ಬೆಂಗಳೂರು: ಕೋವಿಡ್ -19 ಸೋಂಕು ನಿಯಂತ್ರಣ ಕ್ರಮಗಳು, ಲಾಕ್ ಡೌನ್- ಅನ್ ಲಾಕ್ ಚರ್ಚೆಗಳ ನಡುವೆ ಬಿಜೆಪಿಯ ರಾಜಕೀಯವೂ ಜೋರಾಗಿಯೇ ನಡೆಯುತ್ತಿದೆ. ಸಿಎಂ ಬದಲಾವಣೆ ಚರ್ಚೆ, ದೆಹಲಿ ಪ್ರಯಾಣ, ಸಹಿ ಸಂಗ್ರಹ ಮುಂತಾದ ಹಲವು ವಿದ್ಯಮಾನಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಇದೆ. ಹೈಕಮಾಂಡ್ ಕೇಳಿದರೆ ರಾಜೀನಾಮೆ ನೀಡುತ್ತೇನೆ ಎಂದು ನಿನ್ನೆಯಷ್ಟೇ ಸ್ಫೋಟಕ ಹೇಳಿಕೆ ನೀಡಿದ್ದ ಸಿಎಂ ಯಡಿಯೂರಪ್ಪ ಇದೀಗ ಪಕ್ಷದ ಶಾಸಕರಿಗೆ ಮತ್ತೊಂದು ಕಿವಿಮಾತು ಹೇಳಿದ್ದಾರೆ.
ಸಹಿ ಸಂಗ್ರಹಣೆ ಮಾಡುವುದು, ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡಿ ಎಂದು ತಮ್ಮ ಶಾಸಕರಿಗೆ ಕಟುವಾಗಿಯೇ ಕಿವಿಮಾತು ಹೇಳಿದ್ದಾರೆ ಸಿಎಂ ಬಿಎಸ್ ವೈ.
ಇದನ್ನೂ ಓದಿ:ಭಿಕ್ಷೆ ಬೇಡಿ ಮಂತ್ರಿಯಾದವರು ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ: ರೇಣುಕಾಚಾರ್ಯ ಕಿಡಿ
ಟ್ವೀಟ್ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರವಿವಾರ ಬಿಎಸ್ ವೈ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಅದಲ್ಲದೆ ರಾಜ್ಯದಲ್ಲಿ ಪರ್ಯಾಯ ನಾಯಕರಿಲ್ಲ ಎನ್ನುವುದು ಸುಳ್ಳು. ಸಾಕಷ್ಟು ಮಂದಿ ಪರ್ಯಾಯ ನಾಯಕರಿದ್ದಾರೆ ಎಂದಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಠಿಸಿತ್ತು.