Advertisement

ಸ್ವಗ್ರಾಮದಲ್ಲೇ ಕೆಲಸ ಕೊಡಿ

03:10 PM Jul 18, 2017 | |

ಗೊರೇಬಾಳ: ನರೇಗಾ ಯೋಜನೆಯಡಿ ತಮ್ಮ ಗ್ರಾಮದಲ್ಲಿಯೇ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ತಿಮ್ಮಾಪುರ ಗ್ರಾಮದ ಕೂಲಿಕಾರರು ಬಾದರ್ಲಿ ಗ್ರಾಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

Advertisement

ಬಾದರ್ಲಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ ಗ್ರಾಮದ ಕೂಲಿಕಾರರಿಗೆ ಸ್ವಗ್ರಾಮ ಬಿಟ್ಟು ಆರ್‌.ಎಚ್‌.ನಂ-5ರಲ್ಲಿ ನರೇಗಾ ಯೋಜನೆಯಡಿ ಸ್ಮಶಾನದ ಕೆಲಸ ನೀಡಲಾಗಿದೆ. ನಮ್ಮೂರಿನಲ್ಲೇ ಕೆಲಸ ಮಾಡಲು ಅವಕಾಶಗಳಿವೆ. ಆದರೆ ಅಧಿಕಾರಿಗಳು ನಮ್ಮೂರು ಬಿಟ್ಟು ಬೇರೆ ಊರಿನಲ್ಲಿ ಕೆಲಸ ನೀಡುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಪಂ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೂಲಿಕಾರರ ಸಂಘದ ಮುಖಂಡ ಹುಲಿಗೆಯ್ಯ ಮಾತನಾಡಿ, ನಮ್ಮೂರಿನಲ್ಲಿ ಕೆಲಸ ಮಾಡಲಿಕ್ಕೆ ಅವಕಾಶವಿದೆ. ಜೆಇ ಹಾಗೂ ಪಿಡಿಒ ಅವರು ಬಾದರ್ಲಿ ಗ್ರಾಮದ ಕೂಲಿಕಾರರನ್ನು ತಿಮ್ಮಾಪುರಕ್ಕೆ ಹಾಕಿದ್ದಾರೆ. ತಿಮ್ಮಾಪುರ ಗ್ರಾಮದವರಿಗೆ ಆರ್‌.ಎಚ್‌.ನಂ-5ರ ಸ್ಮಶಾನದ ಕೆಲಸ ನೀಡಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ. ನಮ್ಮೂರಿನಲ್ಲಿಯೇ ನಮಗೆ ಕೂಲಿ ಕೆಲಸ ನೀಡಿದರೆ ಮಾತ್ರ ನಮಗೆ ಒಳ್ಳೆಯ ಕೂಲಿ ಸಿಗುತ್ತದೆ. ಬೇರೆ ಊರಿಗೆ ಬಂದು ಕೆಲಸ ಮಾಡುವುದರಿಂದ ಕೂಲಿಯೂ ಕಡಿಮೆ ಬಿದ್ದಿದೆ
ಎಂದು ಆರೋಪಿಸಿದರು. 

ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿ, ನರೇಗಾ ಯೋಜನೆಯಡಿ ನಿಯಮಗಳನ್ನು ಮೀರಿ ಬೇರೆ ಕಡೆ ಕೆಲಸ ನೀಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಸಿಎಸ್‌ಎಫ್‌ ಕ್ಯಾಂಪಿನಲ್ಲಿ ಕೆಲಸ ಮಾಡಲು ಕಳುಹಿಸಿದ ಸಂದರ್ಭದಲ್ಲಿ ನಡೆದ ಟ್ರ್ಯಾಕ್ಟರ್‌ ದುರಂತದಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು. ಇದಕ್ಕೆ ಜಿಪಂ ಸಿಇಒ, ತಾಪಂ ಇಒ ನೇರ ಹೊಣೆ ಆಗಿದ್ದಾರೆ ಎಂದು
ಆರೋಪಿಸಿದರು. ಕೂಲಿಕಾರರಿಗೆ ಸ್ವಗ್ರಾಮದಲ್ಲೇ ಕೆಲಸ ನೀಡಬೇಕು. ಶಾಸಕರು ಹೇಳಿದಲ್ಲಿ ಮಾತ್ರ ಹೆಚ್ಚಿಗೆ ಕೂಲಿ ಹಣ
ನೀಡಲಾಗುತ್ತಿದೆ. ಬೇರೆ ಪಕ್ಷದವರಿದ್ದರೆ ಅವರಿಗೆ ಕಡಿಮೆ ಕೂಲಿ ಹಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ 
ಜೆಡಿಎಸ್‌ನಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಗ್ರಾಪಂ ಸದಸ್ಯ ಸೋಮಶೇಖರಗೌಡ, ಮುಖಂಡರಾದ ಉಪ್ಪಳಪ್ಪ ಗಿಣಿವಾರ, ಪಂಪಾಪತಿ, ಮಂಜುನಾಥ, ಕನಕಪ್ಪ, 
ಪಾಲಮ್ಮ, ಪಾರ್ವತೆಮ್ಮ, ಹುಲಿಗೆಮ್ಮ, ಮಂಜುನಾಥ, ಶ್ರೀದೇವಿ, ಯಂಕಮ್ಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next