ಸಸಿಹಿತ್ಲು: ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದಿಂದ ಮುಂಡ ಬೀಚ್ ನ ಬಸ್‌ನಿಲ್ದಾಣದವರೆಗೆ ವಿಶ್ವಬ್ಯಾಂಕ್ ನ ನೆರವಿನಿಂದ ರಾಷ್ಟ್ರೀಯ ಬಿರುಗಾಳಿ ವಿಪತ್ತು ಕುಗ್ಗಿಸುವ ಯೋಜನೆ (ಎನ್.ಸಿ.ಆರ್.ಎಂ.ಪಿ.) 4.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆಯನ್ನು ವೀಕ್ಷಿಸಲು ಜೂ.5ರಂದು ದೆಹಲಿಯ ವಿಶ್ವ ಬ್ಯಾಂಕ್ ಪ್ರತಿನಿಧಿಗಳ ತಂಡವು ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿತು. ಕಾಮಗಾರಿಯು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸ್ಥಳೀಯ ಮುಂಡ ಪ್ರದೇಶ ಹಾಗೂ ಬೀಚ್‌ಗೆ ತೆರಳುವ ಪ್ರವಾಸಿಗರಿಗೂ ಸುಮಾರು 2 ಕಿ.ಮೀ. ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಮೇ.25ರ
ಉದಯವಾಣಿಯ ಸುದಿನಲ್ಲಿ ವಿಶೇಷ ವರದಿಯೊಂದು ಪ್ರಕಟಗೊಂಡಿತ್ತು.
ವಿಶ್ವ ಬ್ಯಾಂಕ್‌ನ ದೆಹಲಿಯ ಅನುಪ್ ಕಾರಂತ್ ಅವರ ನೇತೃತ್ವದಲ್ಲಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇಲಾಖೆಗಳ ಅಧಿಕಾರಿಗಳ ಸಹಿತ ಸುಮಾರು 30 ಮಂದಿಯ ತಂಡವು ಭೇಟಿ ನೀಡಿ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಹಾಗೂ ಯೋಜನೆಯ ತಾಂತ್ರಿಕ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಮಂಗಳೂರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಸ್ಥಳದಲ್ಲಿಯೇ ಸೂಚನೆಗಳನ್ನು ನೀಡಿದರು.
ಸ್ಥಳೀಯರಾದ ಅನಿಲ್ ಕುಂದರ್, ಆನಂದ, ಕಿಶೋರ್, ಸಚಿನ್ ಹಾಗೂ ಪಂಚಾಯತ್ ಸದಸ್ಯರಾದ ಚಿತ್ರಾ ಸುಕೇಶ್ ಮತ್ತು ಚಂದ್ರಕುಮಾರ್ ಅವರಲ್ಲಿ ಮಾಹಿತಿ ಹಾಗೂ ಅಭಿಪ್ರಾಯವನ್ನು ಪಡೆದುಕೊಂಡರು. ಮಂಗಳೂರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಗೋಪಾಲ ನಾಯಕ್, ರವಿಕುಮಾರ್, ಬೆಂಗಳೂರಿನ ಡಾ| ರಾಜ್‌ಕುಮಾರ್ ಪೂಜಾರಿ, ಗುತ್ತಿಗೆದಾರ ಫಿಲಿಪ್ ಡಿ’ಕೋಸ್ತ ಮತ್ತಿತರರು ಉಪಸ್ಥಿತರಿದ್ದರು.
ಗುತ್ತಿಗೆದಾರರಿಗೆ ಸೂಚನೆ
ರಸ್ತೆ ಕಾಮಗಾರಿಯಿಂದ ಸಂಚರಿಸಲು ಅಸಾಧ್ಯವಾಗಿರುವುದರಿಂದ ಆದಷ್ಟು ಶೀಘ್ರದಲ್ಲಿ ಒಂದು ಭಾಗದಲ್ಲಿ ರಸ್ತೆ ತೆರವು, ಮುಂದಿನ ಕಾಮಗಾರಿಯ ಸಂದರ್ಭದಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡುವ ಬದಲು ಒಂದು ಭಾಗ ಮಾತ್ರ ಕಾಂಕ್ರೀಟ್ ನಡೆಸಿ ಉಳಿದ ಭಾಗ ಸಂಚರಿಸಲು ಅನುವು, ಆಸುಪಾಸಿನ ಮನೆಗಳ ನಿವಾಸಿಗಳಿಗೆ ಧೂಳಿನಿಂದ ರಕ್ಷಣೆ, ಕಾಮಗಾರಿ ನಡೆಸುವ ಕಾರ್ಮಿಕರು ಸಹ ರಕ್ಷಣಾ ಧಿರಿಸು ಧರಿಸಬೇಕು, ಅವರಿಗೆ ವಿಮಾ ಸೌಲಭ್ಯ ಹಾಗೂ ರಿಫ್ಲೆಕ್ಟರ್ ಜಾಕೆಟ್ ನೀಡಬೇಕು, ಬಳಸುವ ವಾಹನಗಳ ಬಗ್ಗೆಯೂ ಜಾಗೃತಿ ವಹಿಸಬೇಕು, ಪ್ರತೀ ಸ್ಲಾಬ್ ಕಾಂಕ್ರೀಟ್ ಮಾಡುವಾಗ ಅದರ ಸ್ಯಾಂಪಲ್ ಎಂಜಿನಿಯರ್‌ಗಳನ್ನು ಪರಿಶೀಲಿಸಬೇಕು.