ಮೈಸೂರು: ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಭವನ ಹಾಗೂ ಅರಸರ ಪ್ರತಿಮೆ ನಿರ್ಮಿಸುವ ಮೂಲಕ ಅರಸರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಿ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ದೇವರಾಜ ಅರಸು ಅವರಿಂದ ಲಾಭ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ಆದರೆ, ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನಲ್ಲೇ ಇದ್ದರೂ ಈ ಕಾರ್ಯಕ್ರಮಕ್ಕೆ ಬಾರದಿರುವುದು ನೋವಿನ ಸಂಗತಿ. ಮುಂದಿನ ವರ್ಷವಾದರೂ ಅದ್ಧೂರಿ ಕಾರ್ಯಕ್ರಮ ಮಾಡಿ, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಿ, ಹಾಸ್ಟೆಲ್ ಮಕ್ಕಳನ್ನು ಕರೆತಂದು ಕೂರಿಸಿಕೊಂಡು ಕಾರ್ಯಕ್ರಮ ಮಾಡಬೇಕಾಗಿ ಬಂದಿರುವುದು ದುರಂತದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವರಾಜ ಅರಸರಿಗೆ ಜಾತಿ ಬಲ ಇರಲಿಲ್ಲ. ಎಲ್ಲಾ ಜಾತಿಗಳಿಗೂ ಅವರು ಸಮಾನ ಅವಕಾಶ ನೀಡಿದ್ದರು. ಸ್ವತಃ ಉಳುಮೆ ಮಾಡಿ ರೈತರ ಕಷ್ಟ ಅರಿತಿದ್ದ ಅವರು, ಜಾತಿ ಬಲವಿಲ್ಲದಿದ್ದರೂ ಶಾಸಕರಾಗಿ ಮುಖ್ಯಮಂತ್ರಿ ಸ್ಥಾನದವರೆಗೆ ತಲುಪಿದ್ದಾರೆಂದು ಶ್ಲಾ ಸಿದರು. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ನೀಡಿದ 20 ಅಂಶಗಳ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದವರು ದೇವರಾಜ ಅರಸರು.
ಜಾತಿ ರಾಜಕೀಯಕ್ಕೆ ಹೆದರದೆ ಉಳುವವನೇ ಭೂಮಿ ಒಡೆಯ ಕಾನೂನು ತರುವ ಜತೆಗೆ ಜೀತ ಪದ್ಧತಿ ನಿರ್ಮೂಲನೆ ಮಾಡಿದರು. ಇಡೀ ದೇಶ ಇಂದಿರಾಗಾಂಧಿ ಅವರನ್ನು ತಿರಸ್ಕರಿಸಿದ್ದಾಗ ಚಿಕ್ಕಮಗಳೂರಿಗೆ ಕರೆತಂದು ಗೆಲ್ಲಿಸಿ, ರಾಜಕೀಯ ಪುನರ್ ಜನ್ಮ ನೀಡಿದವರು ಅರಸರು, ಆದರೆ ಅವರ ಕೊನೆ ದಿನಗಳ ನೋವು ಹೇಳಲಸಾಧ್ಯ ಎಂದರು. ದೇವರಾಜ ಅರಸರ ನಂತರ ಸಿದ್ದರಾಮಯ್ಯ ಎಂದು ರಾಜ್ಯದ ಜನ ನಂಬಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಅರಸರ ಹೆಸರಲ್ಲೂ ಕಾರ್ಯಕ್ರಮ ಆಗಬೇಕು ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಕೆ.ಸೋಮಶೇಖರ್, ಶೋಷಣೆ, ಬಡತನದ ವಿರುದ್ಧ ಹೋರಾಡಿದವರು ದೇವರಾಜ ಅರಸರು. ಹಾವನೂರು ಆಯೋಗ ರಚಿಸಿ ಅನೇಕ ಹಿಂದುಳಿದ ಜಾತಿಗಳಿಗೆ ಇಡೀ ದೇಶದಲ್ಲಿ ಮೊದಲಿಗೆ ಮೀಸಲಾತಿ ನೀಡಿದರು. ಈ ಮೂಲಕ ಸಣ್ಣ ಪುಟ್ಟ ಜಾತಿಗಳವರೂ ಶಾಸಕರಾಗಲೂ ಅವಕಾಶ ಕಲ್ಪಿಸಿದರು ಎಂದು ಹೇಳಿದರು.ವಕೀಲ ಡಿ.ಕೆ.ಕೃಷ್ಣರಾಜೇ ಅರಸು ಮುಖ್ಯ ಭಾಷಣ ಮಾಡಿದರು. ಮೈಸೂರು ಮಹಾ ನಗರಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್, ಉಪ ಮೇಯರ್ ರತ್ನಾಲಕ್ಷ್ಮಣ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ನಗರಪಾಲಿಕೆ ಸದಸ್ಯರಾದ ರಾಜಲಕ್ಷಿ, ಅನಂತು ಮತ್ತಿತರರು ಉಪಸ್ಥಿತರಿದ್ದರು.
ಕಾಟಾಚಾರಕ್ಕೆ ಅರಸು ಜಯಂತ್ಯುತ್ಸವ
ಜಿಲ್ಲಾಡಳಿತ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಡಿ.ದೇವರಾಜ ಅರಸರ 102ನೇ ಜನ್ಮ ದಿನಾಚರಣೆ ಕಾಟಾಚಾರಕ್ಕೆಂಬಂತೆ ನಡೆಯಿತು. ಶಿಷ್ಟಾಚಾರ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ 32 ಜನ ಚುನಾಯಿತ ಜನ ಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಲಾಗಿತ್ತು. ಆದರೆ, ಬಂದವರು ಕೇವಲ ಆರು ಜನ. ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನ 12ಕ್ಕೆ ಸಚಿವರು ಬರುವುದಿಲ್ಲ ಎಂಬ ಮಾಹಿತಿ ಬಂದ ನಂತರ ಕಾರ್ಯಕ್ರಮ ಆರಂಭಿಸಲಾಯಿತು.
ಮೈಸೂರಿನಲ್ಲೇ ಇದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮದತ್ತ ಸುಳಿಯಲಿಲ್ಲ. ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ವಾಸು ಅವರ ಗೈರುಹಾಜರಿಯಿಂದಾಗಿ ಶಾಸಕ ಎಂ.ಕೆ.ಸೋಮಶೇಖರ್‌ರಿಗೆ ಕೋರಿದರೂ ಅವರು ಒಪ್ಪದೆ, ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮುಗಿಸಿ ಹೊರನಡೆದರು. ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆತಂದು ಸಭಾಂಗಣವನ್ನು ಭರ್ತಿ ಮಾಡಲಾಗಿತ್ತು. ಸಚಿವರಿಗೆ ಮುಖ ತೋರಿಸಲು ಬಂದಿದ್ದ ಕೆಲವರೂ ಅವರು ಬರುವುದಿಲ್ಲ ಎಂದು ತಿಳಿದ ನಂತರ ಹೊರನಡೆದರು.