Advertisement

ಇಂದು ಪರಿಸರ ದಿನ; ಭಾರತದ ಬದ್ಧತೆ ಹೇಗಿದೆ ಗೊತ್ತೇ?

11:12 AM Jun 05, 2018 | Sharanya Alva |

ಮತ್ತೊಂದು ವಿಶ್ವ ಪರಿಸರ ದಿನ ಬಂದಿದೆ. ನಾವು ನಮ್ಮ ಮಕ್ಕಳಿಂದ ಮಾಮೂಲಿನಂತೆ ನೀರು ಉಳಿಸಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯದಿಂದ ಈ ಪರಿಸರವನ್ನು ಸಂರಕ್ಷಿಸಿ, ಕಾಡು ಉಳಿಸಿ,ನಾಡು ಬೆಳೆಸಿ ಎಂದು ಘೋಷಣೆ ಕೂಗಿಸಿ, ಒಂದಿಷ್ಟು ಗಿಡ ನೆಡುವ ಶಾಸ್ತ್ರ ಮಾಡಿ ನಮ್ಮ ಪರಿಸರ ಕಾಳಜಿ ಮೆರೆದು ಸುಮ್ಮನಾಗುತ್ತೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಕುರಿತ ಯಾವ ವಿದ್ಯಮಾನಗಳು ನಡೆಯುತ್ತಿವೆ? ನಮ್ಮನ್ನು ಆಳುವ ಸರಕಾರಗಳ ಪರಿಸರ ಸಂಬಂಧಿ ಕಾಳಜಿ ಮತ್ತು ಧೋರಣೆ ಯಾವ ಮಟ್ಟದ್ದು? ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ಸಮಸ್ಯೆಗಳೇನು? ಅದಕ್ಕೆ ನಮ್ಮ ದೇಶದ ಕೊಡುಗೆ ಏನು? ಕ್ಯೂಟೋ ಪ್ರೋಟೋಕಾಲ್‌ ಒಪ್ಪಂದಗಳಿಗೆ ಭಾರತ ಹೇಗೆ ಸ್ಪಂದಿಸುತ್ತಿದೆ? ಜಾಗತಿಕ ತಾಪಮಾನ ತಗ್ಗಿಸುವಲ್ಲಿ ನಮ್ಮ ಪಾತ್ರವೇನು? ಇಂತಹ ನೂರಾರು ಪ್ರಶ್ನೆಗಳಿಗೆ ಬಹುಶಃ ಲಕ್ಷಾಂತರ ವಿದ್ಯಾವಂತ ಯುವಕರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ ಎಂಬುದೇ ಈ ದೇಶದ ಶಿಕ್ಷಣ ವ್ಯವಸ್ಥೆಯ ದೊಡ್ಡ ದುರಂತ!

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಹವಾಮಾನ ಬದಲಾವಣೆ ನಿಧಿ ಸ್ಥಾಪಿಸುವ ಘೋಷಣೆ ಮಾಡಿದ್ದರು. ಮೋದಿಯವರ ನಡೆ ಜಾಗತಿಕ ಮಟ್ಟದಲ್ಲಿ ಭಾರತದ ಬದ್ಧತೆಯನ್ನು ಎತ್ತಿಹಿಡಿದು ಪ್ರಪಂಚದಾದ್ಯಂತ ಪ್ರಶಂಸೆ ಗಳಿಸಿತ್ತು. ನೊಬಲ್‌ ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ, ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ಗೊರ್‌ ಮತ್ತು ರಾಜೇಂದ್ರ ಪಚೋರಿ “”ಭಾರತ ಪುನರ್‌ ನವೀಕರಿಸಿದ ಇಂಧನ ಕ್ಷೇತ್ರದಲ್ಲಿ ವಿಶ್ವವನ್ನು ಮುನ್ನಡೆಸಬಹುದು ಎಂಬುದನ್ನು ನಿಜ ಮಾಡಬೇಕಿದೆ. ಭಾರತ ಮುಂದುವರೆದ ದೇಶಗಳ ತಂತ್ರಜ್ಞಾನ
ದೊಂದಿಗೆ ಹೋಲಿಕೆಗೆ ಇಳಿಯದೆ 21ನೇ ಶತಮಾನದ ಹೊಸ ಶುದ್ಧ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ನಾವು ಹೊಂದಿರುವ ಭವಿಷ್ಯ ಮತ್ತು ನಾವು ಹಂಬಲಿಸುವ ಭವಿಷ್ಯ ಈ ಎರಡರ ನಡುವಿನ ವ್ಯತ್ಯಾಸ ಗೊತ್ತಿರಬೇಕು. ಮೊದಲಿನಿಂದಲೂ ಭಾರತ ತಾಪಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಬದಲಿಗೆ ಅಂತಾರಾಷ್ಟ್ರೀಯ ಒತ್ತಡವನ್ನು ನಿಭಾಯಿಸಲು ಮತ್ತು ಅಂತಾರಾಷ್ಟ್ರೀಯ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವನ್ನಷ್ಟೇ ಮಾಡುತ್ತಾ ಬಂದಿದೆ. ಇದಕ್ಕೆ ನಮ್ಮ ರಾಷ್ಟ್ರೀಯ ಆಯವ್ಯಯವೇ ಸಾಕ್ಷಿಯಾಗಿದೆ” ಎಂದು ಅಭಿಪ್ರಾಯ  ಪಟ್ಟಿದ್ದರು. ಮೊದಲ ಬಾರಿಗೆ ಮೋದಿ ಸರ್ಕಾರ ಹವಾಮಾನ ಬದಲಾವಣೆಗೆ ಬಜೆಟ್‌ನಲ್ಲಿ ನಿಧಿ ಸ್ಥಾಪಿಸುವ ಘೋಷಣೆ ಮಾಡುವ ಮೂಲಕ ತನ್ನ ಬದ್ಧತೆ ಮೆರೆದಿತ್ತು.

ಭಾರತ ಆಗಸ್ಟ್‌ 2002ರಲ್ಲಿ ಕೊಟೊಪ್ರೊಟೊಕಾಲ್‌ಗೆ ಸಹಿ ಹಾಕಿದೆ. ತೀವ್ರಗೊಳ್ಳುತ್ತಿರುವ ಕೈಗಾರಿಕೀಕರಣ ಮತ್ತು ಆರ್ಥಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಹೆಚ್ಚು ಹೆಚ್ಚು ಇಂಗಾಲ ಹೊರಸೂಸುವಿಕೆಗೆ ಕಾರಣವಾಗುತ್ತಿವೆ ಎಂದು ಮುಂದುವರಿದ ದೇಶಗಳು ಆಕ್ಷೇಪವೆತ್ತಿವೆ. ಅಭಿವೃದ್ಧಿಶೀಲ ದೇಶಗಳ ಕೊಡುಗೆ ಅಗ್ಗದ ಎಮಿಶನ್‌ ಕುಗ್ಗಿಸುವಿಕೆಯಿಂದಲ್ಲ, ಬದಲಾಗಿ ತಾಂತ್ರಿಕ ಬದಲಾವಣೆಗಳಿಂದ, ಜೀವನ ಶೈಲಿಯ ಬದಲಾವಣೆ ಗಳಿಂದ ಆಗಬೇಕು. ಈಗಿನ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದೇ ಅಭಿವೃದ್ಧಿಶೀಲ ದೇಶಗಳಿಗೆ ಮಾಡುವ ಅನ್ಯಾಯ. ಅತಿ ಹೆಚ್ಚು ಅನಿಲ ಹೊರಸೂಸುವ ಅಮೆರಿಕದಂತಹ ದೇಶಗಳ ಮಾನದಂಡದಿಂದಲೇ ಭಾರತದಂತಹ ದೇಶಕ್ಕೆ ಶೂನ್ಯ ಹೊರಸೂಸುವಿಕೆಗೆ ಒತ್ತಡ ತರುವುದು ನ್ಯಾಯ ಸಮ್ಮತವಲ್ಲ ಎಂಬ ಅಭಿಪ್ರಾಯವಿದೆ. ಇದೆಲ್ಲಾ ಸರಿಯೇ! ಆದಾಗ್ಯೂ ಒಪ್ಪಂದದ
ನಂತರ ನಮ್ಮ ತಾತ್ವಿಕ ಬದ್ಧತೆ ಏನಿತ್ತು? ಅದಕ್ಕೆ ಪೂರಕವಾಗಿ ನಾವು ನಡೆದುಕೊಂಡಿದ್ದೇವೆಯೇ ಎಂಬುದನ್ನೂ ಯೋಚಿಸಬೇಕು.

ಅಭಿವೃದ್ಧಿಶೀಲ ದೇಶಗಳು ತಮಗೆ ಅನುಕೂಲವೆನಿಸುವ ಗುರಿಗಳನ್ನು ಹೊಂದುವ ಹಕ್ಕು ಪಡೆದಿವೆ ಎಂಬುದನ್ನು ಪರಿಸರ ತಜ್ಞರು ಒತ್ತಿ ಹೇಳಿದ್ದಾರೆ. ಆದರೆ ಭಾರತದ ಮಟ್ಟಿಗೆ ಹೇಳುವುದಾದರೆ ಹಿಂದಿನ ಪಂಚವಾರ್ಷಿಕ ಯೋಜನೆಗಳಲ್ಲೂ ಪರಿಸರ ಸಂಬಂಧಿ ಅಂಶಗಳಿಗೆ ಅಂತಹ ಮಹತ್ವವೇನೂ ಸಿಕ್ಕಿಲ್ಲ. ಪರಿಸರಕ್ಕೆ ಇರುವ ಬೆದರಿಕೆ ಕುರಿತಂತೆ ಎಂದೂ ಭಾರತ ತಲೆಕೆಡಿಸಿ ಕೊಂಡಿಲ್ಲ. ನಾವು ಬದುಕುಳಿಯುವ ಹೊರಸೂಸುವಿಕೆ ಪಶ್ಚಿಮ ದೇಶಗಳ ವೈಭೋಗಗಳಾಗಿವೆ. ಯುಪಿಎ ಸರ್ಕಾರವಿದ್ದಾಗ ಪರಿಸರ ಹಾಗೂ ಅರಣ್ಯ ಸಂರಕ್ಷಣೆಗೆ ವರ್ಷದಿಂದ ವರ್ಷಕ್ಕೆ ಬಜೆಟ್‌ನಲ್ಲಿ ಮೀಸಲಿಡುತ್ತಿದ್ದ ಅನುದಾನದ ಪ್ರಮಾಣ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. 2013-14ಕ್ಕೆ ನಿಗದಿಪಡಿಸಲಾಗಿದ್ದ ಬಜೆಟ್‌ ವೆಚ್ಚವನ್ನು ರೂ.2430 ಕೋಟಿಗಳಿಂದ ರೂ.1890 ಕೋಟಿಗಳಿಗೆ ತಗ್ಗಿಸಲಾಯಿತು. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ 2013-14ನೇ ಸಾಲಿಗೆ ಮೀಸಲಿಟ್ಟ ರೂ.745 ಕೋಟಿಯನ್ನು ರೂ.491 ಕೋಟಿಗೆ ಇಳಿಸಲಾಯಿತು.

ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಹವಾಮಾನ ಬದಲಾವಣೆ ನಿಧಿ ಸ್ಥಾಪಿಸುವ ಘೋಷಣೆ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಬದ್ಧತೆ ಯನ್ನು ಎತ್ತಿಹಿಡಿದಿತ್ತು. ಹವಾಮಾನ ಬದಲಾವಣೆ ಕುರಿತಂತೆ ಭಾರತ ಮೊದಲ ಬಾರಿಗೆ ಇಂತಹ ಒಂದು ಐತಿಹಾಸಿಕ ನಿರ್ಣಯ ಕೈಗೊಂಡಿರುವುದನ್ನು ಹಲವು ಪರಿಸರ ಸಂಘಟನೆಗಳು ಮುಕ್ತ ಕಂಠದಿಂದ ಶ್ಲಾ ಸಿದ್ದವು. ಆದರೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ನಂತರದ ಬೆಳವಣಿಗೆಗಳು ಅಷ್ಟೇನೂ ಆಶಾ ದಾಯಕವಾಗಿಲ್ಲ. ನರೇಂದ್ರ ಮೋದಿ ತಮ್ಮ ಚೊಚ್ಚಲ ಬಜೆಟ್‌ ನಲ್ಲಿ( 2015-16) ಪರಿಸರ ಹಾಗೂ ಅರಣ್ಯಖಾತೆಗೆ ರೂ.1521 ಕೋಟಿ (ಹಿಂದಿನ ಸಾಲಿಗಿಂತ ರೂ. 78 ಕೋಟಿ ಕಡಿಮೆ) ಅನುದಾನ ನೀಡಿದ್ದರು. ಆ ನಂತರ ಕ್ರಮವಾಗಿ 2328 ಕೋಟಿ (2016-17), ರೂ.2675 ಕೋಟಿ ( 2017-18) ರೂ ಮೀಸಲಿಡಲಾಗಿತ್ತು. ಮತ್ತೆ ಈ ಬಾರಿಯೂ(2018-19) ಅಷ್ಟೇ ಹಣವನ್ನು ನೀಡಲಾಗಿದೆ.

Advertisement

ಆದರೆ ಬಜೆಟ್‌ನಲ್ಲಿ ನಿಗದಿಪಡಿಸಲಾಗಿರುವ ಪೂರಾ ಹಣವೂ ಸಹ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಮರ್ಪಕವಾದ ರೀತಿಯಲ್ಲಿ ವಿನಿಯೋಗವಾಗುತ್ತಿಲ್ಲ. 2016- 17ನೇ ಸಾಲಿನ ಪರಿಷ್ಕೃತ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 2328 ಕೋಟಿ ಯಲ್ಲಿ ಶೇಕಡಾ 1521 ಕೋಟಿ ಮಾತ್ರ ವಿನಿಯೋಗವಾಗಿದೆ. ಹುಲಿ, ಪ್ರಾಕೃತಿಕ ಸಂಪನ್ಮೂಲ ಮತ್ತು ವನ್ಯಜೀವಿ ಸಂರಕ್ಷಣೆಯ ಸಮಗ್ರ ಅಭಿವೃದ್ಧಿ ಯೋಜನೆಗೆ ಈ ಬಾರಿ ಮೀಸಲಿಟ್ಟಿದ್ದ 850 ಕೋಟಿಯಲ್ಲಿ 566 ಕೋಟಿಗೆ ಮಾತ್ರ ಕ್ರಿಯಾಯೋಜನೆ ರೂಪಿಸಲಾಗಿದೆ, ಹುಲಿ ಸಂರಕ್ಷಣೆಗೆ ಕಳೆದ ಬಾರಿಗಿಂತ 25 ಕೋಟಿ ಕಡಿಮೆ ಅನುದಾನ( 350ಕೋಟಿ) ನೀಡಲಾಗಿದೆ. ಆನೆ ಸಂರಕ್ಷಣೆಗೆ ಕಳೆದ ವರ್ಷಕ್ಕಿಂತ 5 ಕೋಟಿ ಮಾತ್ರ ಹೆಚ್ಚು ಹಣ ನೀಡಲಾಗಿದೆ. ಸ್ವತ್ಛ ಇಂಧನ ತೆರಿಗೆ (ಕ್ಲೀನ್‌ ಎನರ್ಜಿ ಸೆಸ್‌) ವಿಧಿಸಿಯೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯ ಅನುದಾನ ನೀಡಲಾಗುತ್ತಿಲ್ಲ ಮತ್ತು ಅದನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿಲ್ಲ ಎಂಬದು ನಿಜಕ್ಕೂ ವಿಪರ್ಯಾಸದ ಸಂಗತಿ.

ಸ್ವತ್ಛ ಭಾರತದ ಪರಿಕಲ್ಪನೆಗೆ ಬದ್ಧವಾಗಿರುವ ನರೇಂದ್ರ ಮೋದಿ ಸರ್ಕಾರ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಕೇವಲ 20 ಕೋಟಿ ಅನುದಾನ ಕೊಟ್ಟಿದೆ. ಕಳೆದ ವರ್ಷ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ.19ರಷ್ಟು ಹೆಚ್ಚಿನ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿ ಕೇವಲ 4.5ರಷ್ಟು ಹೆಚ್ಚು ಅನುದಾನ ಮಾತ್ರ ಹೆಚ್ಚಿಸಲಾಗಿದೆ.

ಮಾಲಿನ್ಯದಿಂದ ಉಸಿರುಕಟ್ಟಿ ನರಳುತ್ತಿರುವ ದೆಹಲಿಯೊಂದಕ್ಕೇ ಇದು ಸಾಕೇ? ಹವಾಮಾನ ಬದಲಾವಣೆ ನಿಧಿ ಸ್ಥಾಪಿಸಲು ಘೋಷಿಸಿದ್ದ ಮೋದಿಯವರು 2017-18ನೇ ಸಾಲಿನಲ್ಲಿ ಹವಾಮಾನ ಬದಲಾ ವಣೆ ಕುರಿತ ಕ್ರಿಯಾಯೋಜನೆಗೆ ನೀಡಿರುವುದು ಕೇವಲ 40 ಕೋಟಿ. ಹೀಗಾದರೆ ಸ್ವತ್ಛ ತಂತ್ರಜ್ಞಾನ ಹಾಗೂ ಸೌರಶಕ್ತಿ ಘಟಗಳಿಗೆ ಉತ್ತೇಜನ ನೀಡುವ ಬದ್ಧತೆ ಎಲ್ಲಿಂದ ಬರುತ್ತದೆ ? ವಿತ್ತ ಸಚಿವ ಅರುಣ್‌ ಜೇಟ್ಲಿಯವರು ಕಳೆದ ಎರಡು ವರ್ಷ  ಗಳಿಂದ ಅರಣ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ಶುದ್ಧ ಇಂಧನ ತಂತ್ರಜಾnನ, ಸೌರವಿದ್ಯುತ್‌ ಮೊದ ಲಾದ ನವೀಕರಿಸಬಹುದಾದ ಇಂಧನ ಕುರಿತಂತೆ ಬಜೆಟ್‌ ಬಾಷಣದಲ್ಲಿ ಒಂದು ಮಾತೂ ಆಡಿಲ್ಲ. ಇದು ಎನ್‌ಡಿಯ ಸರಕಾರಕ್ಕೆ ಪರಿಸರ ಸಂರಕ್ಷಣೆ ಬಗ್ಗೆ ಇರುವ ಕಾಳಜಿಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ. ಏಕೆಂದರೆ ಭಾರತದ ಹಸಿರು ವರ್ಚಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕಪ್ಪು$ಮಸಿ ಹತ್ತಿದೆ. ಈಚೆಗೆ ಸ್ವಿಜರ್‌ಲೆಂಡ್‌ನ‌ಲ್ಲಿ ಬಿಡುಗಡೆ ಮಾಡಲಾದ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (ಎಕನಾಮಿಕ್‌ ಪರ್‌ಫಾರೆನ್ಸ್‌ ಇಂಡೆಕ್ಸ್‌)ದಲ್ಲಿ ಭಾರತ ಲಿಬಿಯಾ, ಅಫ‌ಘಾನಿ ಸ್ತಾನ, ಇರಾಕ್‌ಗಿಂದ ಕೆಳಗೆ ಕುಸಿದಿದ್ದು 180 ರಾಷ್ಟ್ರಗಳ ಪಟ್ಟಿಯಲ್ಲಿ 177ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದರೆ ಇದು ತೀವ್ರ ಮುಜುಗರದ ವಿಷಯವಲ್ಲವೇ? ಇನ್ನು ಈ ಬಾರಿಯ ಆರ್ಥಿಕ ವಿಶ್ಲೇಷಣೆಯಲ್ಲಿ ಸಹ ಹವಾಮಾನ ಬದಲಾವಣೆಯ ಕಾರಣಗಳಿಗಾಗಿ ರೈತರ ವರಮಾನ ಶೇ.25ರಷ್ಟು ಕುಸಿಯುವುದಾಗಿ ಹೇಳಲಾಗಿದೆ. 

ಆದರೆ ಕೇಂದ್ರ ಸರ್ಕಾರ 2022ರವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಯೋಜನೆಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಇದು ಹೇಗೆ ಸಾಧ್ಯ? ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಗೆ ಕಳೆದ ಬಾರಿಗಿಂತ ಶೇ. 6.5ರಷ್ಟು ಮಾತ್ರ ಹೆಚ್ಚುವರಿ ಅನುದಾನ ನೀಡಲಾಗಿದೆ. (7.7 ಬಿಲಿಯನ್‌). ಹಾಗೇ ಸ್ವತ್ಛ ಗಂಗಾ ಯೋಜನೆಗೆ ಕಳೆದ ಬಾರಿಯಷ್ಟೇ ಅನುದಾನ ಗೊತ್ತುಪಡಿಸಿ  ರುವುದೂ ಸಹ ಪರಿಸರವಾದಿ ಗಳಿಗೆ ನಿರಾಸೆ ಮೂಡಿಸಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಮೋದಿಯವರು ಮಹತ್ವಾ ಕಾಂಕ್ಷೆಯ ಪರಿಸರ ಬದ್ಧತೆ ಎನಿಸಿದ್ದ ರಾಷ್ಟ್ರೀಯ ಸ್ವತ್ಛ ಯೋಜನಾ ನಿಧಿ ಮತ್ತು ಜಲ ತೆರಿಗೆ ನಿಧಿ (ಸುಮಾರು 56700 ಕೋಟಿ ರೂ) ಎರಡನ್ನೂ ಜಿಎಸ್‌ಟಿ ಕಾರಣಗಳಿಗಾಗಿ ವಿಸರ್ಜಿಸ ಲಾಗಿದೆ. ಇದಂತೂ ಕೇಂದ್ರ ಸರಕಾರದ ಪರಿಸರ ಧೋರಣೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ನವೀಕರಿಸಬಹುದಾದ ಇಂಧನ, ಸೌರಶಕ್ತಿ, ಪವನಶಕ್ತಿಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ತೃಪ್ತಿಕರ ಅನುದಾನ ಘೋಷಿಸಿಲ್ಲ. 

ಸೋಲಾರ್‌ ಪಂಪ್‌ ಉಪಯೋ ಗಿಸುತ್ತಿರುವ ರೈತರು ಹೆಚ್ಚುವರಿ ವಿದ್ಯುತ್‌ ಮಾರಲು ಸರಕಾರ ನಿರ್ದಿಷ್ಟ ನೀತಿಯನ್ನೂ ರೂಪಿ ಸಿಲ್ಲ. ಆದರೂ ಕೇಂದ್ರ ಸರಕಾರ 2022ರ ವೇಳೆಗೆ ಸುಮಾರು 175. ಜಿಡಬ್ಲ್ಯು ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇದ್ಹೇಗೆ ಕಾರ್ಯ  ಸಾಧುವಾಗಬಲ್ಲದು ಎಂದು ವಿಜ್ಞಾನ-ಪರಿಸರ ಕೇಂದ್ರದ ಡಿಡಿಜಿ ಚಂದನ್‌ ಭೂಷಣ್‌, ಪರಿಸರ ತಜ್ಞ ಕನ್ನಿಕಾ ಚಾವ್ಲಾ, ಕೆ. ಕಸ್ತೂರಿ ರಂಗನ್‌ ಮೊದಲಾದವರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಯಾವ ಉತ್ತರವಿದೆ ?

*ತುರುವೇಕೆರೆ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next