Advertisement

World Cup; ರಾಹುಲ್‌ ಒತ್ತಾಸೆಯಿಂದ ಕೊಹ್ಲಿ ಶತಕ: ತ್ಯಾಗಕ್ಕೆ ಸಿದ್ಧರಾಗಿದ್ದರು!

11:01 PM Oct 20, 2023 | Team Udayavani |

ಪುಣೆ: ವಿರಾಟ್‌ ಕೊಹ್ಲಿ ಶತಕದ ಬಯಕೆ ಹೊಂದಿರಲಿಲ್ಲ. ಸೆಂಚುರಿ ತ್ಯಾಗಕ್ಕೆ ಅವರು ಸಿದ್ಧರಾಗಿದ್ದರು. ಆದರೆ ನಾನೇ ಅವರಿಗೆ ಒತ್ತಾಯಿಸಿದೆ. ಶತಕ ಬರುವುದಿದ್ದರೆ ಬಂದೇ ಬಿಡಲಿ ಎಂದು ಒಂಟಿ ರನ್‌ ನಿರಾಕರಿಸಿದೆ’ ಎಂಬುದಾಗಿ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸಾಧಿಸಿದ ಗೆಲುವಿನ ಬಳಿಕ ಅವರು ಮಾಧ್ಯಮದವರಲ್ಲಿ ಮಾತಾಡುತ್ತಿದ್ದರು.

Advertisement

“ಕೊಹ್ಲಿ ಬಹಳ ಗೊಂದಲದಲ್ಲಿದ್ದರು. ಕೊನೆಯ 3-4 ಓವರ್‌ಗಳಲ್ಲಿ ಸಿಂಗಲ್‌ ರನ್‌ ನಿರಾಕರಿಸುವುದು ಸರಿಯಲ್ಲ ಎಂಬುದು ಅವರ ಭಾವನೆಯಾಗಿತ್ತು. ತಾನು ವೈಯಕ್ತಿಕ ಮೈಲುಗಲ್ಲು ನೆಡಲೆಂದೇ ಹೀಗೆ ಮಾಡುತ್ತಿದ್ದೇನೆ ಎಂದು ಜನರು ಆಡಿಕೊಳ್ಳುವ ಅಪಾಯವಿತ್ತು ಎಂದು ಅವರು ಭಾವಿಸಿದ್ದರು. ಆದರೆ ಈ ಸಂದರ್ಭದಲ್ಲಿ ನಾನೇ ಅವರನ್ನು ಒಪ್ಪಿಸಿ ಶತಕ ಪೂರ್ತಿಗೊಳಿಸುವಂತೆ ಹೇಳಿದೆ. ಈ ಪಂದ್ಯದಲ್ಲಿ ನಾವು ಸುಲಭ ಜಯ ಸಾಧಿಸುವ ಹಾದಿಯಲ್ಲಿದ್ದೆವು. ಹೀಗಾಗಿ ನೀವು ಶತಕಕ್ಕೆ ಪ್ರಯತ್ನಿಸಿ ಎಂದು ಹೇಳಿದೆ’ ಎಂಬುದಾಗಿ ರಾಹುಲ್‌ ಪಂದ್ಯದ ಕೊನೆಯ ಹಂತವನ್ನು ತೆರೆದಿರಿಸಿದರು.

ಅಂತಿಮವಾಗಿ ನಾಸುಮ್‌ ಅಹ್ಮದ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ವಿರಾಟ್‌ ಕೊಹ್ಲಿ, ತಂಡದ ಗೆಲುವು ಹಾಗೂ ತಮ್ಮ 48ನೇ ಏಕದಿನ ಸೆಂಚುರಿಯನ್ನು ಒಟ್ಟಿಗೇ ಸಾರಿದರು. ಇನ್ನೊಂದು ಶತಕ ಬಾರಿಸಿದರೆ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವದಾಖಲೆಯನ್ನು ಸರಿದೂಗಿಸಲಿದ್ದಾರೆ. ಅನಂತರದ್ದು 50ನೇ ಶತಕ ಸಂಭ್ರಮದ ಅಸಾಮಾನ್ಯ ಸಾಧನೆ. ಈ ವಿಶ್ವಕಪ್‌ನಲ್ಲೇ ಇದಕ್ಕೆ ಕಾಲ ಕೂಡಿಬರಬಹುದು.

3ನೇ ವಿಶ್ವಕಪ್‌ ಸೆಂಚುರಿ
ಇದು ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಬಾರಿಸಿದ 3ನೇ ಸೆಂಚುರಿ. ಚೇಸಿಂಗ್‌ ವೇಳೆ ಮೊದಲನೆಯದು. ವಿಶ್ವಕಪ್‌ನಲ್ಲಿ ಅತ್ಯಧಿಕ 7 ಶತಕ ಬಾರಿಸಿದ ಭಾರತೀಯ ದಾಖಲೆ ರೋಹಿತ್‌ ಶರ್ಮ ಹೆಸರಲ್ಲಿದೆ. ಸಚಿನ್‌ ತೆಂಡುಲ್ಕರ್‌ 6, ಸೌರವ್‌ ಗಂಗೂಲಿ 4, ಶಿಖರ್‌ ಧವನ್‌ 3 ಶತಕ ಹೊಡೆದಿದ್ದಾರೆ.

ಇದರೊಂದಿಗೆ ವಿರಾಟ್‌ ಕೊಹ್ಲಿ 5 ಏಕದಿನ ತಾಣಗಳಲ್ಲಿ 500 ರನ್‌ ಪೂರ್ತಿಗೊಳಿಸಿದರು. ಅವರು ಪುಣೆಯಲ್ಲಿ ಈ ಸಾಧನೆಗೈದ ಭಾರತದ ಮೊದಲ ಆಟಗಾರ. ಉಳಿದಂತೆ ಢಾಕಾದಲ್ಲಿ 800 ರನ್‌, ಕೊಂಬೊದಲ್ಲಿ 644 ರನ್‌, ವಿಶಾಖಪಟ್ಟಣದಲ್ಲಿ 587 ರನ್‌, ಪೋರ್ಟ್‌ ಆಫ್ ಸ್ಪೇನ್‌ನಲ್ಲಿ 571 ರನ್‌ ಬಾರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next