ವಾತಾವರಣದಲ್ಲಿ ಮಲಿನ ಗಾಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಮನುಷ್ಯನ ಜೀವನಶೈಲಿಯೂ ಆಧುನಿಕತೆಗೆ ತೆರೆದುಕೊಂಡಂತೆ ಬದಲಾಗುತ್ತಿದೆ. ವಿಷಾನಿಲ ಉಸಿರಾಟ, ನಾಲಿಗೆಗೆ ರುಚಿಕೊಡುವ, ಹೊಟ್ಟೆಗೆ ಬೇಡವಾಗುವ ಆಹಾರ ಖಾದ್ಯಗಳ ಸೇವನೆ-ಇದರಿಂದಾಗಿ ಮನುಷ್ಯನ ಆರೋಗ್ಯ ದಿನನಿತ್ಯ ಕೆಡುತ್ತಲೇ ಇದೆ. ಅಸ್ತಮಾದಂತಹ ತೊಂದರೆಗಳು ಜೀವನದುದ್ದಕ್ಕೂ ಪ್ರಾಣ ಹಿಂಡುವ ಉದಾಹರಣೆಗಳು ಅವೆಷ್ಟೋ…
ಅಸ್ತಮಾ ಮನುಷ್ಯನಿಗೆ ಕಾಡುವ ದೀರ್ಘಕಾಲಿಕ ರೋಗ. ಶ್ವಾಸನಾಳದ ಮೇಲೆ ಬೀರುವ ಪರಿಣಾಮವನ್ನು ಅಸ್ತಮಾ ಎನ್ನಲಾಗುತ್ತದೆ. ಶ್ವಾಸಕೋಶದಲ್ಲಿ ಗಾಳಿಯನ್ನು ಒಳ-ಹೊರಗೆ ಸಾಗಿಸುವ ದ್ವಾರಗಳು ಊದಿಕೊಳ್ಳುವುದೇ ಅಸ್ತಮಾ. ಸರಾಗ ಉಸಿರಾಟ ಸಾಧ್ಯವಾಗದೆ, ಉಸಿರಾಡುವಾಗ ಶಬ್ದ, ಕೆಮ್ಮು, ಎದೆಬಿಗಿತ, ಮೂಗು ಕಟ್ಟಿಕೊಂಡಂತಾಗುವುದು ಸೇರಿದಂತೆ ವಿವಿಧ ರೀತಿಯ ಉಸಿರಾಟದ ತೊಂದರೆಗಳು ಅಸ್ತಮಾದಿಂದ ಕಾಣಿಸಿಕೊಳ್ಳುತ್ತವೆ. ಬೆಳಗ್ಗೆ ಏಳುವಾಗ ಮತ್ತು ರಾತ್ರಿ ಮಲಗಿದ ನಂತರ ಈ ತೊಂದರೆಗಳ ಕಾಡುವಿಕೆ ಹೆಚ್ಚು.
ಅಸ್ತಮಾ: ಕಾರಣ
ಧೂಳಿನ ಕಣಗಳು ಮೂಗಿನೊಳಗೆ ನಿರಂತರವಾಗಿ ಹೋಗುತ್ತಿರುವುದರಿಂದ ಅಸ್ತಮಾ ಕಾಣಿಸಿಕೊಳ್ಳಬಹುದು. ಸಿಗರೇಟ್‌ನ ಹೊಗೆ ಸೇವನೆ, ವಾಯು ಮಾಲಿನ್ಯದ ಕಾರಣದಿಂದ, ಹವಾಗುಣ ಬದಲಾವಣೆಯಿಂದ, ಕೆಲಸದ ಸ್ಥಳದಲ್ಲಿ ರಾಸಾಯನಿಕ ಮಿಶ್ರಿತ ಧೂಳಿನ ಉಸಿರಾಟದಿಂದ ಅಸ್ತಮಾ ಬಾಧಿಸುವ ಸಾಧ್ಯತೆ ಹೆಚ್ಚು. ಇದಲ್ಲದೆ, ಕುಟುಂಬ ಸದಸ್ಯರಿಗೆ ಅಸ್ತಮಾ ಕಾಯಿಲೆ ಇದ್ದರೆ, ಅದು ಮುಂದಿನ ತಲೆಮಾರಿಗೂ ಬರುವ ಸಾಧ್ಯತೆಯಿದೆ. ಗರ್ಭಿಣಿಯರು ತಂಬಾಕು ಹೊಗೆಯನ್ನು ಸೇವಿಸಿದರೆ ಹುಟ್ಟುವ ಮಗುವಿಗೆ ಅಸ್ತಮಾ ಬರುವ ಸಾಧ್ಯತೆ ಅಧಿಕ.
ಲಕ್ಷಣಗಳಿವು
ಅಸ್ತಮಾ ಹಠಾತ್ತನೇ ಶುರುವಾಗಬಹುದು ಅಥವಾ ನಿಧಾನಕ್ಕೆ ಮನುಷ್ಯನನ್ನು ಬಾಧಿಸಬಹುದು. ಆಗಾಗ ಕೆಮ್ಮು ಉಂಟಾಗುವುದು, ನಿರಂತರ ಕಾಡುವ ಉಬ್ಬಸ, ಎದೆಬಿಗಿತ, ಉಸಿರಾಟದಲ್ಲಿ ಶಬ್ದ ಮುಂತಾದವುಗಳನ್ನು ಅಸ್ತಮಾ ಎಂದು ಪರಿಗಣಿಸಬಹುದು. ಆದರೆ ಒಂದೆರಡು ದಿನ ಬಂದು ಹೋಗುವ ಕೆಮ್ಮಿನಿಂದ ಅಸ್ತಮಾ ಕಾಯಿಲೆ ಇದೆ ಎಂದರೆ ತಪ್ಪಾಗುತ್ತದೆ. ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯೊಂದಿಗೆ ಅಸ್ತಮಾ ಕಾಯಿಲೆ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕು.
Related Articles
ಪಥ್ಯ
ಅಸ್ತಮಾ ರೋಗಿಗಳು ಹುಳಿ, ಎಣ್ಣೆ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಧೂಮಪಾನ ಮಾಡದಿರುವುದೇ ಒಳಿತು. ಆದಷ್ಟು ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡದೇ ಸ್ವತ್ಛ ಗಾಳಿಯ ಉಸಿರಾಟಕ್ಕೆ ಆದ್ಯತೆ ನೀಡಬೇಕು. ಅನಿವಾರ್ಯವಾಗಿ ಅಂತಹ ಪ್ರದೇಶಗಳಲ್ಲಿ ಇರಬೇಕಾಗಿ ಬಂದರೆ ಮೂಗಿಗೆ ಮಾಸ್ಕ್ ಧರಿಸಿಕೊಳ್ಳಬೇಕು. ಶುದ್ಧ ಆಹಾರ ಸೇವನೆಗೆ ಮಹತ್ವ ನೀಡಬೇಕು.
ತಿನಿಸಿನಿಂದ ಉಬ್ಬಸ
ಅಸ್ತಮಾದಂತೆ ಉಬ್ಬಸವೂ ಸಾಮಾನ್ಯವಾಗಿ ಕಾಡುವ ತೊಂದರೆಯಾಗಿದೆ. ನಾಲಿಗೆಗೆ ರುಚಿ ಎನಿಸುವಂಥದ್ದನ್ನೆಲ್ಲ ತಿಂದರೆ, ಹೊಟ್ಟೆಗೆ ರುಚಿಯಾಗದೇ ಅದು ಉಬ್ಬಸವಾಗಿ ಕಾಡುವ ಸಾಧ್ಯತೆ ಇರುತ್ತದೆ. ರಕ್ತ ಕಡಿಮೆಯಾಗುವಿಕೆ, ಹೃದಯ ತೊಂದರೆ ಇದ್ದವರಿಗೂ ಉಬ್ಬಸ ಕಾಡುವ ಸಾಧ್ಯತೆಗಳಿವೆ. ಕರಿದ ತಿಂಡಿಗಳು, ಅತಿಯಾದ ಎಣ್ಣೆ ಪದಾರ್ಥ ಸೇವನೆಯಿಂದಾಗಿ ದೂರವಿದ್ದರೆ, ಉಬ್ಬಸ ನಿಯಂತ್ರಣದಲ್ಲಿರುತ್ತದೆ.
ನಗರಗಳಲ್ಲೇ ಹೆಚ್ಚು
ಅಸ್ತಮಾ ಅಲರ್ಜಿಯಿಂದ ಬರುವ ಕಾಯಿಲೆ. ಈ ಕಾಯಿಲೆಗೆ ನಗರ, ಗ್ರಾಮಾಂತರ ಎಂಬ ಭೇದವಿಲ್ಲವಾದರೂ ಹೆಚ್ಚಿನ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲೇ ಅಸ್ತಮಾ ಕಂಡುಬರುತ್ತದೆ. ನಗರ ಪ್ರದೇಶಗಳಲ್ಲಿ ಧೂಳು, ಹೊಗೆ, ಮಾಲಿನ್ಯ ಹೆಚ್ಚಿರುವುದರಿಂದ ಇಲ್ಲೇ ಅಸ್ತಮಾ ಬಾಧೆ ಹೆಚ್ಚಿರುತ್ತದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಅಸ್ತಮಾ ಕಾಣಿಸಿಕೊಳ್ಳುತ್ತದೆ. ಎರಡು ವಿಧದ ಅಸ್ತಮಾಗಳಿದ್ದು, ಅಲರ್ಜೆಟಿಕ್ ಅಸ್ತಮಾ ಮತ್ತು ಕಾರ್ಡಿಯಾಕ್ ಅಸ್ತಮಾ ಎಂದು ವಿಂಗಡಿಸಲಾಗಿದೆ. ಹೃದಯದ ತೊಂದರೆ ಇರುವುದರಿಂದಲೂ ಅಸ್ತಮಾ ಕಾಣಿಸಿಕೊಳ್ಳುತ್ತದೆ. ಇದನ್ನು ಕಾರ್ಡಿಯಾಕ್ ಅಸ್ತಮಾ ಎಂದು ಕರೆಯುತ್ತಾರೆ.
ಅಸ್ತಮಾಕ್ಕೆ ಮನೆ ಮದ್ದು
ಅಸ್ತಮಾವನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು. ಮನೆಯಲ್ಲೇ ಸಿಗುವ ಕೆಲವು ಆಹಾರ ಪದಾರ್ಥಗಳಿಂದಲೂ ಅಸ್ತಮಾವನ್ನು ನಿಯಂತ್ರಿಸುವುದು ಅಥವಾ ಕಡಿಮೆಯಾಗಿಸಲು ಸಾಧ್ಯವಿದೆ. ತುರಿದ ಮೂಲಂಗಿ, ಜೇನು, ನಿಂಬೆರಸವನ್ನು ಸೇರಿಸಿ ಕಾಯಿಸಿ ಪ್ರತಿದಿನ ಒಂದು ಚಮಚ ಸೇವಿಸುತ್ತಾ ಬರುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ. ನೀರಿನೊಂದಿಗೆ ಮೆಂತೆ ಕಾಳನ್ನು ಬೇಯಿಸಿ ಜೇನು, ಶುಂಠಿ ರಸ ಹಾಕಿ ಬೆರೆಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗಬಹುದು.