Advertisement

ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

01:58 PM Jun 10, 2017 | Team Udayavani |

ಮೈಸೂರು: ನೌಕರರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಜಿಲ್ಲೆಯ ಸೌತ್‌ ಇಂಡಿಯಾ ಪೇಪರ್ಸ್‌ ಮಿಲ್ಸ್‌ ಕಾರ್ಖಾನೆ ನೌಕರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಎಐಟಿಯುಸಿ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಸೌತ್‌ ಇಂಡಿಯಾ ಪೇಪರ್ಸ್‌ ಮಿಲ್ಸ್‌ ಕಾರ್ಖಾನೆ ಆರಂಭವಾಗಿ 55 ವರ್ಷ ಕಳೆದಿದ್ದು, 400ಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು 500 ಟನ್‌ ಕಾಗದ ಉತ್ಪಾದನೆ ಮಾಡುತ್ತಿರುವ ಈ ಕಾರ್ಖಾನೆ ವಾರ್ಷಿಕವಾಗಿ 200 ಕೋಟಿ ರೂ.ಗಳಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಮೂಲಕ ವಾರ್ಷಿಕ ಸಾಕಷ್ಟು ಲಾಭ ಪಡೆಯುತ್ತಿದೆ.

ಹೀಗಿದ್ದರೂ ಕಾರ್ಖಾನೆ ಮಾಲೀಕರು ಕಾರ್ಮಿಕರಿಗೆ ಉತ್ತಮ ವೇತನ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಬೇಸತ್ತ ಕಾರ್ಖಾನೆ ಕಾರ್ಮಿಕರುಗಳು ಕಳೆದ 80 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಇವರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡುವ ಜತೆಗೆ ನೌಕರರಿಗೆ ಉತ್ತಮ ವೇತನ ನೀಡಬೇಕು.

ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ತಮ್ಮ ನೇತೃತ್ವದಲ್ಲಿ ಸಭೆ ನಡೆಸಬೇಕೆಂದು ಎಐಟಿಯುಸಿ ಸದಸ್ಯರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಂಜನಗೂಡಿನ ಸೌತ್‌ ಇಂಡಿಯಾ ಪೇಪರ್ಸ್‌ ಮಿಲ್ಸ್‌ ಲಿಮಿಟೆಡ್‌ ಮತ್ತು ಪ್ಯಾಕೇಜಿಂಗ್‌ ಇಂಡಸ್ಟ್ರೀಸ್‌ನ ಹಲವು ಕಾರ್ಮಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next