Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೌರ ಕಾರ್ಮಿಕರ ಪ್ರತಿಭಟನೆ

07:37 PM Aug 06, 2021 | Team Udayavani |

ಹನೂರು: ಪೌರಕಾರ್ಮಿಕರ ಕುಂದುಕೊರತೆ ಆಲಿಸಲು ಪ್ರಾಧಿಕಾರದ ಕಾರ್ಯದರ್ಶಿ ಜೊತೆ ತೆರಳಿದ್ದ ಟೈಪಿಸ್ಟ್ ಪೌರ ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ಪ್ರಾಧಿಕಾರದ ಕಚೇರಿ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

Advertisement

ಏನಿದು ಘಟನೆ?: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮನೆಗಳು ಮಳೆಗಾಲದಲ್ಲಿ ಸೋರುತ್ತಿವೆ ಎಂದು ಕೆಲ ಪೌರಕಾರ್ಮಿಕರು ಮಾಧ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಿದ್ದರು. ಈ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಕಚೇರಿ ಟೈಪಿಸ್ಟ್ ನಾಗರಾಜು ಮತ್ತು ಇತರೆ ಸಿಬ್ಬಂದಿ ಪರಿಶೀಲನೆಗಾಗಿ ಪೌರಕಾರ್ಮಿಕರ ಕಾಲೋನಿಗೆ ತೆರಳಿದ್ದರು. ಈ ವೇಳೆ ಕಳೆದ 6 ತಿಂಗಳ ಹಿಂದೆ ಅಪಘಾತದಿಂದ ಕಾಲು ಕಳೆದುಕೊಂಡಿದ್ದ ನೌಕರ ಪಳನಿಸ್ವಾಮಿ ಅವರ ಮನೆಗೆ ತೆರಳುತ್ತಾರೆ. ಈ ವೇಳೆ ಪಳನಿಸ್ವಾಮಿ ಮತ್ತು ಕುಟುಂಬಸ್ಥರು ಅಧಿಕಾರಿಗಳನ್ನು ಕಂಡು ಕಳೆದ 6 ತಿಂಗಳಿನಿಂದ ಅದ ತಮಗೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಈ ಮಧ್ಯೆ ಕಳೆದ ವಾರ ಕೆಲಸದಿಂದ ತೆಗೆದು ಹಾಕಿ ನೋಟೀಸ್ ನೀಡಲಾಗಿದೆ. ಇದರಿಂದ ನಮಗೆ ಮತ್ತಷ್ಟು ಆತಂಕ ಹೆಚ್ಚಾಗಿದ್ದು ತಮ್ಮನ್ನು ಮತ್ತೆ ಕೆಲಸಕ್ಕೆ  ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಟೈಪಿಸ್ಟ್ ನಾಗರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಂಕೋಲಾ : ಲಾರಿ, ಕ್ಯಾಂಟರ್ ನಡುವೆ ಭೀಕರ ಅಪಘಾತ : ಓರ್ವ ಸಾವು, ಇಬ್ಬರಿಗೆ ಗಾಯ

ಗಾಯಾಳು ಪಳನಿಸ್ವಾಮಿಯನ್ನು ನಾಗರಾಜು ನಿಂದಿಸಿರುವ ಬಗ್ಗೆ ಮಾಹಿತಿ ಪಡೆದ ಪೌರಕಾರ್ಮಿಕರು ಒಗ್ಗೂಡಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೌರಕಾರ್ಮಿಕರ ಅಳಲನ್ನು ಆಲಿಸಲು ಮತ್ತು ಮನವಿ ಸ್ವೀಕರಿಸಲು ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದಿದ್ದರಿಂದ ಕೋಪಗೊಂಡ ಪೌರ ಕಾರ್ಮಿಕರು ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕರೆಯಿಸಿ ಬಳಿಕ ಬೀಗ ಜಡಿದರು.

ಬಳಿಕ ಮ.ಬೆಟ್ಟ ಸಿಪಿಐ ರಮೇಶ್‌ಕುಮಾರ್ ಪ್ರಾಧಿಕಾರದ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಚರ್ಚಿಸಿ ಸಮಸ್ಯೆ ಬಗ್ಗೆ ವಿವರಿಸಿದಾಗ ಉಪಕಾರ್ಯದರ್ಶಿ ಬಸವರಾಜು ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಕಚೇರಿಯ ಬೀಗ ತೆರೆದು ಸಭೆ ನಡೆಸಿ ನಾಗರಾಜು ಪಳನಿಸ್ವಾಮಿಯನ್ನು ನಿಂದಿಸಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಪೌರ ಕಾರ್ಮಿಕರ ವೇತನ ಸಂಬಂಧ ಚರ್ಚಿಸಿ ಕೊರೋನಾ ಹಿನ್ನೆಲೆ ಪ್ರಾಧಿಕಾರದ ಆದಾಯ ಕುಂಠಿತವಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಶೇ.35 ಆದಾಯವನ್ನು ಮಾತ್ರ ವೇತನಕ್ಕೆ ಖರ್ಚು ಮಾಡಲು ಅವಕಾಶವಿದ್ದು ವೇತನ ಸಮಸ್ಯೆ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next