Advertisement
ಹೌದು, ಏಷ್ಯಾ ಖಂಡದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಂತಹ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡಗಳ ಜೊತೆಗೆ ಅಫ್ಘಾನಿಸ್ಥಾನ, ನೇಪಾಳ, ಹಾಂಕಾಂಗ್, ಯು.ಎ.ಇ., ಒಮಾನ್, ಸೌದಿ ಅರೇಬಿಯಾ, ಸಿಂಗಾಪುರ ಸೇರಿದಂತೆ ಇನ್ನೂ ಕೆಲವು ದೇಶಗಳ ಕ್ರಿಕೆಟ್ ತಂಡಗಳಿವೆ. ಆದರೆ ಇಲ್ಲಿ ಮೊದಲು ಹೇಳಿದ ನಾಲ್ಕು ದೇಶಗಳದ್ದೇ ಪಾರುಪತ್ಯ. ಇನ್ನುಳಿದಂತೆ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಇಂಗ್ಲಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಕಿನ್ಯಾ, ಅಯರ್ಲ್ಯಾಂಡ್ ಮುಂತಾದ ತಂಡಗಳಿವೆ. ಇನ್ನು ಫುಟ್ಟಾಲ್ ನಲ್ಲಿರುವಂತೆ ಯೂರೋಪಿಯನ್ ದೇಶಗಳಾಗಲಿ, ಆಫ್ರಿಕಾದ ಇತರೇ ದೇಶಗಳಾಗಲಿ ಅಥವಾ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳಾಗಲಿ ಕ್ರಿಕೆಟ್ ಹುಚ್ಚನ್ನು ಬೆಳೆಸಿಕೊಳ್ಳದಿರುವ ಕಾರಣ ಮಾತ್ರ ನಿಗೂಢ!
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಸದಸ್ಯ ರಾಷ್ಟ್ರಗಳು 105 ಇದ್ದರೂ ಇವುಗಳಲ್ಲಿ ಶಾಶ್ವತ ಸದಸ್ಯ ರಾಷ್ಟ್ರಗಳು 11 ಮಾತ್ರ. ಅಂದರೆ ಈ ಹನ್ನೊಂದು ದೇಶಗಳಿಗೆ ಮಾತ್ರವೇ ಟೆಸ್ಟ್ ಮಾನ್ಯತೆ ಇದೆ. ಉಳಿದಂತೆ ಪ್ರತೀ ವಿಶ್ವಕಪ್ ಕೂಟದ ಸಂದರ್ಭಗಳಲ್ಲಿ ಈ 11 ದೇಶಗಳ ಜೊತೆಗೆ ಮತ್ತು ನಾಲ್ಕು ಅಥವಾ ಆರು ದೇಶಗಳಿಗೆ ವಿಶ್ವಕಪ್ ನಲ್ಲಿ ಆಡಲು ಅರ್ಹತಾ ಕೂಟ ನಡೆಸಿ ಅವಕಾಶ ನೀಡಲಾಗುತ್ತದೆ. ಆದರೆ ಈ ತಂಡಗಳ ಭಾಗವಹಿಸುವಿಕೆ ನಾಮ್ ಕಾವಸ್ಥೆಗೆ ಮಾತ್ರವೇ ಇರುವುದು ಮಾತ್ರ ವಿಪರ್ಯಾಸ. 1996ರ ವಿಶ್ವಕಪ್ ಕೂಟದಲ್ಲಿ ಅಂಡರ್ ಡಾಗ್ ಎಣಿಸಿಕೊಂಡಿದ್ದ ಆ ಕಾಲದ ‘ಕ್ರಿಕೆಟ್ ಶಿಶು’ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಿದ್ದು ಬಿಟ್ಟರೆ ಮತ್ತುಳಿದ ಕೂಟಗಳಲ್ಲಿ ಹೊಸ ತಂಡಗಳು ತಮ್ಮ ಸಾಧನೆಯನ್ನು ಉಪಾಂತ್ಯದವರೆಗೆ ವಿಸ್ತರಿಸಿದ ಉದಾಹರಣೆಗಳಿಲ್ಲ. ಅಪವಾದವೆಂಬಂತೆ, 1999ರಲ್ಲಿ ಜಿಂಬಾಬ್ವೆ ಮತ್ತು 2003ರಲ್ಲಿ ಕಿನ್ಯಾ ತಂಡಗಳು ಉತ್ತಮವೆನ್ನಬಹುದಾದ ಸಾಧನೆಯನ್ನು ಈ ಕೂಟಗಳಲ್ಲಿ ಮೆರೆದಿದ್ದವು. ಇನ್ನುಳಿದಂತೆ ಆಸ್ಟ್ರೇಲಿಯಾ, ಭಾರತ, ಪಾಕಿಸ್ಥಾನ, ಶ್ರೀಲಂಕಾ, ದ.ಆಫ್ರಿಕಾ ತಂಡಗಳದ್ದೇ ಮೇಲುಗೈ.
Related Articles
ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವುದಕ್ಕೆ ಐಸಿಸಿ ಹಲವಾರು ಕ್ರಮಗಳನ್ನು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಆದರೆ ಯುರೋಪಿಯನ್ ದೇಶಗಳಲ್ಲಿ ಕ್ರಿಕೆಟ್ ಕುರಿತಾಗಿ ಇರುವ ನಿರಾಸಕ್ತಿ ಮತ್ತು ಅಮೆರಿಕಾ, ಚೀನಾದಂತ ವಿಶ್ವದ ದೈತ್ಯ ಕ್ರೀಡಾ ಶಕ್ತಿಗಳು ತಮ್ಮ ತಮ್ಮ ದೇಶಗಳಲ್ಲಿ ಈ ಆಟವನ್ನು ತಳಮಟ್ಟದಿಂದ ಬೆಳೆಸಲು ಆಸಕ್ತಿ ತೋರಿಸದಿರುವುದು ಐಸಿಸಿಯ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟು ಮಾಡುತ್ತಲೇ ಇದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ಥಾನ, ನೇಪಾಳ, ಹಾಂಕಾಂಗ್, ಸಿಂಗಾಪುರ, ಇರಾನ್, ಸೌದಿ ಅರೇಬಿಯಾದಂತಹ ಏಷ್ಯಾದ ತಂಡಗಳು ಜಾಗತಿಕ ಕ್ರಿಕೆಟ್ ರಂಗದಲ್ಲಿ ಭರವಸೆಯ ಹೆಜ್ಜೆಗಳನ್ನು ಇಡುತ್ತಿರುವುದು ಮುಂದಿನ ದಿನಗಳಲ್ಲಿ ಕ್ರಿಕೆಟ್ ರಂಗದಲ್ಲಿ ಆವರಿಸಿಕೊಂಡಿರುವ ಒಂದು ರೀತಿಯ ಏಕತಾನತೆಯನ್ನು ಹೋಗಲಾಡಿಸುವ ಭರವಸೆಯನ್ನು ಮೂಡಿಸುತ್ತಿವೆ.
Advertisement
ಕ್ರಿಕೆಟ್ ಶಿಶು ರಾಷ್ಟ್ರಗಳಿಗೆ ಬೇಕು ಸಪೋರ್ಟ್T20 ಮಾದರಿ ಜನಪ್ರಿಯಗೊಳ್ಳಲು ಪ್ರಾರಂಭಿಸಿದ ಬಳಿಕ ಹೆಚ್ಚಿನ ದೇಶಗಳಲ್ಲಿ ಕ್ರಿಕೆಟ್ ಕುರಿತಾಗಿರುವ ಆಸಕ್ತಿ ಹೆಚ್ಚುತ್ತಿದೆ. ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ T10 ಮಾದರಿಯ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಯೋಚಿಸಿರುವುದರಿಂದ ಕ್ರಿಕೆಟ್ ಜ್ವರ ಇನ್ನಷ್ಟು ರಾಷ್ಟ್ರಗಳಿಗೆ ಹಬ್ಬುವ ಆಶಾವಾದವನ್ನು ಕ್ರಿಕೆಟ್ ಪ್ರೇಮಿಗಳು ಇರಿಸಿಕೊಳ್ಳಬಹುದು. ಆದರೆ ಹೊಸ ತಂಡಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ತಂಡಗಳನ್ನೆದುರಿಸಲು ಸೂಕ್ತವಾದ ತರಬೇತಿ ನೀಡುವ ಅಗತ್ಯವಿದೆ. ಇಲ್ಲವಾದಲ್ಲಿ ವಿಶ್ವಕಪ್ ನಂತಹ ಪ್ರತಿಷ್ಠಿತ ಕೂಟಗಳಲ್ಲಿ ಈ ತಂಡಗಳ ನಿರ್ವಹಣೆ ಕಳಪೆ ಅಥವಾ ಸಾಧಾರಣ ಮಟ್ಟದಲ್ಲಿರುತ್ತದೆ. ಆದರೆ ಈ ತಂಡಗಳಲ್ಲಿಯೂ ಹಲವಾರು ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ವಿಶ್ವದರ್ಜೆಯ ಮಾರ್ಗದರ್ಶನ ಸಿಕ್ಕಿದಲ್ಲಿ ಮುಂದೊಂದು ದಿನ ಈ ಆಟಗಾರರು ತಮ್ಮ ತಂಡವನ್ನು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿಸುವ ಸಾಧ್ಯತೆಗಳಿವೆ.