ಬೆಂಗಳೂರು: ಬಿಜೆಪಿ ಸರ್ಕಾರ ಇದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ ಎಂದು ಪೊಲೀಸರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಜಾಲಹಳ್ಳಿ, ಪೀಣ್ಯ ಮತ್ತಿತರ ವಾರ್ಡ್ ನಲ್ಲಿ ಶುಕ್ರವಾರ ರೋಡ್ ಶೋ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು, ಪೊಲೀಸರು ಒಂದು ಪಕ್ಷದ ಪರ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದರು.
ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಮುನಿರತ್ನ ಅವರು ಎರಡು ಬಾರಿ ಗೆದ್ದು ಶಾಸಕನಾಗಲು ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಅವರ ವೈಯಕ್ತಿಕ ವರ್ಚಸ್ಸಲ್ಲ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್ ನಗರ ಕ್ಷೇತ್ರದ ಅಭಿವೃದ್ಧಿಗೆ 2,000 ಕೋಟಿ ರೂ. ಅನುದಾನ ನೀಡಿದ್ದೆ, ಆದರೂ ಮುನಿರತ್ನ ನಮಗೆ ದ್ರೋಹ ಮಾಡಿದರು. ಆತನಿಗೆ ನಾವೇನು ಅನ್ಯಾಯ ಮಾಡಿದ್ದೆವು. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಎಂದು ಹೇಳುತ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದರು. ನಾವು ಯಾಕಪ್ಪಾ ಪಕ್ಷನಾ ತಾಯಿ ಅಂತ ಕರೀತಿದ್ದೆ, ಈಗ ಅದೇ ತಾಯಿಗೆ ಮೋಸ ಮಾಡಿದೆಯಲ್ಲಾ ಎಂದರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳ್ಳೋ ಅಂತ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ಕ್ಷೇತ್ರದ ಜನತೆ ಮುನಿರತ್ನ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೇ ಹೊರತು ಅವರು ದೊಡ್ಡ ನಾಯಕರು ಎಂದಲ್ಲ. ನಾವೇನೂ ಅವರ ಕುತ್ತಿಗೆ ಹಿಡಿದು ಪಕ್ಷದಿಂದ ಹೊರ ದಬ್ಬಲಿಲ್ಲ. ಸ್ವಾರ್ಥಕ್ಕಾಗಿ ಅವರು ಬಿಜೆಪಿಗೆ ಹೋದರು. ಇಂಥವರು ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಮುನಿರತ್ನ ಅವರದ್ದು ಬ್ಲಾಕ್ ಮೇಲ್ ರಾಜಕೀಯ. ತಮಗಾಗಿ ದುಡಿಯುವ ಕಾರ್ಯಕರ್ತರ ಮೇಲೆಯೇ ಸುಳ್ಳು ಕೇಸು ಹಾಕಿಸುವುದು ಅವರ ಅಭ್ಯಾಸ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಾವಿರಾರು ಸುಳ್ಳು ಕೇಸ್ ಗಳನ್ನು ಮುನಿರತ್ನ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದೆ, ಅದರ ಜೊತೆಗೆ ವಿತರಣೆ ಆಗುತ್ತಿರುವ ಆಹಾರ ಪದಾರ್ಥಗಳು ಕಲಬೆರಕೆಯಾಗಿದೆ. ಸರ್ಕಾರ ಕೊಡುತ್ತಿರುವ ರಾಗಿಯನ್ನು ಕೋಳಿ ಸಹ ತಿನ್ನುವುದಿಲ್ಲ ಎಂದು ಜನ ಶಾಪ ಹಾಕುತ್ತಿದ್ದಾರೆ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಭ್ರಷ್ಟಾಚಾರ ಪಾರದರ್ಶಕ
ನಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಇತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಲಂಚಾವತಾರ ವಿಜೃಂಭಿಸುತ್ತಿದ್ದು ಭ್ರಷ್ಟಾಚಾರ ಪಾರದರ್ಶಕವಾಗಿ ನಡೆಯುತ್ತಿದೆ. ಇಂಥ ಸರ್ಕಾರಕ್ಕೆ ಉಪ ಚುನಾವಣೆ ಫಲಿತಾಂಶ ಎಚ್ಚರಿಕೆಯ ಗಂಟೆ ಆಗಬೇಕು. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.