ಹುಬ್ಬಳ್ಳಿ: ನಮ್ಮನ್ನು ಪೋಷಿಸುವ ಭೂಮಿಯನ್ನು ಇನ್ನಾದರೂ ರಕ್ಷಿಸಬೇಕಿದೆ. ಆ ನಿಟ್ಟಿನಲ್ಲಿ ಸಸಿ ನೆಟ್ಟು ಬೆಳೆಸುವುದೇ ಭೂದೇವಿಯ ಪೂಜೆಯೆಂದು ಪಾಲಿಸಬೇಕಾಗಿದೆ ಎಂದು ವೃಕ್ಷಕ್ರಾಂತಿ ಅಭಿಯಾನದ ಹರಿಕಾರ ಬಿ.ಎಸ್. ಕೊಣ್ಣೂರ ಹೇಳಿದರು. ಇಲ್ಲಿನ ವಿದ್ಯಾನಗರದ ಅಕ್ಷಯ ಕಾಲೊನಿಯ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇಶಪಾಂಡೆ ಪ್ರತಿಷ್ಠಾನದ ಸಹಯೋಗದಲ್ಲಿ ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಜ ಮೊಳೆಯಲು ಬೊಗಸೆ ಮಣ್ಣು ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗಿಡ-ಮರಗಳು ಪ್ರಾಣವಾಯು ನೀಡುವ ಸಂಜೀವಿನಿ. ಉಸಿರಾಡುವವರೆಲ್ಲ ಸಸಿ ನೆಟ್ಟು ಹೆಮ್ಮರವಾಗಿ ಬೆಳೆಸಬೇಕು. ಮರಗಳೇ ಈ ಭೂಮಿಯನ್ನು ಅಮರವಾಗಿಸುವುದು. ಪ್ರಕೃತಿಯಲ್ಲಿನ ಹಸಿರು ಮನುಷ್ಯನ ದುರಾಸೆಯಿಂದ ಕ್ಷೀಣಿಸುತ್ತಿದೆ. ಜೀವರಾಶಿಗಳಿಗೆ ಇರುವುದೊಂದೇ ಭೂಮಿ. ಅದನ್ನು ವಿನಾಶದಂಚಿಗೆ ತಂದ ಮನುಷ್ಯನಿಗೆ ಇನ್ನೊಂದು ಭೂಮಿ ಸೃಷ್ಟಿಯಲು ಸಾಧ್ಯವಿಲ್ಲ ಎಂದರು.
ವಿಜ್ಞಾನ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ಪ್ರಕೃತಿಯನ್ನು ತಾನಿರುವಂತೆಯೇ ಬಿಟ್ಟಿದ್ದರೆ ಇಂದು ಪರಿಸರ ದಿನದ ಆಚರಣೆಗಳ ಅಗತ್ಯವಿರಲಿಲ್ಲ. ಮರಗಳನ್ನೆಲ್ಲ ಕಡಿದುಹಾಕಿ, ಇಡೀ ಭೂಮಿಯನ್ನೇ ಕಾಂಕ್ರೀಟ್ ಕಾಡಾಗಿಸಿ ಅದನ್ನೇ ಅಭಿವೃದ್ಧಿ ಎಂದು ಭಾವಿಸಿರುವ ಮನುಷ್ಯ ಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಎಲ್ಲವನ್ನೂ ತನ್ನ ದುರಾಸೆಯಿಂದ ವಿಷವಾಗಿಸಿದ್ದಾನೆ. ಜೀವಗ್ರಹದ ಎಲ್ಲ ಜೀವಿಗಳಿಗೂ ಕಂಟಕವಾಗಿದ್ದಾನೆ ಎಂದು ಹೇಳಿದರು.
ಶಿವಶಂಕರ ಗಾಣಗೇರ, ಇಮ್ರಾನ್ ಹಳ್ಳಿಕೇರಿ, ದೀಪಾ ಹಜೇರಿ, ಅಶ್ವಿನಿ ಟೊಂಗಳೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕುಸುಗಲ್ಲನ ಸರಕಾರಿ ಪ್ರೌಢಶಾಲೆ ಹಾಗೂ ನಗರದ ಆರ್.ಕೆ. ಕೊಕಾಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಿ.ಎಸ್. ಕೊಣ್ಣೂರ ಮಾರ್ಗದರ್ಶನದಲ್ಲಿ ವೆಚ್ಚವಿಲ್ಲದೆ ಸಸಿ ತಯಾರಿಸುವ ಕುರಿತು ತರಬೇತಿ ಪಡೆದರು. ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿದರು. ವಿಜ್ಞಾನ ಕೇಂದ್ರದ ಶಂಕರ ಕುರುಬರ, ಬಸವರಾಜ ತಡಹಾಳ, ಫಕ್ಕೀರೇಶ್ವರ ಮಡಿವಾಳರ, ಶಶಿಕಲಾ ಗೌರಿ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ದೀಪ್ತಿ ಗಾಯಕವಾಡ, ಪುಂಡಲೀಕ ದೇವರಮನಿ, ರಮೇಶ ಹಣಸಿ, ಬಸವರಾಜ ಮುದಗಲ್ಲ, ಜ್ಯೋತಿ ಕಾಪರೆ, ಹನ್ನಿಫಾ ಗೋಟೇಗಾರ ಇದ್ದರು. ನಿಂಗನಗೌಡ ಸತ್ತಿಗೌಡ್ರ, ಮಂಜುನಾಥ ಜಾಣಣ್ಣವರ ನಿರೂಪಿದರು.