Advertisement
ಮಹಾನಗರ: ಇಂದು (ಜೂ. 8) ವಿಶ್ವ ಸಾಗರ ದಿನ. ಸಮುದ್ರ ಮಾಲಿನ್ಯ ತಡೆಗಟ್ಟುವ ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಸ್ವಚ್ಛ ಸುಂದರ ಭಾರತ ನಿರ್ಮಾಣದ ಗುರಿ ಹೊಂದಿರುವಾಗಲೇ, ನಮ್ಮ ನೆರೆಯ ಸಮುದ್ರವನ್ನು ಕೂಡ ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿ ರೂಪಿಸುವ ಮಹಾನ್ ಸಂಕಲ್ಪ ನಮ್ಮದಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಹೆಚ್ಚಾ ಕಡಿಮೆ 168 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಈ ಪೈಕಿ, ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು, ಕಾಪು, ಮಲ್ಪೆ, ಮರವಂತೆ ಸೇರಿದಂತೆ ಹಲವು ಭಾಗಗಳು ಪ್ರವಾಸೋದ್ಯಮದ ಮೂಲಕವೇ ಪ್ರಸಿದ್ಧಿ ಪಡೆದಿವೆ. ಕಡಲಿನ ಸೌಂದರ್ಯವೇ ಇಲ್ಲಿ ಪ್ರವಾಸಿಗರ ಸ್ವರ್ಗವಾಗಿದೆ.
ಸ್ವಚ್ಛ ಕಡಲು ನಮ್ಮ ಆದ್ಯತೆಯಾಗಬೇಕು. ಕಡಲಿನ ದಡವೂ ಸ್ವಚ್ಛವಾಗಬೇಕು. ಕಡಲಿನಲ್ಲಿ ಸಂಚರಿಸುವ ಮೀನುಗಾರಿಕಾ ದೋಣಿಗಳು ಸಮುದ್ರ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಈಗ ಮೀನುಗಾರಿಕಾ ದೋಣಿಗಳು ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಇನ್ನಷ್ಟು ಪರಿಪೂರ್ಣ ಜಾಗೃತಿ ಮೂಡಬೇಕಿದೆ. ಬೋಟುಗಳು ಮಾಲಿನ್ಯ ರಹಿತವಾಗಿ ಮೀನುಗಾರಿಕೆಗೆ ನಡೆಸಿದರೆ ದೊಡ್ಡ ಆತಂಕವನ್ನು ನಿವಾರಿಸಿದಂತಾಗುತ್ತದೆ. ಇನ್ನು ನವಮಂಗಳೂರು ಬಂದರಿಗೆ ಆಗಮಿಸುವ ಬೃಹತ್ ಗಾತ್ರದ ಹಡಗುಗಳು ಕೂಡ ಇದೇ ಮಾದರಿಯನ್ನು ಅನುಸರಿಸಬೇಕು. ಅಪಾಯಕ್ಕೆ ಸಿಲುಕಿದ ಹಗಡುಗಳ ತೆರವು ಶೀಘ್ರವಾಗಲಿ
ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವ ದೋಣಿ, ಹಡಗು ತೆರವು ಮಾಡುವ ಕಾರ್ಯ ಕೂಡ ಆದಷ್ಟು ಬೇಗನೇ ಆಗಬೇಕು. ಯಾಕೆಂದರೆ, ಇತ್ತೀಚೆಗೆ ಕರಾವಳಿ ವ್ಯಾಪ್ತಿಯಲ್ಲಿ ನಡೆದ ಕೆಲವು ಹಡಗು ದುರಂತ ಘಟನೆಯಲ್ಲಿ ಮೊದಲಿಗೆ ಅದರಲ್ಲಿನ ತೈಲ ಸೋರಿಕೆಯಾಗಿ ನೀರಿಗೆ ಸೇರ್ಪಡೆಗೊಂಡ ಘಟನೆ ನಡೆದಿತ್ತು. ಇದೇ ನೀರು ಮೀನಿಗೆ ದೊರೆತು ಮತ್ತೆ ಅದು ಮನುಷ್ಯ ದೇಹ ಸೇರುವ ಅಪಾಯವೂ ಇದೆ. ಹೀಗಾಗಿ ಕಡಲಿನಲ್ಲಿ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತಾಗಿ ವಿಶೇಷ ಒತ್ತು ನೀಡಬೇಕಾದ ಆವಶ್ಯಕತೆ ಇದೆ.
Related Articles
ಕರಾವಳಿಯ ಸಮುದ್ರ ತೀರಗಳು ಪ್ರವಾಸೋದ್ಯಮದ ಮುಖ್ಯ ತಾಣಗಳು. ಇಲ್ಲಿಗೆ ದೂರದೂರಿನಿಂದ ಜನರು ಆಗಮಿಸುತ್ತಾರೆ. ತಾಸುಗಟ್ಟಲೆ ಸಮುದ್ರ ತೀರದಲ್ಲಿ ಕಾಲ ಕಳೆಯುವ ಜನರು ತಿಂಡಿ – ತಿನಿಸು ತಿಂದು ಸಮುದ್ರ ದಡದಲ್ಲಿ ಹಾಕಿ ಹೋಗುವವರೂ ಇದ್ದಾರೆ. ಕೆಲವರಂತೂ ಇನ್ನೂ ಸ್ವಲ್ಪ ಮುಂದೆ ಹೋಗಿ ಸಮುದ್ರದ ನೀರಿಗೆ ಹಾಕುತ್ತಾರೆ. ಇಂತಹ ಚಟುವಟಿಕೆಗಳಿಗೆ ಮೊದಲು ಕಡಿವಾಣ ಬೀಳಬೇಕಿದೆ. ಬೀಚ್ ಗಳನ್ನು ಸ್ವಚ್ಛವಾಗಿಡುವ ಮೂಲಕ ಸಾಗರವನ್ನು ನಾವೇ ಸ್ವಚ್ಛವಾಗೊಡೋಣ.
Advertisement
‘ಪ್ಲಾಸ್ಟಿಕ್ ತ್ಯಾಜ್ಯ ತಡೆ, ಸುರಕ್ಷಿತ ಸಾಗರಕ್ಕೆ ಪ್ರೇರಣೆ’‘ಪ್ಲಾಸ್ಟಿಕ್ ತ್ಯಾಜ್ಯ ತಡೆ ಹಾಗೂ ಸುರಕ್ಷಿತ ಸಾಗರಕ್ಕೆ ಪ್ರೇರಣೆ’ ಎನ್ನುವ ಘೋಷ ವಾಕ್ಯದೊಂದಿಗೆ ಈ ಬಾರಿ ಸಾಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ಸುಸ್ಥಿರ ಸಾಗರ ಸಂರಕ್ಷಣೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2008ರಿಂದ ವಿಶ್ವ ಸಾಗರ ದಿನಾಚರಣೆ
ವಿಶ್ವ ಸಾಗರ ದಿನವನ್ನು ಮೊದಲಿಗೆ 1992ರಲ್ಲಿ ಅನ್ ಅಫೀಶಿಯಲ್ ಆಗಿ ಹಲವು ದೇಶಗಳಲ್ಲಿ ಎನ್.ಜಿ.ಒ. ಹಾಗೂ ಸಂಘ ಸಂಸ್ಥೆಗಳ ಮುಖಾಂತರ ಆಚರಿಸಲಾಯಿತು. ಅನಂತರ ವಿಶ್ವದಾದ್ಯಂತ ಸುಮಾರು 2,000 ಸಂಸ್ಥೆಗಳು ವಿಶ್ವ ಸಾಗರ ದಿನವನ್ನು ಪ್ರಚಾರ ಪಡಿಸುವ ಮೂಲಕ ವಿಶ್ವ ಸಂಸ್ಥೆಯ ಮನ್ನಣೆ ಪಡೆಯುವುದಕ್ಕೋಸ್ಕರ ಮೂರು ವರ್ಷಗಳ ಕಾಲ ಬೇಡಿಕೆ ಚಳುವಳಿಯ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಇದರ ಫಲವಾಗಿ ವಿಶ್ವ ಸಂಸ್ಥೆ 2008ರಂದು ಇದಕ್ಕೆ ಅಂಗೀಕಾರವನ್ನಿಟ್ಟು ಜೂ. 8ರಂದು ವಿಶ್ವ ಸಾಗರ ದಿನವನ್ನಾಗಿ ಎಲ್ಲ ದೇಶಗಳಲ್ಲಿ ಆಚರಿಸುವ ಮೂಲಕ ಸಾಗರ ಸಂರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ. — ದಿನೇಶ್ ಇರಾ