ಲ-ಸೆಟ್ಟಿಂಗ್ ಮಾತ್ರ ಇದೆ. ಧ್ವನಿಮುದ್ರಿತ ವ್ಯವಸ್ಥೆಗಳು ಹೊಸ ಬದಲಾವಣೆಯನ್ನು ತಂದಿದೆ. ಥಿಯೇಟರ್‌ನಲ್ಲಿ ಕುಳಿತು ಸಿನೆಮಾ ಕಂಡಾಗ ಆಗುವ ಅನುಭವವೇ ಇಂದಿನ ನಾಟಕಗಳನ್ನು ವೀಕ್ಷಿಸಿದಾಗ ಸಿಗುತ್ತಿದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ರಂಗಭೂಮಿಗೂ ನಾವೀನ್ಯದ ಸ್ಪರ್ಶ ನೀಡಿದೆ. ಈ ಎಲ್ಲ ಬದಲಾವಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ರಂಗಭೂಮಿಗೆ ಸಹಕಾರಿಯಾಗಿದೆ. ತುಳು ರಂಗಭೂಮಿಯಿಂದಾಗಿಯೇ ತುಳು ಸಿನೆಮಾ ಭವಿಷ್ಯವನ್ನು ಕಂಡು ಕೊಂಡಿತು. ಹೀಗಾಗಿ ತುಳು ಸಿನೆಮಾದ ತಾಯಿ ಬೇರು ತುಳು ನಾಟಕ. ತುಳುವಿನ 30ಕ್ಕೂ ಅಧಿಕ ನಾಟಕಗಳೇ ಸಿನೆಮಾ ಆಗಿ ಬದಲಾವಣೆ ಕಂಡಿದೆ. ರಂಗಭೂಮಿಯ ಜಾಣ್ಮೆ ಹಾಗೂ ಅನುಭವವೇ ಸಿನೆಮಾ ಕ್ಷೇತ್ರದ ಗೆಲುವಿಗೆ ಕಾರಣವಾಯಿತು ಎಂಬುದು ಉಲ್ಲೇಖನೀಯ ಅಂಶ. ಭಾಷೆಯ ಮೇಲಿನ ಪ್ರೀತಿಯಿಂದಾಗಿ ಕರಾವಳಿ ಭಾಗದಲ್ಲಿ ಕೊಂಕಣಿ ಹಾಗೂ ಮಲಯಾಳ ನಾಟಕಗಳು ಕೂಡ ಪ್ರದರ್ಶನ ಕಂಡಿವೆ. ವಿದೇಶದಲ್ಲಿಯೂ ಪ್ರದರ್ಶನ ಕಂಡಿದ್ದೂ ಇದೆ. ಇನ್ನು ಕನ್ನಡ ರಂಗಭೂಮಿಯೂ ಇಲ್ಲಿ ಸಕ್ರಿಯವಾಗಿದೆ. ಕರಾವಳಿಯ ಕೆಲವಷ್ಟು ನಾಟಕ ತಂಡಗಳು ಕನ್ನಡ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದು ಅಪಾರ ಜನಮನ್ನಣೆ ಪಡೆದುಕೊಂಡಿವೆ. ಆಗಬೇಕಾದ್ದೇನು?
ಕಲಾವಿದರ ಮನಸ್ಸು ಬದಲಾಗಬೇಕು. “ಒರಿಯನ್ ತೂಂಡ ಒರಿಯಗಾಪುಜಿ’ ಎಂಬ ಮನೋಭಾವ ಮೊದಲು ತೊರೆಯಬೇಕು. “ನಾನು’ ಎಂಬುದನ್ನು ಮರೆತು “ನಾವು’ ಎಂಬ ಹೃದಯವೈಶಾಲ್ಯ ಬೆಳೆಸಬೇಕಿದೆ. ಹೀಗಾದಲ್ಲಿ ತುಳು ರಂಗಭೂಮಿ ನವಚೈತನ್ಯ ಪಡೆಯಲಿದೆ. ಕಲಾವಿದರು ಯಾವತ್ತಿಗೂ ಕಲಾ ಶ್ರೀಮಂತರು ಎಂಬ ಮಾನ್ಯತೆ ಇದ್ದೇ ಇದೆ. ಆದರೆ ಅಂತಹ ಶ್ರೀಮಂತರ ಪೈಕಿ ಕೆಲವರು ಕೊರೊನಾ ಕಾಲಘಟ್ಟದಲ್ಲಿ ಪ್ರದರ್ಶನವಿಲ್ಲದೆ “ಕಿಟ್’ ಪಡೆಯಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಕಲಾವಿದರು ಅಹಂ ತೊರೆದು ಧನ್ಯತಾ ಭಾವದಿಂದ ಕಲಾಮಾತೆಯ, ತುಳು ಭಾಷೆ, ಮಣ್ಣಿನ ಕಾರ್ಯವನ್ನು ಮಾಡಿದರೆ ತುಳು ಅಭಿಮಾನಿಗಳು ಯಾವತ್ತಿಗೂ ಕೈ ಬಿಡುವುದಿಲ್ಲ. ಬದಲಾಗಿ ಜಗತ್ತಿನಾದ್ಯಂತ ಇರುವ ಕಲಾಭಿಮಾನಿಗಳು ಪ್ರೀತಿಸುತ್ತಾರೆ. ಕಲಾವಿದರು ಎಲ್ಲರನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತುಳು ಭಾಷೆ ಮತ್ತು ಈ ನೆಲದ ಮಣ್ಣಿನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಣ; ಆ ಮೂಲಕ ನಾವು ಬೆಳೆಯೋಣ. – ವಿ.ಜಿ. ಪಾಲ್,
ಹಿರಿಯ ರಂಗಕರ್ಮಿ