ದೇರಳಕಟ್ಟೆ : ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಹಾಗೂ ಕೌಶಲಾವೃದ್ಧಿಗಾಗಿ ನಿತ್ಯವೂ ವಿವಿಧ ಆವಿಷ್ಕಾರಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯುವ ವೈದ್ಯರಿಗಾಗಿ ಏರ್ಪಡಿಸಿರುವ ಈ ಕಾರ್ಯಾಗಾರ ಜ್ಞಾನಾಭಿವೃದ್ಧಿಗೆ ಪೂರಕ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಾಸಾಕರ್ಣ ಕಂಠಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಂಗಳವಾರ ಜರಗಿದ ಕ್ಷೇಮ ಇಎನ್‌ಟಿ ಒಎಸ್‌ಸಿಇ ಕಾರ್ಯಾಗಾರ -2018 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸೆ ಉಪನ್ಯಾಸ, ಹದಿನಾಲ್ಕನೆಯ ಒಎಸ್‌ಸಿಇ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಖ್ಯವಲ್ಲ. ಜ್ಞಾನ, ಕೌಶಲ ವೃದ್ಧಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದ ಕುರಿತು ನಿರಂತರ ಅಧ್ಯಯನ ಶೀಲತೆ ಬೇಕು. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಸಿಗುವಂತಾಗಲಿ ಎಂದರು.
ನಿಟ್ಟೆ ವಿಶ್ವದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಡೀನ್ ಡಾ| ಪಿ.ಎಸ್. ಪ್ರಕಾಶ್ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದ ಇಎನ್‌ಟಿ ವಿಭಾಗ ಮುಖ್ಯಸ್ಥ ಪ್ರೊ| ಮುರಳೀಧರ ನಂಬೂದರಿ, ಕೋಲಾರದ ಡಾ| ಅಜೀಂ, ಪುದುಚೇರಿಯ ಡಾ| ಅರುಣ್ ಅಲೆಕ್ಸಾಂಡರ್, ಮಣಿಪಾದ ಡಾ| ಬಾಲಕೃಷ್ಣನ್, ಮಡಿಕೇರಿಯ ಡಾ| ಮೋಹನ್ ಅಪ್ಪಾಜಿ, ಮಂಗಳೂರಿನ ಡಾ| ಗಂಗಾಧರ್ ಸೋಮಯಾಜಿ, ಮಣಿಪಾಲದ ಡಾ| ಕೈಲಾಶ್ ಪೂಜಾರಿ, ಮಂಗಳೂರಿನ ಡಾ| ಪಿ.ಪಿ. ದವನ್, ಡಾ| ಸುಜಾ ಶ್ರೀಧರನ್ ಭಾಗವಹಿಸಿದ್ದರು.
ಕ್ಷೇಮ ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ| ರಾಜೇಶ್ವರಿ ಸ್ವಾಗತಿಸಿದರು. ಡಾ| ವಾದೀಶ್ ಭಟ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ| ಮರೀನಾ ಸಲ್ದಾನ ನಿರ್ವಹಿಸಿದರು.