ಶಿರ್ವ: ಆಟಿಸಂ ಕಾಯಿಲೆಯಲ್ಲ, ಬದಲಾಗಿ ಮಕ್ಕಳು ಹುಟ್ಟುವಾಗಲೇ ಪ್ರಾರಂಭವಾಗುವ ಸಮಸ್ಯೆ. ಸರಕಾರಿ ಅಧಿಕಾರಿಗಳು ಆಟಿಸಂ ಸಮಸ್ಯೆಯ ಬಗ್ಗೆ ಯೋಚನೆ ಮಾಡದೇ ಇರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಜಿಲ್ಲಾ ಪುನರ್ವಸತಿ ಕೇಂದ್ರಗಳು ಕೆಲಸ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಆಟಿಸಂ ಮಕ್ಕಳ ಹೆತ್ತವರು ತಮ್ಮ ಹಕ್ಕುಗಳ ಬಗ್ಗೆ ಸರಕಾರವನ್ನು ಎಚ್ಚರಿಸುವ ಕೆಲಸ ನಡೆಯಬೇಕಿದೆ ಎಂದು ಉಡುಪಿ ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ,ಉಡುಪಿ ಆಟಿಸಂ ಸೊಸೈಟಿಯ ಸ್ಥಾಪಕಾಧ್ಯಕ್ಷ ಡಾ| ಪಿ. ವಿ. ಭಂಡಾರಿ ಹೇಳಿದರು.
ಅವರು ಮಾ. 30 ರಂದು ಮಾನಸ ಆಟಿಸಂ ಸೆಂಟರ್, ಉಡುಪಿ ಆಟಿಸಂ ಸೊಸೈಟಿ ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಜಂಟಿ ಆಶ್ರಯದಲ್ಲಿ ಪಾಂಬೂರು ಮಾನಸ ಪುನರ್ವಸತಿ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ಆಟಿಸಂ ಅರಿವು ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಅನಿವೇದಾ ರಿಸೋರ್ಸ್ ಸೆಂಟರ್ ಫಾರ್ ಸೈಕೋಲಾಜಿಕಲ್ ವೆಲ್‌ಬೀಯಿಂಗ್‌ನ ನಿರ್ದೇಶಕಿ ಡಾ| ಕೆ.ಟಿ. ಶ್ವೇತಾ, ಮಣಿಪಾಲ ಮಾಹೆಯ ಡಾ| ವೀಣಾ ರಾವ್ ಮತ್ತು ಲಕ್ಷ್ಮೀ ಪ್ರಭು ಆಟಿಸಂ ಸಮಸ್ಯೆ ಮತ್ತು ಥೆರಪಿಯ ಬಗ್ಗೆ ಮಾಹಿತಿ ನೀಡಿದರು.
ಮಾನಸ ಸಂಸ್ಥೆಯ ಡಾ| ಎಡ್ವರ್ಡ್ ಲೋಬೋ ಮತ್ತು ಉಡುಪಿ ಆಟಿಸಂ ಸೊಸೈಟಿಯ ಕೀತೇìಶ್ ಆತಿಥಿಗಳ ಪರಿಚಯ ಮಾಡಿದರು. ಉಡುಪಿ ಆಟಿಸಂ ಸೊಸೈಟಿಯ ಅಧ್ಯಕ್ಷೆ ಅಮಿತಾ ಪೈ, ಸಂಸ್ಥೆಯ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಮಾನಸ ಸಂಸ್ಥೆಯ ಕಾರ್ಯದರ್ಶಿ ಜೋಸೆಫ್ ನೊರೊನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಟ್ರಸ್ಟಿಗಳಾದ ಡಾ| ಜೆರಾಲ್ಡ್ ಪಿಂಟೋ, ರೆಮೇಡಿಯಾ ಡಿಸೋಜಾ, ಕೆಥೋಲಿಕ್ ಸಭೆಯ ಅಧ್ಯಕ್ಷರು,ಪದಾಧಿಕಾರಿಗಳು,ಮಕ್ಕಳ ಹೆತ್ತವರು,ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಿಕ್ಷಕಿಯರಾದ ಜ್ಯೋತಿ ಮತ್ತು ಪ್ರಭಾ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟಿ ಜೋನ್ ಮಾರ್ಟಿಸ್ ವಂದಿಸಿದರು.