ಮಹಾನಗರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ದ.ಕ. ಜಿಲ್ಲಾ ಕಚೇರಿ ಮುಂಭಾಗ ಗುರುವಾರ ಬೆಳಗ್ಗೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ಕುಣಿದು ಕುಪ್ಪಳಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಸುಭದ್ರ ಬಿಜೆಪಿ ಸರಕಾರ ಸ್ಥಾಪನೆಯಾಗಲಿದೆ
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಕಾರ್ಯಕರ್ತರಿಗೆ ಸಂತಸ ನೀಡಿದೆ. ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತಕ್ಕೆ ಅಡಿಪಾಯ ಹಾಕಿದ್ದಾರೆ.
ಮುಂದಿನ 15 ದಿನಗಳೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದು, ಅದರಂತೆ ಬಿಜೆಪಿ ವಿಧಾನಸಭೆಯಲ್ಲಿ ಪೂರ್ಣ ಬಹುಮತ ಸಾಬೀತುಪಡಿಸಲಿದೆ. ಈ ಮೂಲಕ ಸುಭದ್ರ ಬಿಜೆಪಿ ಸರಕಾರ ಪುನಃ ಸ್ಥಾಪನೆಯಾಗಲಿದೆ ಎಂದರು. ರಾಜ್ಯದಲ್ಲಿ ಇದುವರೆಗೆ ಇದ್ದ ಸರಕಾರವು ಧರ್ಮದ ಆಧಾರದಲ್ಲಿ ತುತ್ಛವಾಗಿ ಕಾಣುವುದು, ಜನರಲ್ಲಿ ಭೇದಭಾವ ಉಂಟು ಮಾಡುವುದು, ಮತೀಯವಾಗಿ ವರ್ಗೀಕರಣ, ಭ್ರಷ್ಟಾಚಾರಕ್ಕೆ ಒತ್ತು ಮುಂತಾದ ದುರ್ನಡತೆಗಳಿಂದ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿತ್ತು. ಅದರ ಪರಿಣಾಮವಾಗಿ ರಾಜ್ಯದ ಜನ ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ತಿರಸ್ಕರಿಸಿದ್ದಾರೆ.
ಇತ್ತೀಚಿನವರೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಇದೀಗ ಅವರದ್ದೇ ಜತೆಯಲ್ಲಿ ಕೈಜೋಡಿಸುವ ಮೂಲಕ ಅಧಿಕಾರಕ್ಕೆ ಜೋತುಬಿದ್ದವರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಪ್ರಮುಖರಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಡಾ| ಅಣ್ಣಯ್ಯ ಕುಲಾಲ್, ಸಂಜಯ ಪ್ರಭು ಮುಂತಾದವರು ಈ ಸಂದರ್ಭ ಭಾಗವಹಿಸಿದ್ದರು.