ಮೈಸೂರು: ಸುಮಾರು 23 ವರ್ಷಗಳಿಂದ ನಾನು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನನಗೆ ಸಿಕ್ಕಿರುವ ಅಧಿಕಾರ ಬಳಸಿಕೊಂಡು ರೈತರಿಗೆ ಅನುಕೂಲ ಮಾಡಬೇಕಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಮೈಸೂರಿನ ವಿಶ್ವೇಶ್ವರನಗರದ ಸಿಂಧೂರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
23 ವರ್ಷಗಳಿಂದ ನಾನು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಇದು ನನಗೆ ಇಷ್ಟವಾದ ಕ್ಷೇತ್ರ. ಹೀಗಾಗಿ ನನ್ನ ಹಿನ್ನೆಲೆ ಗಮನಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನನಗೆ ಸಹಕಾರ ಖಾತೆಯನ್ನೇ ಕೊಟ್ಟಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ನನಗೆ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ರೈತರಿಗೆ ಅನುಕೂಲ ಮಾಡಬೇಕಾಗಿದೆ. ಸಹಕಾರ ಕ್ಷೇತ್ರದಿಂದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.
ಕಟ್ಟಡದ ಬುನಾದಿ ಗಟ್ಟಿಯಿದ್ದರೆ ಮಾತ್ರ, ಅದು ಸುಭದ್ರವಾಗುತ್ತದೆ. ಅಂತೆಯೇ ಸಹಕಾರ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ. ರಾಜ್ಯದಲ್ಲಿ ಸಹಕಾರ ಚಳವಳಿ ವ್ಯಾಪಕವಾಗಿ ಬೆಳೆದಿದೆ. ಇದು ಮತ್ತಷ್ಟು ಅಭಿವೃದ್ಧಿಯಾಗಬೇಕಿದ್ದು, ಇನ್ನಷ್ಟು ಬಲವಾದಷ್ಟು ಜನಸಾಮಾನ್ಯರಿಗೆ, ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸಹಕಾರ ಕ್ಷೇತ್ರ ಬಲ ಪಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ಆಡಳಿತ ಮಂಡಳಿಯವರು ಸಹಕಾರ ನೀಡಿದರೆ ಒಂದು ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯ. ಅದೇ ರೀತಿ ಅಗಸ್ತ್ಯ ಸಹಕಾರ ಸಂಘಕ್ಕೆ ಆಡಳಿತ ಮಂಡಳಿಯವರು ಉತ್ತಮವಾಗಿ ನೆರವು, ಸಹಕಾರ ನೀಡಿದ್ದಾರೆ. ಅದಕ್ಕಾಗಿ ಈ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಒಂದು ಸಂಸ್ಥೆಯನ್ನು ಎಲ್ಲ ರೀತಿಯಲೂ ಬೆಳಸಲು ಕಷ್ಟ. ಆದರೆ, ಅಗಸ್ತ್ಯ ಸಂಸ್ಥೆ ಎಲ್ಲ ರೀತಿಯಲ್ಲೂ ಉತ್ತಮವಾಗಿ ಬೆಳೆದು ಬಂದಿದೆ ಎಂದು ಸಂಘದ ಕಾರ್ಯ ಶ್ಲಾ ಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ನಾನು ಸಹಕಾರ ಕ್ಷೇತ್ರಕ್ಕೆ ಬರಲು ಕಾರಣ ಅಗಸ್ತ್ಯ ಸೊಸೈಟಿ ಕಾರಣ. ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ. ಜತೆಗೆ, ಇದು ತನ್ನ ಸದಸ್ಯರಿಗೆ ಅನೇಕ ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಹೀಗಾಗಿ, ಇದು ರಾಜ್ಯದ ಸಹಕಾರ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ಸೊಸೈಟಿಯ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.