ಅಲ್ ರಯಾನ್: ಗ್ಯಾರೆತ್ ಬೇಲ್ 82ನೇ ನಿಮಿಷದಲ್ಲಿ ಸಿಡಿಸಿದ ಪವರ್‌ಫುಲ್ ಪೆನಾಲ್ಟಿ ಶಾಟ್‌ನಿಂದ ಅಮೆರಿಕ ವಿರುದ್ಧದ ಸೋಮವಾರ ರಾತ್ರಿಯ ವಿಶ್ವಕಪ್ ಫುಟ್‌ಬಾಲ್ ಮುಖಾಮುಖಿಯಲ್ಲಿ ವೇಲ್ಸ್ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯ 1-1 ಅಂತರದಿಂದ ಸಮನಾಯಿತು.
ಅಮೆರಿಕಕ್ಕೆ 36ನೇ ನಿಮಿಷದಲ್ಲಿ ತಿಮೋತಿ ವೀ ಮುನ್ನಡೆ ತಂದಿತ್ತಿದ್ದರು. ಇದನ್ನು 82ನೇ ನಿಮಿಷದ ತನಕವೂ ಕಾಯ್ದುಕೊಂಡು ಬಂತು. ವಿಶ್ವಕಪ್ ಇತಿಹಾಸದಲ್ಲಿ ಅಮೆರಿಕ ತನ್ನ ಎದುರಾಳಿಗೆ ಮೊದಲರ್ಧದಲ್ಲಿ ಗೋಲು ಬಿಟ್ಟುಕೊಟ್ಟದ ಮೊದಲ ನಿದರ್ಶನ ಇದಾಗಿದೆ.
ಹಾಗೆಯೇ ವೇಲ್ಸ್ ಪಾಲಿಗೆ ಗ್ಯಾರೆತ್ ಬೇಲ್ ಬಾರಿಸಿದ ಈ ಗೋಲ್ ಕೂಡ ಐತಿಹಾಸಿಕವೇ ಆಗಿದೆ.
ವಿಶ್ವಕಪ್ ಚರಿತ್ರೆಯಲ್ಲಿ ವೇಲ್ಸ್ 1958ರ ಬಳಿಕ ಬಾರಿಸಿದ ಮೊದಲ ಗೋಲ್ ಇದಾಗಿದೆ! ಇದು ಗ್ಯಾರೆತ್ ಬೇಲ್ ಹೊಡೆದ 41ನೇ ಗೋಲು, ವಿಶ್ವಕಪ್‌ನಲ್ಲಿ ಮೊದಲನೆಯದು. ಅಂದಹಾಗೆ ಅಮೆರಿಕ ಪರ ಗೋಲು ಹೊಡೆದ ತಿಮೋತಿ ವೀ ಯಾರು ಗೊತ್ತೇ? ಲೈಬೀರಿಯದ ಅಧ್ಯಕ್ಷ ಜಾರ್ಜ್ ವೀ ಅವರ ಪುತ್ರ!