Advertisement

ಕಾಮಗಾರಿ ಪ್ರಗತಿ ಪರಿಶೀಲನೆ

10:30 AM Jan 12, 2018 | |

ಮಹಾನಗರ: ನಗರದ ಹಳೆಯ ಮಾರುಕಟ್ಟೆಗಳೊಂದಾದ ಕುದ್ರೋಳಿ- ಅಳಕೆ ಮಾರುಕಟ್ಟೆಗೆ ಹೊಸ ಕಟ್ಟಡದ ಭಾಗ್ಯ ಒದಗಿ ಬಂದಿದ್ದು, ಕಟ್ಟಡದ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಶಾಸಕ ಜೆ.ಆರ್‌. ಲೋಬೋ ಅವರು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದರು. ಮುಖ್ಯಮಂತ್ರಿ ನಿಧಿಯ 50 ಲಕ್ಷ ರೂ. ಮತ್ತು ಎಂಟರ್‌ಪ್ರೈಸ್‌ ನಿಧಿಯ 50 ಲಕ್ಷ ರೂ. ಸೇರಿದಂತೆ ಒಟ್ಟು 1 ಕೋಟಿ ರೂ. ವೆಚ್ಚದಲ್ಲಿ ಈ ಮಾರುಕಟ್ಟೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು.

Advertisement

ಸಾಗುತ್ತಿದೆ ಪೂರಕ ಕಾಮಗಾರಿ
ಕುದ್ರೋಳಿ ಅಳಕೆ ಮಾರುಕಟ್ಟೆಯ ಕಟ್ಟಡವು ತೀರಾ ಹಳೆಯದಾಗಿದ್ದು, ಸಾರ್ವಜನಿಕರು ಬಹಳಷ್ಟು ಪ್ರಯಾಸ ಪಟ್ಟು ಈ ಮಾರುಕಟ್ಟೆಗೆ ಭೇಟಿ ನೀಡಿ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಈ ಪ್ರದೇಶದ ನಾಗರಿಕರು ಹಲವಾರು ವರ್ಷಗಳಿಂದ ಹೊಸ ಕಟ್ಟಡದ ಬೇಡಿಕೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಮಂಡಿಸುತ್ತಾ ಬಂದಿದ್ದಾರೆ. ಇದೀಗ ಕುದ್ರೋಳಿ ಮುಖ್ಯ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್‌ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ಅದಕ್ಕೆ ಪೂರಕವಾಗಿ ಅಳಕೆ ಸೇತುವೆ ಕಾರ್ಯವು ಪ್ರಾರಂಭವಾಗಿದೆ ಎಂದು ವಿವರಿಸಿದರು.

ಬಹಳಷ್ಟು ಪ್ರಯೋಜನ
ನಗರ ಬೆಳೆಯುತ್ತಿದ್ದಂತೆ ಸುಸಜ್ಜಿತ ಮಾರುಕಟ್ಟೆಯು ತೀರಾ ಅಗತ್ಯವಾಗಿದೆ. ನೂತನ ಮಾರುಕಟ್ಟೆಯಿಂದ ಕುದ್ರೋಳಿ, ಅಳಕೆ, ಬಂದರ್‌, ಬೊಕ್ಕಪಟ್ಣ, ಕಾರ್‌ ಸ್ಟ್ರೀಟ್‌, ಮಣ್ಣಗುಡ್ಡೆ ಪ್ರದೇಶಗಳ ನಾಗರಿಕರಿಗೆ ಬಹಳಷ್ಟು ಪ್ರಯೋಜನ ಆಗಲಿದೆ. ಹೊಸ ಮಾರುಕಟ್ಟೆಯ ಕಟ್ಟಡದಲ್ಲಿ ಹೂವಿನ ಸ್ಟಾಲ್‌, ಹಣ್ಣುಹಂಪಲು, ತರಕಾರಿ, ಹಸಿಮೀನು, ಒಣಮೀನು, ಚಿಕನ್‌, ಮಟನ್‌, ಬೀಫ್‌, ಪೋರ್ಕ್‌ ಸ್ಟಾಲ್‌ಗ‌ಳ ಸಹಿತ ಸುಮಾರು 50 ಸ್ಟಾಲ್‌ಗ‌ಳಿವೆ. ಜನರ ನಿರೀಕ್ಷೆಗಳನ್ನು ಗಮನದಲ್ಲಿರಿಸಿ ಈ ಮಾರುಕಟ್ಟೆಯ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ತಿಗೊಳಿಸಲಾಗುವುದು ಎಂದು ಜೆ.ಆರ್‌. ಲೋಬೋ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next