Advertisement

ಮದ್ಯವ್ಯಸನಿಗಳ ಮಕ್ಕಳ ಕುರಿತಾಗಿ ತಾತ್ಸಾರ ಬೇಡ ; ಪ್ರೋತ್ಸಾಹ ಕೊಡಿ

11:32 AM Feb 16, 2019 | Karthik A |

ಉಡುಪಿ: ರೋಟರಿ ಪರ್ಕಳ ಹಾಗೂ ರೋಟರಿ ಸಮುದಾಯ ದಳ ಕಬ್ಯಾಡಿ ಇವುಗಳ ಸಹಯೋಗದಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ವಾರದ ಸಭೆ ಕಬ್ಯಾಡಿಯಲ್ಲಿರುವ ನಾಗಬ್ರಹ್ಮಸ್ಥಾನದಲ್ಲಿ ಇತ್ತಿಚೆಗೆ ನಡೆಯಿತು. ಮಾಹಿತಿ ಕಾರ್ಯಾಗಾರದಲ್ಲಿ ಮನೋವೇದ್ಯರಾಗಿರುವ ಹಾಗೂ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾಗಿರುವ ಡಾ. ಪಿ.ವಿ. ಭಂಡಾರಿ ಮತ್ತು ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆಯವರು ಭಾಗವಹಿಸಿದ್ದರು.

Advertisement

‘ಮದ್ಯ ವ್ಯಸನಿಗಳ ಮಕ್ಕಳು – ನಮ್ಮ ಜವಾಬ್ದಾರಿ’ ಎಂಬ ವಿಷಯದ ಕುರಿತಾಗಿ ಡಾ. ಭಂಡಾರಿ ಮತ್ತು ಡಾ. ವಿರೂಪಾಕ್ಷ ಅವರು ತಮ್ಮ ವಿಚಾರಗಳನ್ನು ಸಭೆಯಲ್ಲಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಭಂಡಾರಿಯವರು, ಮದ್ಯವ್ಯಸನಿಗಳ ಮಕ್ಕಳ ಕುರಿತಾಗಿ ಸಮುದಾಯ ಜವಾಬ್ದಾರಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕುಡಿತ ಎನ್ನುವುದೂ ಸಹ ಒಂದು ಕಾಯಿಲೆ. ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿಯ ಮಕ್ಕಳನ್ನು ಈ ಸಮಾಜ ‘ಕುಡುಕನ ಮಗ’ ಎಂದೇ ಗುರುತಿಸುತ್ತದೆ, ಆ ಭಾವನೆ ಮೊದಲಿಗೆ ನಮ್ಮಲ್ಲಿ ದೂರವಾಗಬೇಕು. ಆ ಮಕ್ಕಳ ಮನಸ್ಸನ್ನು ಘಾಸಿಗೊಳಿಸುವ ಬದಲಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು. ಅಂತಹ ಮಕ್ಕಳು ಮನೆಯಲ್ಲಿ ಹೆತ್ತವರ ಪ್ರೀತಿಯಿಂದ ವಂಚಿತರಾಗಿರುತ್ತಾರೆ, ಆ ಕಾರಣದಿಂದಲೇ ಈ ಮಕ್ಕಳು ನಿಧಾನವಾಗಿ ಅಪರಾಧ ಜಗತ್ತಿನತ್ತ ಸೆಳೆಯಲ್ಪಡುತ್ತಾರೆ, ಅದನ್ನು ತಪ್ಪಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ನಮ್ಮ ಆಸ್ಪತ್ರೆಯ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಡಾ. ಭಂಡಾರಿ ಅವರು ಹೇಳಿದರು.

ಮದ್ಯವ್ಯಸನಿ ಪೀಡಿತರ ಮಕ್ಕಳಿಗೆ ‘ನೀವು ಒಂಟಿಯಲ್ಲ’ ಎಂದು ಹೇಳುವುದು ನಮ್ಮೆಲ್ಲರ ಜವಾಬ್ದಾರಿ. ಹಾಗಾದಾಗ ಮಾತ್ರ ಅಂತಹ ಮಕ್ಕಳಿಗೆ ಮುಂದೆ ಉತ್ತಮ ಭವಿಷ್ಯ ಲಭ್ಯವಾಗುವಂತೆ ಮಾಡಲು ಸಾಧ್ಯ ಎಂದು ಡಾ. ವಿರೂಪಾಕ್ಷ ದೇವರಮನೆಯವರು ಅಭಿಪ್ರಾಯಪಟ್ಟರು.

ಬಾಳಿಗ ಆಸ್ಪತ್ರೆಯಲ್ಲಿ ಪ್ರತೀ ತಿಂಗಳ ಮೂರನೇ ಶನಿವಾರ ಮದ್ಯವ್ಯಸನಿಗಳ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇದರಲ್ಲಿ, ಮದ್ಯವ್ಯಸನಿಗಳ ಮಕ್ಕಳನ್ನು ಮ್ಯೂಸಿಯಂ, ಬೀಚ್ ಗಳಿಗೆ ಕರೆದುಕೊಂಡು ಹೋಗುವುದು. ನಾಣ್ಯ ಸಂಗ್ರಹ, ಫೊಟೋಗ್ರಾಫಿ ಮತ್ತು ಇತರೇ ಹವ್ಯಾಸಗಳ ಕುರಿತು ಅವರಲ್ಲಿ ಆಸಕ್ತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಡಾ. ಭಂಡಾರಿಯವರು ಇದೇ ಸಂದರ್ಭದಲ್ಲಿ ನೀಡಿದರು.

ರೋಟರಿ ಪರ್ಕಳದ ಅಧ್ಯಕ್ಷರಾಗಿರುವ ರೊಟೇರಿಯನ್ ಗುರುಪ್ರಸಾದ್ ಕಾಮತ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎ. ಗಣೇಶ್ ಮತ್ತು ಲಕ್ಷ್ಮೀ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next