ಕಡಬ: ತುರ್ತು ಸಂದರ್ಭಗಳಲ್ಲಿ ಜನರ ಆರೋಗ್ಯ ಕಾಪಾಡಿ ನೂರಾರು ಜನರಿಗೆ ಆಪತಾºಂಧವನಾಗಿದ್ದ ಕಡಬದ 108 ಆ್ಯಂಬುಲೆನ್ಸ್ ವಾಹನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿ ಕಳೆದೊಂದು ತಿಂಗಳಿನಿಂದ ಮೂಲೆಗುಂಪಾಗಿದೆ. ತುರ್ತು ಸೇವೆಗಳಿಗೆ ಪಕ್ಕದ ಊರುಗಳ ವಾಹನ ವನ್ನು ಆಶ್ರಯಿಸಬೇಕಾದ ಸಂದಿಗ್ಧತೆಯನ್ನು ಕಡಬದ ಜನತೆ ಅನುಭವಿಸುತ್ತಿದ್ದಾರೆ.
ನಿರಂತರ ಓಡಾಟದಿಂದಾಗಿ ವಾಹನದ ಟರಯ್ಗಳು ಸಂಪೂರ್ಣವಾಗಿ ಸವೆದಿದ್ದು, ಹೊಸ ಟಯರ್ ಅಳವಡಿಸಬೇಕೆನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಅದರಿಂದಾಗಿ ವಾಹನ ಮೂಲೆ ಸೇರಿದ್ದು ಜನರು ಸೇವೆಯಿಂದ ವಂಚಿತರಾಗಿದ್ದಾರೆ.
ಕಡಬವನ್ನು ಕೇಂದ್ರೀಕರಿಸಿ ಕಾರ್ಯಾಚರಿ ಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಈ ಹಿಂದೆಯೂ ಟಯರ್ ಸಮಸ್ಯೆ ಎದುರಾಗಿ ವಾರಗಟ್ಟಲೆ ಮೂಲೆಗೆ ಸರಿದು ನಿಂತಾಗ ಮಾಧ್ಯಮ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿದ ಪರಿಣಾಮ ಹೊಸ ಟಯರ್ಗಳನ್ನು ಅಳವಡಿಸಲಾಗಿತ್ತು. 2024 ಎಪ್ರಿಲ್ನಲ್ಲಿ ಕಡಬಕ್ಕೆ ಅತ್ಯಾಧುನಿಕ ವೆಂಟಿಲೇಟರ್ ಇರುವ ಹೊಸ ಆ್ಯಂಬುಲೆನ್ಸ್ ವಾಹನವನ್ನು ನೀಡಲಾಗಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಕಿಲೋಮೀಟರ್ ಓಡಿದ್ದರಿಂದಾಗಿ ಟಯರ್ ಸವೆದಿದೆ.ಟಯರ್ ಬದಲಾವಣೆ ಮಾಡದ ಕಾರಣ 2024 ಡಿಸೆಂಬರ್ 06 ರಿಂದ ಆ್ಯಂಬುಲೆನ್ಸ್ ಅನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿಲ್ಲಿಸಲಾಗಿದೆ. ಇದೀಗ ತುರ್ತು ಸಂದರ್ಭದಲ್ಲಿ ಪಕ್ಕದ ಆಲಂಕಾರು, ಬೆಳ್ಳಾರೆ, ಶಿರಾಡಿ, ಸುಬ್ರಹ್ಮಣ್ಯದಿಂದ ಆ್ಯಂಬುಲೆನ್ಸ್ ಬರುವವರೆಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡಬದಲ್ಲಿ ಸುಸಜ್ಜಿತ ಸಮುದಾಯ ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಖಾಯಂ ವೈದ್ಯರ ಕೊರತೆಯಿಂದ ತುರ್ತು ಸಂದ ರ್ಭದಲ್ಲಿ ಪುತ್ತೂರು ಅಥವಾ ಮಂಗ ಳೂರಿನ ಆಸ್ಪತ್ರೆಯನ್ನು ಅವಲಂಬಿಸ ಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ವಾಹನಕ್ಕೆ ಹೊಸ ಟಯರ್ ಗಳನ್ನು ಅಳವಡಿಸುವ ಮೂಲಕ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಇಲ್ಲಿನ 108 ವಾಹನದ ಸಿಬಂದಿಯನ್ನು ಪಕ್ಕದ ಸುಳ್ಯ, ಬೆಳ್ಳಾರೆ, ಶಿರಾಡಿ, ಆಲಂಕಾರು, ಕೊಕ್ಕಡದ ಆ್ಯಂಬುಲೆನ್ಸ್ ಗಳಿಗೆ ನಿಯೋಜಿಸಲಾಗಿದ್ದು, ಕಳೆದೊಂದು ವಾರದಿಂದ ಸುಳ್ಯದ ಆ್ಯಂಬ್ಯುಲೆನ್ಸ್ ಸಂಚಾರವನ್ನು ಕೂಡಾ ಟಯರ್ ಸವೆದ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ.
ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಾರದ ಒಳಗೆ ಟಯರ್ ಅಳವಡಿಸಿ ಸಮಸ್ಯೆಯನ್ನು ಸರಿಪಡಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ನ್ನು ಉಪಯೋಗಿಸಲು ಸೂಚನೆ ನೀಡಲಾಗಿದೆ.
-ಡಾ|ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ