Advertisement
ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್ ಹೋರಾಟ ನೀಡಿ ಗೆಲ್ಲುವ ಮೂಲಕ ತನ್ನ ಅಭಿಯಾನ ಆರಂಭಿಸಿತ್ತು. ಬಳಿಕ ಅಫ್ಘಾನಿಸ್ಥಾನ ವನ್ನು ಕೆಡವಿತು. 3ನೇ ಮುಖಾಮುಖೀಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನಕ್ಕೆ 7 ವಿಕೆಟ್‌ಗಳ ಏಟು ಬಿಗಿಯಿತು. ಅನಂತರ ಬಾಂಗ್ಲಾದೇಶವನ್ನೂ ಇಷ್ಟೇ ಅಂತರದಿಂದ ಕೆಡವಿತು. ಇವೆಲ್ಲವೂ ವೀರೋಚಿತ ಗೆಲುವುಗಳೇ ಆಗಿದ್ದವು.
ಆದರೆ ನ್ಯೂಜಿಲ್ಯಾಂಡ್ ಸವಾಲು ಸುಲಭದ್ದಲ್ಲ. ಅದರಲ್ಲೂ ವಿಶ್ವಕಪ್‌ನಲ್ಲಿ ಈ ಬ್ಲ್ಯಾಕ್‌ಕ್ಯಾಪ್ಸ್ ಭಾರತಕ್ಕೆ ಆತಂಕ ಒಡ್ಡುತ್ತಲೇ ಬಂದಿದೆ. 9ರಲ್ಲಿ 5 ಪಂದ್ಯಗಳನ್ನು ನ್ಯೂಜಿಲ್ಯಾಂಡ್ ಜಯಿಸಿದೆ. ಭಾರತ ಗೆದ್ದದ್ದು ಮೂರರಲ್ಲಿ ಮಾತ್ರ. 2019ರ ಸೆಮಿಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ಪಡೆ ಭಾರತವನ್ನು ಕೂಟದಿಂದಲೇ ಹೊರದಬ್ಬಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದು ಭಾರತದ ಮೊದಲ ಗುರಿ ಆಗಬೇಕು.
Related Articles
ರವಿವಾರದ ಮೇಲಾಟದಲ್ಲಿ ಭಾರತ ಆತಂಕ ಪಡುವಂಥ ಕಾರಣವೊಂದಿದೆ. ಅದೆಂದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಾಳಾಗಿ ಹೊರಗುಳಿದಿರುವುದು. ಇವರ ಸ್ಥಾನವನ್ನು ತುಂಬ ಬಲ್ಲ ಮತ್ತೋರ್ವ ಸಮರ್ಥ ಸವ್ಯಸಾಚಿ ಇಲ್ಲ ಎಂಬುದು ಭಾರತದ ದೊಡ್ಡ ಕೊರತೆ. ಇದರಿಂದ ತಂಡದ ಸಮತೋಲನ ಖಂಡಿತ ತಪ್ಪಲಿದೆ.
Advertisement
ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಶನಿವಾರದ ಅಭ್ಯಾಸ ವೇಳೆ ಸಮಸ್ಯೆಗೆ ಸಿಲುಕಿದ್ದಾರೆ. ಇಶಾನ್ ಕಿಶನ್ ಅವರಿಗೆ ಕುತ್ತಿಗೆಯ ಭಾಗಕ್ಕೆ ಜೇನುನೋಣ ಕಡಿದಿದೆ. ತ್ರೋಡೌನ್ ಸ್ಪೆಷಲಿಸ್ಟ್ ರಘು ಅವರ ಚೆಂಡಿನೇಟಿಗೆ ಸೂರ್ಯಕುಮಾರ್ ಅವರ ಮೊಣಕೈಗೆ ಏಟಾಗಿದೆ. ಹೀಗಾಗಿ ಪಾಂಡ್ಯ ಬದಲು ಯಾರು ಎಂಬ ಪ್ರಶ್ನೆ ಜಟಿಲಗೊಂಡಿದೆ.
ಅನುಭವಿ ಮೊಹಮ್ಮದ್ ಶಮಿ ಕೂಡ ಪಾಂಡ್ಯ ಸ್ಥಾನ ತುಂಬಬಹುದು. ಆದರೆ ಇವರಿಗೆ ಬ್ಯಾಟಿಂಗ್ ಅಷ್ಟಕ್ಕಷ್ಟೇ. ಶಾರ್ದೂಲ್ ಠಾಕೂರ್ ಈಗಾಗಲೇ ಆಡುವ ಬಳಗದಲ್ಲಿದ್ದರೂ ಇವರ ಆಟ ವಿಶ್ವಕಪ್ ಮಟ್ಟದಲ್ಲಿಲ್ಲ. ಇನ್ನುಳಿದಿರುವುದು ಆರ್. ಅಶ್ವಿನ್. ನ್ಯೂಜಿಲ್ಯಾಂಡ್‌ನಂಥ ಬಲಿಷ್ಠ ತಂಡದೆದುರಿನ ಪಂದ್ಯದ ವೇಳೆಯೇ ಭಾರತಕ್ಕೆ ಈ ಸಮಸ್ಯೆ ಕಾಡಿದ್ದೊಂದು ವಿಪರ್ಯಾಸ.
ಟೀಮ್ ಇಂಡಿಯಾ ಪಾಲಿನ ಹೆಗ್ಗಳಿಕೆಯೆಂದರೆ ಬ್ಯಾಟಿಂಗ್ ಸರದಿ ಬಲಿಷ್ಠವಾಗಿರುವುದು ಹಾಗೂ ಎಲ್ಲರೂ ಫಾರ್ಮ್ನಲ್ಲಿರುವುದು. ರೋಹಿತ್, ಗಿಲ್, ಕೊಹ್ಲಿ, ಅಯ್ಯರ್ ಮತ್ತು ರಾಹುಲ್ ಭಾರತದ ಕ್ರಿಕೆಟ್ ಅಭಿಮಾನಿಗಳ ನಂಬಿಕೆಯನ್ನು ಸಾಕಾರಗೊಳಿಸುತ್ತಲೇ ಬಂದಿದ್ದಾರೆ. ಇವರು ಬೌಲ್ಟ್, ಹೆನ್ರಿ, ಫರ್ಗ್ಯುಸನ್ ಅವರ ವೇಗದ ದಾಳಿಯನ್ನು, ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಅವರ ಬೌಲಿಂಗ್ ದಾಳಿಯನ್ನು ನಿಭಾಯಿಸಿ ನಿಂತಾರೆಂಬ ನಿರೀಕ್ಷೆ ಇದೆ.
ಕೇನ್, ಸೌಥಿ ಗೈರುನ್ಯೂಜಿಲ್ಯಾಂಡ್ ತಂಡದಲ್ಲಿ ಇಬ್ಬರು ಅನು ಭವಿಗಳ ಗೈರು ಎದ್ದು ಕಾಣುತ್ತಿದೆ. ಇವರೆಂದರೆ, ನಾಯಕ ಕೇನ್ ವಿಲಿಯಮ್ಸನ್ ಮತ್ತು ವೇಗಿ ಟಿಮ್ ಸೌಥಿ. ಆದರೆ ಇವರ ಗೈರಲ್ಲೂ ಕಿವೀಸ್ ಅಸಾಮಾನ್ಯ ಪ್ರದರ್ಶನ ಕಾಯ್ದುಕೊಂಡು ಬಂದಿರುವುದನ್ನು ಮೆಚ್ಚಲೇ ಬೇಕು. ಆರಂಭಿಕ ಪಂದ್ಯದಲ್ಲೇ ಚಾಂಪಿ ಯನ್ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಬಗ್ಗು ಬಡಿಯುವ ಮೂಲಕ ನ್ಯೂಜಿಲ್ಯಾಂಡ್ ಇಡೀ ಕೂಟಕ್ಕೆ ಅಗತ್ಯವಿರುವಷ್ಟು ಆತ್ಮವಿಶ್ವಾಸವನ್ನು ಕೂಡಿ ಟ್ಟುಕೊಂಡಿದೆ. ಅನಂತರ ನೆದರ್ಲೆಂಡ್ಸ್ (99 ರನ್), ಬಾಂಗ್ಲಾದೇಶ (8 ವಿಕೆಟ್) ಮತ್ತು ಅಫ್ಘಾನಿಸ್ಥಾನವನ್ನು (149 ರನ್) ದೊಡ್ಡ ಅಂತರದಲ್ಲೇ ಮಣಿಸಿದೆ. ಆದರೆ ಇಂಗ್ಲೆಂಡ್ ಬಳಿಕ ಕಿವೀಸ್‌ಗೆ ದೊಡ್ಡ ಸವಾಲು ಎದುರಾಗುತ್ತಿರುವುದು ಇದೇ ಮೊದಲು ಎನ್ನಲಡ್ಡಿಯಿಲ್ಲ. ಇಲ್ಲಿ ಕಾನ್ವೇ, ಯಂಗ್, ರವೀಂದ್ರ, ಮಿಚೆಲ್, ಲ್ಯಾಥಂ, ಫಿಲಿಪ್ಸ್, ಚಾಪ್‌ಮನ್ ಅವರ ಬ್ಯಾಟಿಂಗ್‌ಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ.
ಇದು ಧರ್ಮಶಾಲಾದಲ್ಲಿ ನಡೆಯುವ ಮುಖಾಮುಖೀ. ದಕ್ಷಿಣ ಆಫ್ರಿಕಾ- ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆಯಿಂದ ಅಡಚಣೆ ಆಗಿತ್ತು. ಆದರೆ ರವಿವಾರದ ವಾತಾವರಣ ಶುಭ್ರವಾಗಿರಲಿದೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತವನ್ನು ಪೇರಿಸಿಟ್ಟರೆ ಕ್ಷೇಮ. ಆರಂಭ: ಅ. 2.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್ ವಿಶ್ವಕಪ್ ಮುಖಾಮುಖಿ
ಪಂದ್ಯ: 09
ಭಾರತ ಜಯ: 03
ನ್ಯೂಜಿಲ್ಯಾಂಡ್ ಜಯ: 05
ರದ್ದು: 01
2019ರ ವಿಶ್ವಕಪ್ ಫಲಿತಾಂಶ
1. ರದ್ದು
2. ನ್ಯೂಜಿಲ್ಯಾಂಡ್‌ಗೆ 18 ರನ್ ಜಯ