ಮಕಾಯ್ (ಆಸ್ಟ್ರೇಲಿಯಾ): ಬಿ.ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಅವರ 178 ರನ್ ಜತೆಯಾಟದ ಸಾಹಸದಿಂದ ಆಸ್ಟ್ರೇಲಿಯಾ “ಎ’ ಎದುರಿನ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ ಚೇತರಿಕೆ ಕಂಡಿದೆ. ಇದಕ್ಕೂ ಮುನ್ನ ಮುಕೇಶ್ ಕುಮಾರ್ 6 ವಿಕೆಟ್ ಉಡಾಯಿಸಿ ಆತಿಥೇಯರನ್ನು ಕಾಡಿದ್ದರು. ಭಾರತದ 107 ರನ್ನುಗಳ ಸಣ್ಣ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 195ಕ್ಕೆ ಕುಸಿಯಿತು. ಅದು 4ಕ್ಕೆ 99 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಮುಕೇಶ್ ಕುಮಾರ್ 46ಕ್ಕೆ 6 ವಿಕೆಟ್ ಹಾಗೂ ಪ್ರಸಿದ್ಧ್ಕೃಷ್ಣ 59ಕ್ಕೆ 3 ವಿಕೆಟ್ ಉರುಳಿಸಿ ಆತಿಥೇಯರ ಮೇಲೆ ಸವಾರಿ ಮಾಡಿದರು.
88 ರನ್ ಹಿನ್ನಡೆಗೆ ಸಿಲುಕಿದ ಭಾರತ “ಎ’ ದ್ವಿತೀಯ ಸರದಿಯಲ್ಲೂ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಋತುರಾಜ್ ಗಾಯಕ್ವಾಡ್ (5) ಮತ್ತು ಅಭಿಮನ್ಯು ಈಶ್ವರನ್ (12) 8.5 ಓವರ್ಗಳಲ್ಲಿ 30 ರನ್ ಒಟ್ಟುಗೂಡುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಆಗ ಭಾರತ “ಎ’ ತೀವ್ರ ಆತಂಕಕ್ಕೆ ಸಿಲುಕಿತ್ತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಕ್ರೀಸ್ ಆಕ್ರಮಿಸಿಕೊಳ್ಳುವುದರೊಂದಿಗೆ ಪರಿಸ್ಥಿತಿ ಸುಧಾರಿಸತೊಡಗಿತು.
2ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟಿಗೆ 208 ರನ್ ಗಳಿಸಿದ್ದು, 120 ರನ್ ಮುನ್ನಡೆ ಸಾಧಿಸಿದೆ. ಸಾಯಿ ಸುದರ್ಶನ್ ಶತಕ ಸಮೀಪಿಸಿದ್ದು, 96 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (185 ಎಸೆತ, 9 ಬೌಂಡರಿ). ದೇವದತ್ತ ಪಡಿಕ್ಕಲ್ 80 ರನ್ ಮಾಡಿ ಆಡುತ್ತಿದ್ದಾರೆ (167 ಎಸೆತ, 5 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಆಸೀಸ್ ಎ 195/10 (ಮೆಕ್ಸ್ವೀನಿ 39, ಮುಕೇಶ್ ಕುಮಾರ್ 46ಕ್ಕೆ 6, ಪ್ರಸಿದ್ಧಕೃಷ್ಣ 59ಕ್ಕೆ 3). ಭಾರತ ಎ 1ನೇ ಇನಿಂಗ್ಸ್ 107, 2ನೇ ಇನಿಂಗ್ಸ್ 208/2 (ಸಾಯಿ ಸುದರ್ಶನ್ 96, ಪಡಿಕ್ಕಲ್ 80, ಫರ್ಗಸ್ ಒ ನೀಲ್ 33ಕ್ಕೆ 1).
ಇದನ್ನೂ ಓದಿ: Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ