ಅಹ್ಮದಾಬಾದ್: ಅತ್ತ ಭಾರತದ ಪುರುಷರು ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೆ ಅಣಿಯಾದರೆ, ಇತ್ತ ವನಿತೆಯರು ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದ್ದಾರೆ. ಗುರುವಾರ ಅಹ್ಮದಾಬಾದ್‌ನಲ್ಲಿ ಮೊದಲ ಮುಖಾಮುಖೀ ಏರ್ಪಡಲಿದೆ. ಉಳಿದೆರಡು ಪಂದ್ಯಗಳೂ ಇಲ್ಲೇ ನಡೆಯಲಿವೆ.
ಮುಂದಿನ ವರ್ಷ ಭಾರತದಲ್ಲೇ ನಡೆಯುವ ವನಿತಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಇದೊಂದು ಮಹತ್ವದ ಸರಣಿಯಾಗಿದೆ.
ಇತ್ತೀಚಿನ ಟಿ20 ಏಷ್ಯಾ ಕಪ್ ಫೈನಲ್ ಸೋಲು, ಟಿ20 ವಿಶ್ವಕಪ್‌ನಲ್ಲಿ ತೋರ್ಪಡಿಸಿದ ಹೀನಾಯ ಪ್ರದರ್ಶನ ಎನ್ನುವುದು ಭಾರತೀಯ ವನಿತಾ ಕ್ರಿಕೆಟಿನ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ತಂದಿದೆ. ಇದರಿಂದ ಮುಕ್ತವಾಗಬೇಕಾದರೆ ಬಲಿಷ್ಠ ನ್ಯೂಜಿಲ್ಯಾಂಡ್ ಎದುರಿನ ಈ ಸರಣಿಯನ್ನು ವಶಪಡಿಸಿ ಕೊಳ್ಳುವು ದೊಂದೇ ಮಾರ್ಗ.
ನ್ಯೂಜಿಲ್ಯಾಂಡ್ ಮೊನ್ನೆಯಷ್ಟೇ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಸಂಭ್ರಮದಲ್ಲಿದೆ. ಅಲ್ಲಿ ಭಾರತವನ್ನು ಸೋಲಿಸುವ ಮೂಲಕವೇ ಸೋಫಿ ಡಿವೈನ್ ಬಳಗ ತನ್ನ ಅಭಿಯಾನವನ್ನು ಆರಂಭಿಸಿತ್ತು. ಬಹುತೇಕ ಅದೇ ತಂಡವೀಗ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ.
35 ವರ್ಷದ ಅನುಭವಿ ಆಟ ಗಾರ್ತಿ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಸತತ ವೈಫಲ್ಯ ಕಾಣುತ್ತಿದ್ದರೂ ಆಯ್ಕೆ ಮಂಡಳಿ ಅವರ ಮೇಲೆ ವಿಶ್ವಾಸವಿರಿಸಿದೆ. ಬಿಗ್ ಹಿಟ್ಟಿಂಗ್ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್, ಅನುಭವಿ ಆಲ್‌ರೌಂಡರ್ ಪೂಜಾ ವಸ್ತ್ರಾಕರ್, ಆಶಾ ಶೋಭನಾ ನಾನಾ ಕಾರಣಗಳಿಂದ ಈ ಸರಣಿಗೆ ಲಭ್ಯರಾಗುತ್ತಿಲ್ಲ. ತಂಡದಲ್ಲಿ ಕೆಲವು ಹೊಸಬರಿದ್ದಾರೆ. ಇವರೆಂದರೆ ತೇಜಲ್ ಹಸಬಿ°ಸ್, ಸೈಮಾ ಠಾಕೂರ್ ಮತ್ತು ಪ್ರಿಯಾ ಮಿಶ್ರಾ.
ಶಫಾಲಿ ವರ್ಮ, ಸ್ಮತಿ ಮಂಧನಾ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿಕೊಳ್ಳ ಲಾಗಿದೆ. ತಂಡದ ಯಶಸ್ಸಿನಲ್ಲಿ ಇವರ ಪಾಲು ನಿರ್ಣಾಯಕವಾಗಲಿದೆ.