ಹೊಸದಿಲ್ಲಿ: ಒಲಿಂಪಿಕ್ ಬೆಳ್ಳಿ ವಿಜೇತೆ ಪಿವಿ ಸಿಂಧು ಮತ್ತು ಮಾಜಿ ನಂ. ವನ್ ಸೈನಾ ನೆಹ್ವಾಲ್ ಅವರಿಗೆ ಆ. 21ರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಕೋದಲ್ಲಿ ಆರಂಭವಾಗುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿಯ ಕಂಚು ವಿಜೇತೆ ಸಿಂಧು ದ್ವಿತೀಯ ಸುತ್ತಿನಲ್ಲಿ ಕೊರಿಯದ ಕಿಮ್ ಹ್ಯೂ ಮಿನ್ ಅಥವಾ ಈಜಿಪ್ಟ್ನಹಾಡಿಯಾ ಹೋಸ್ನಿ ಅವರನ್ನು ಎದುರಿಸಲಿದ್ದಾರೆ ಮತ್ತು ಚೀನದ ಸನ್ ಯು ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಎದುರಿಸುವ ಸಾಧ್ಯತೆಯಿದೆ.
2015ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತೆ ಸೈನಾ ಅವರು ದ್ವಿತೀಯ ಸುತ್ತಿನಲ್ಲಿ ಸ್ವಿಟ್ಸರ್‌ಲ್ಯಾಂಡಿನ ಸಬ್ರಿನಾ ಜಾಕ್ವೆಟ್ ಮತ್ತು ಉಕ್ರೆನ್‌ನ ನಟಾಲ್ಯಾ ವಾಯ್‌ಟೆಕ್ ಅವರ ನಡುವಣ ವಿಜೇತರನ್ನು ಎದು ರಿಸಲಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್ ಜಿ ಹ್ಯುನ್ ಅವರನ್ನು ಎದುರಿಸುವ ಸಂಭವವಿದೆ.
ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ, ವನಿತೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ಅವರು ಕಣದಲ್ಲಿದ್ದಾರೆ.
ಭಾರತದ ಅಗ್ರ ಕ್ರಮಾಂಕದ ಪುರುಷ ಶಟ್ಲರ್ ಕಿದಂಬಿ ಶ್ರೀಕಾಂತ್ ರಶ್ಯದ ಸರ್ಗೆ ಸಿರಾಂಟ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಇಂಡೋನೇಶ್ಯ ಮತ್ತು ಆಸ್ಟ್ರೇಲಿಯದಲ್ಲಿ ನಡೆದ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದಿರುವ ಅವರು ಸಿಂಗಾಪುರ ಓಪನ್‌ನಲ್ಲಿ ಫೈನಲಿಗೇರಿದ್ದು ಭಾರೀ ಫಾರ್ಮ್ನಲ್ಲಿದ್ದಾರೆ.
ಸಿಂಗಾಪುರದಲ್ಲಿ ಶ್ರೀಕಾಂತ್ ಅವರನ್ನು ಕೆಡಹಿ ಚೊಚ್ಚಲ ಸೂಪರ್ ಸೀರೀಸ್‌ನ ಪ್ರಶಸ್ತಿ ಜಯಿಸಿದ್ದ 15ನೇ ಶ್ರೇಯಾಂಕದ ಬಿ.ಎಸ್. ಪ್ರಣಯ್ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ವೆಯಿ ನಾನ್ ಅವರನ್ನು ಹಾಗೂ ಅಜಯ್ ಜಯರಾಮ್ ಅವರು ಆಸ್ಟ್ರೀಯದ ಲುಕಾ ವ್ರಾಬರ್ ಅವರ ಸವಾಲನ್ನು ಎದುರಿಸಲಿದ್ದಾರೆ. ಚೊಚ್ಚಲ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಸಮೀರ್ ವರ್ಮ ಅವರಿಗೆ ಮುಖ್ಯ ಡ್ರಾಕ್ಕೆ ನೇರ ಪ್ರವೇಶ ನೀಡಲಾಗಿದ್ದು ಮೊದಲ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಅಬಿಯನ್ ಅವರೊಂದಿಗೆ ಮುಖಾಮುಖೀಯಾಗಲಿದ್ದಾರೆ.