Advertisement

ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ​​​​​​​

06:00 AM Oct 02, 2018 | |

ಬೆಂಗಳೂರು : ಹಿರಿಯ ನಾಗರಿಕರು ಸ್ವಾಭಿಮಾನದಿಂದ ಬದುಕಲು ಅನುಕೂಲವಾಗುವಂತೆ ಮಾಸಾಶನವನ್ನು ನವೆಂಬರ್‌ನಿಂದ 600 ರೂ.ಬದಲಿಗೆ ಒಂದು ಸಾವಿರ ರೂ. ನೀಡಲಿದ್ದೇವೆ. ಸರ್ಕಾರದ ಅವಧಿ ಪೂರ್ಣಗೊಳ್ಳುವುದರೊಳಗೆ ತಿಂಗಳಿಗೆ 5 ಸಾವಿರ ಸಿಗುವಂತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ಪ್ರಕಟಿಸಿದ್ದಾರೆ.

Advertisement

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಮಾಸಾಶನ 600 ರೂ.ನಿಂದ ಒಂದು ಸಾವಿರಕ್ಕೆ ಏರಿಸಿದ್ದೇವೆ. ಹಿರಿಯ ನಾಗರಿಕರು ಸ್ವಾಭಿಮಾನದಿಂದ ಬದುಕಲು ತಿಂಗಳಿಗೆ 5 ಸಾವಿರ ರೂ. ಸಿಗುವಂತಾಗಬೇಕು. ಹೀಗಾಗಿ ಮುಂದಿನ ವರ್ಷ ಮಾಸಾಶನವನ್ನು 2 ಸಾವಿರಕ್ಕೆ ಏರಿಸಲಿದ್ದೇವೆ. ಸರ್ಕಾರದ ಅವಧಿ ಮುಗಿಯುವುದರಲ್ಲಿ ಮಾಸಾಶನದ ಪ್ರಮಾಣ 5 ಸಾವಿರ ಆಗಲಿದೆ ಎಂದು ಹೇಳಿದರು.

ಗರ್ಭಿಣಿಯರ ಅನುಕೂಲಕ್ಕೆ ಹಾಗೂ ಮಕ್ಕಳ ಪಾಲನೆಗಾಗಿ ಪ್ರತಿ ತಿಂಗಳು 6 ಸಾವಿರದಂತೆ 6 ತಿಂಗಳಿಗೆ 36 ಸಾವಿರ ರೂ. ನೀಡುವ ಯೋಜನೆ ಚುನಾವಣೆಗೂ ಮೊದಲೇ ಘೋಷಣೆ ಮಾಡಿದ್ದೆವು. ಈ ಸಂಬಂಧ ಸಚಿವ ಸಂಪುಟದ ತೀರ್ಮಾನವೂ ಆಗಿದೆ. ನವೆಂಬರ್‌ನಿಂದ ಇದು ಕೂಡ ಜಾರಿಗೆ ಬರಲಿದೆ. ಈ ವರ್ಷ ತಿಂಗಳಿಗೆ ಎರಡು ಸಾವಿರದಂತೆ 6 ತಿಂಗಳು ನೀಡಲಿದ್ದೇವೆ. ಸರ್ಕಾರದ ಅವಧಿ ಮುಗಿಯುವುದರೊಳಗೆ ಗರ್ಭಿಣಿಯರಿಗೆ ತಿಂಗಳಿಗೆ 6 ಸಾವಿರದಂತೆ 36 ಸಾವಿರ ರೂ. ಸಿಗುವಂತೆ ಮಾಡುತ್ತೇವೆ. ಗರ್ಭಿಣಿ ಮತ್ತು ಮಗುವಿನ ಆರೈಕೆ ಸುಖಮಯವಾಗಿರಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.

ಹಿರಿಯ ನಾಗರಿಕರ  ರಕ್ಷಣೆ ಹಾಗೂ ಆರೈಕೆಗಾಗಿ ಸರ್ಕಾರದಿಂದಲೇ ಉತ್ತಮ ಸೌಲಭ್ಯ ನೀಡಲಾಗುತ್ತದೆ. ಸರ್ಕಾರದಿಂದ ನಡೆಯುತ್ತಿರುವ ವೃದ್ಧಾಶ್ರಮದಲ್ಲೇ ವೈದ್ಯಕೀಯ ಸೌಲಭ್ಯ ನೀಡುವ ಹಲವು ಕಾರ್ಯಕ್ರಮ ಜಾರಿಗೆ ತರಲಿದ್ದೇವೆ. ಹಿರಿಯ ನಾಗರಿಕರು ಗೌರವ, ಸಂತೋಷದಿಂದ ಬಾಳುವಂತಾಗಬೇಕು. ಪಾಲಕರನ್ನು ಎಂದಿಗೂ ಮರೆಯಬಾರದು. ಉದ್ಯೋಗಕ್ಕಾಗಿ ಊರು ಬಿಟ್ಟು ಬಂದವರಲ್ಲಿ ಕೆಲವರು ಪಾಲಕರನ್ನು ಮರೆಯುತ್ತಾರೆ. ಇನ್ನು ಕೆಲವರು ಉದ್ಯೋಗ ಇಲ್ಲದೇ ಪಾಲಕರನ್ನು ಮರೆಯುತ್ತಿದ್ದಾರೆ. ಯಾರು ಕೂಡ ಯಾವುದೇ ಕಾರಣಕ್ಕೂ ಪಾಲಕರನ್ನು ಕಡೆಗಣಿಸಬಾರದು ಎಂದು ಹೇಳಿದರು.

Advertisement

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮಾತ್ರವಲ್ಲದೇ ಶೇ.25ರಷ್ಟು ಬೇರೆ ವರ್ಗದ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುತ್ತಿದ್ದೇವೆ. ರಾಜ್ಯದ 480 ವಸತಿ ಶಾಲೆಗಳಲ್ಲಿ ಸ್ವಂತ ಕಟ್ಟಡ ಇಲ್ಲ ಎಂಬುದು ಗಮನಕ್ಕೆ ಬಂದಿದೆ. 4.50 ಸಾವಿರ ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುತ್ತಿದ್ದೇವೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ.ಜಯಮಾಲ ಮಾತನಾಡಿ, ಕೇರಳ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಿರಿಯ ನಾಗರಿಕರ ಮರಗುಳಿತನದ ಚಿಕಿತ್ಸೆಗಾಗಿ 10 ಆಸನದ ವ್ಯವಸ್ಥೆ ಇರುವ ವಿಶೇಷ ಪಾಲನ ಕೇಂದ್ರ ತೆರೆಯಬೇಕು. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಯು ಏಜ್‌ ಫ್ರೆàಂಡ್ಲಿ ಕಮ್ಯೂನಿಟಿ ಸ್ಥಾಪಿಸಿದೆ. ನಿಮ್ಹಾನ್ಸ್‌, ಕಾನೂನು ಸೇವಾ ಘಟಕ ಮತ್ತು ಕರ್ನಾಟಕ ಸಂಪನ್ಮೂಲ ಕೇಂದ್ರವು ಪ್ರಾಯೋಗಿಕವಾಗಿ  ಬೆಂಗಳೂರು ಮತ್ತು ಕೋಲಾರದಲ್ಲಿ ಏಜ್‌ ಫ್ರೆàಂಡ್ಲಿ ಕಮ್ಯೂನಿಟಿ ನಡೆಸುತ್ತಿದ್ದಾರೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರಂಭಿಸಿ ವಿಶ್ವ ಆರೋಗ್ಯ ಸಂಸ್ಥೆಯ ಸವಲತ್ತು ಇಲ್ಲಿಗೆ ಬರುವಂತೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಶಾಲಾ ಹಂತದಲ್ಲೇ ಮಕ್ಕಳಿಗೆ ಹಿರಿಯರನ್ನು ಗೌರವಿಸುವ ಮತ್ತು ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳುವ ಶಿಕ್ಷಣ ನೀಡಬೇಕು. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 57.92ಲಕ್ಷ ಹಿರಿಯ ನಾಗರಿಕರಿದ್ದು, ಅದರಲ್ಲಿ 36.66 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಇವರೆಗೆ 4.73 ಲಕ್ಷ ಕರೆ ಬಂದಿದ್ದು, ಅದರಲ್ಲಿ 49, 710 ದೂರುಗಳಿದ್ದು, 34244 ದೂರುಗಳನ್ನು ಇತ್ಯರ್ಥ ಪಡಿಸಿದ್ದೇವೆ. 14.65 ಲಕ್ಷ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡಿದ್ದೇವೆ. 25 ಕಡೆಗಳಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಬೀದರ್‌, ತುಮಕೂರು, ಕೋಲಾರ, ರಾಮನಗರ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಅತಿ ಶೀಘ್ರವೇ ಆರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಇಲಾಖೆ ನಿರ್ದೇಶಕ ಡಾ.ಸಿದ್ದರಾಜು ಮೊದಲಾದವರು ಇದ್ದರು.

ಸೇವಾ ಸಿಂಧು ವೆಬ್‌ಸೈಟ್‌ಗೆ ಚಾಲನೆ:
ಹಿರಿಯ ನಾಗರಿಕರಿಗೆ ಆನ್‌ಲೈನ್‌ ಗುರುತಿನ ಚೀಟಿ ನೀಡುವ ಸೇವಾ ಸಿಂಧು ವೆಬ್‌ಸೈಟ್‌ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ ನಂತರ ತಿಥಿ ಸಿನೆಮಾ ಖ್ಯಾತಿಯ ಗಡ್ಡಪ್ಪ (ಚನ್ನೇಗೌಡ)ಅವರಿಗೆ ವಿಶೇಷ ಸನ್ಮಾನ ಮಾಡಿದರು. ಶಿಕ್ಷಣ ಕ್ಷೇತ್ರದ ಡಾ.ಬಿ.ಬಿ.ಮಾರ್ಕಾಂಡೆ, ಕ್ರೀಡಾ ಕ್ಷೇತ್ರದ ಡಿ.ಎನ್‌.ಸಂಪತ್‌, ಕಾನೂನು ಕ್ಷೇತ್ರದ ಸದಾಶಿವ ಸಿದ್ದಪ್ಪ, ಸಾಹಿತ್ಯ ಕ್ಷೇತ್ರದ ಎಸ್‌.ಸಿ.ಶಂಕರ್‌, ಕಲಾ ಕ್ಷೇತ್ರದ ಚಿಂದೋಡಿ ಬಂಗಾರೇಶ್‌, ಸಮಾಜಸೇವಾ ಕ್ಷೇತ್ರದಿಂದ ವಿಜಯಲಕ್ಷ್ಮೀ ದೇಶಮಾನೆ, ಮಹಾದೇವಿ ಹಲ್ಲೂರು ಹಾಗೂ ಜಗದಾಂಬ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next