ರಾಮನಗರ: ಯಾವುದೇ ಅಪಾಯಕಾರಿಯಲ್ಲದ ತುಂಬಾ ಮನೋಲ್ಲಾಸ ನೀಡುವ ರೈಡ್‌ಗಳನ್ನು ನೀಡಿರುವ ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಸುಂದರ ಪ್ರವಾಸಿ ಕೇಂದ್ರ ಎಂದರೆ ತಪ್ಪಲ್ಲ. ನಾನು ಎಲ್ಲರಿಗೂ ಇಲ್ಲಿಗೆ ಭೇಟಿ ನೀಡುವಂತೆ ಸಲಹೆ ನೀಡುತ್ತೇನೆ ಎಂದು ನಟಿ ಮೇಘನಾ ರಾಜ್ ತಿಳಿಸಿದರು.
ಬಿಡದಿ ಬಳಿಯಿರುವ ವಂಡರ್‌ಲಾ ಹಾಲಿಡೇಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ನೂತನವಾಗಿ ನಿರ್ಮಿಸಿರುವ ಸ್ಕೈ ಟಿಲ್ಟ್ ಎಂಬ ವಿನೂತನ ರೈಡ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಚಿಕ್ಕವಳಿದ್ದಾಗಿನಿಂದ ಇಲ್ಲಿಗೆ ಬರುತ್ತಿದ್ದೇನೆ ಇಂದು ಉದ್ಘಾಟನೆಗೆಂದು ಬಂದಿದ್ದು, ಬಾಲ್ಯದ ನೆನಪು ಮರುಕಳಿಸಿದೆ.
ಮನರಂಜನಾ ತಾಣವಾದ ವಂಡರ್ ಲಾದಲ್ಲಿ ಈಗಾಗಲೇ ಸಾಕಷ್ಟು ಗೇಮ್‌ಗಳು ಜನರನ್ನು ರಂಜಿಸುತ್ತಿದ್ದು, ಇದೀಗ ಈ ಕುಟುಂಬಕ್ಕೆ ಮತ್ತೊಂದು ರೈಡ್ ಸೇರ್ಪಡೆಗೊಂಡಿದೆ. ಆಕಾಶದಲ್ಲಿ ತೇಲುವ ಅನುಭವ ಪಡೆಯಲು ಇಚ್ಚಿಸುವ ಪ್ರತಿಯೊಬ್ಬರಿಗೂ ಈ ರೈಡ್ ಇಷ್ಟವಾಗಲಿದೆ. ಸ್ಕೈ ಟಿಲ್ಟ್ ಹೆಸರಿನ ಈ ರೈಡ್ 150 ಅಡಿ ಎತ್ತರದ ಕಟ್ಟದ ಉದ್ದದಷ್ಟಿದ್ದು, ಗಾಜಿನ ಗೋಡೆಯಂತೆ ನಿರ್ಮಿಸಲಾಗಿದೆ. 14- ಅಂತಸ್ತಿನ ಮೇಲಿರುವ ಈ ಸ್ಕೈಟಿಲ್ಟ್ ಕೆಳಗೆ ವಾಲಲಿದೆ ಎಂದರು.
ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಲ್ಲಿ, ವಂಡರ್‌ಲಾ ಹಿಂದಿನಿಂದಲೂ ವಿನೂತನ ರೈಡ್ ಗಳನ್ನು ಪರಿಚುಸುವುದಕ್ಕಾಗಿ ಶ್ರಮಿಸುತ್ತಲೇ ಇದೆ. ಇದು ನಮ್ಮ ಜವಾಬ್ದಾರಿ ಕೂಡ ಹೌದು. ಜನರನ್ನು ಇನ್ನಷ್ಟು ರಂಜಿಸುವ ಉದ್ದೇಶದಿಂದ ಅವರ ನಿರೀಕ್ಷೆಗಳಿಗೆ ತಕ್ಕಂತಹ ರೈಡ್‌ಗಳನ್ನು ಪರಿಚುಸುವುದು ನಮ್ಮ ಉದ್ದೇಶವಾಗಿದ್ದು, ಈ ನೂತನ ರೈಡ್ ಇದಕ್ಕೆ ನಿದರ್ಶನವಾಗಿದೆ ಎಂದರು.ಬೆಂಗಳೂರು ವಂಡರ್ ಲಾ ಪಾರ್ಕ್‌ನ ಮುಖ್ಯಸ್ಥ ಎಚ್.ಎಸ್. ರುದ್ರೇಶ್ ಮತ್ತಿತರರು ಇದ್ದರು.
ಚಿತ್ರನಟರನ್ನು ಅಪಮಾನಿಸುವುದು ಸಲ್ಲ: ಮೇಘನಾರಾಜ್
ಯಾವುದೇ ಚಿತ್ರನಟರನ್ನು ಅಪಮಾನಿಸುವುದು ಸರಿಯಲ್ಲ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರತಿಯೊಬ್ಬ ನಟರು ಚಿತ್ರರಂಗಕ್ಕಾಗಿಯೇ ದುಡಿದಿದ್ದಾರೆ. ಯಾವುದೇ ಕಲಾವಿದ ಜನತೆ ಇರುವ ಕಡೆ ಬರ್ತಾರೆ ಅಂದ್ರೆ ನಿಮ್ಮಗಳ ಮೇಲಿರುವ ಪ್ರೀತಿಯೇ ಹೊರತು, ಬೇರೆನಿಲ್ಲ. ಆದ್ದರಿಂದ, ಎಲ್ಲರನ್ನೂ ಗೌರವಿಸುವ ಕೆಲಸ ಮಾಡಬೇಕಿದೆ. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ನಟಿ ಮೇಘನಾ ರಾಜ್ ಹೇಳಿದರು.