ಬೀದರ: ಅಂಧ- ಅನಾಥ ಕಲಾವಿದರನ್ನು ಸಲಹುತ್ತಿದ್ದ ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ನಾಡಿನ ಮಹಾನ್ ಚೇತನರಾಗಿದ್ದರು. ಅಂಧರ ಹೊಂಬೆಳಕು ಆಗಿದ್ದ ಗವಾಯಿಗಳು 20ನೇ ಶತಮಾನದ ಅದ್ಭುತ ಸೃಷ್ಟಿಯಾಗಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಉಪ ಕುಲಪತಿ ಪೊÅ. ದಯಾನಂದ ಅಗಸರ್ ಬಣ್ಣಿಸಿದರು.
ನಗರದ ರಂಗ ಮಂದಿರದಲ್ಲಿ ಶುಕ್ರವಾರ ಪಂಚಾಕ್ಷರಿ ಗವಾಯಿ ಸೇವಾ ಸಂಘ ಪಂಚಾಕ್ಷರಿ ಗವಾಯಿಗಳ 76ನೇ ಪುಣ್ಯತಿಥಿ, ಪುಟ್ಟರಾಜ ಕವಿ ಗವಾಯಿಗಳ 10ನೇ ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಾಹಿತ್ಯ, ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಗವಾಯಿಗಳ ಸಂಗೀತ ಮತ್ತು ಸಾಹಿತ್ಯದ ಪರಂಪರೆ ಮುನ್ನಡೆಸಿಕೊಂಡು ಹೋಗುತ್ತಿರುವ ಸೇವಾ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕದ ಕಲಾ ಪೋಷಕರು: ಹಿರಿಯ ಸಾಹಿತಿ ಶಂಭುಲಿಂಗ ಕಾಮಣ್ಣ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಕವಿಗವಾಯಿಗಳು ಕನ್ನಡದ ಕುಲತಿಲಕರಾಗಿ, ಸಾವಿರಾರು ಸಂಗೀತ ಕಲಾವಿದರನ್ನು ನಿರ್ಮಾಣ ಮಾಡಿ ಅಂಧ-ಅನಾಥರ ಆಶ್ರಿತರಾಗಿದ್ದಾರೆ. ಬಹಿರಂಗದ ಚಕ್ಷು ಇಲ್ಲದಿದ್ದರೂ ಅಂತರಂಗದ ದಿವ್ಯಚಕ್ಷುವಿನಿಂದ ಎಲ್ಲವನ್ನೂ ಬಲ್ಲವರಾಗಿ ಕರ್ನಾಟಕದ ಕಲಾಪೋಷಕರಾಗಿ ಕೆಲಸ ಮಾಡಿದ್ದಾರೆ. ಇಂದು ಅವರ ಪರಂಪರೆ, ಸಂಪ್ರದಾಯವನ್ನು ಪ್ರೊ| ಕಲ್ಮಠ ನೇತೃತ್ವದಲ್ಲಿ ಸೇವಾ ಸಂಘ ಉಳಿಸಿ ಬೆಳೆಸುತ್ತಿರುವುದು ಮಾದರಿ ಕಾರ್ಯ ಎಂದರು.
ಸಂಘದ ಅಧ್ಯಕ್ಷ ಪ್ರೊ| ಎಸ್.ವಿ. ಕಲ್ಮಠ ಪ್ರಾಸ್ತಾವಿಕ ಮಾತನಾಡಿ, ಚಿಟಗುಪ್ಪದಲ್ಲಿ ಸುಮಾರು 1985ರಿಂದ ಸಂಗೀತ ನೃತ್ಯ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, 2002ರಿಂದ ಬೀದರ ನಗರದಲ್ಲಿ ಅರ್ಥಪೂರ್ಣವಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ಕಲಾವಿದರಿಗೆ ಬೀದರಗೆ ಕರೆಸಿ, ಕಲೆ ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪಂಚಾಕ್ಷರಿ ಗವಾಯಿಗಳ ಹಾಗೂ ಪುಟ್ಟರಾಜ ಕವಿಗವಾಯಿಗಳ ಪರಂಪರೆ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ: ಹಾರಕೂಡ ಶ್ರೀ ಮಠದ ಡಾ| ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಪಂ. ವೀರಭದ್ರಪ್ಪ ಗಾದಗಿ ಅವರನ್ನು ಸನ್ಮಾನಿಸಲಾಯಿತು. 2021ನೇ ಸಾಲಿನ ಪಂಚಾಕ್ಷರಿ ಪ್ರಶಸ್ತಿಯನ್ನು ಹಿರಿಯ ಕಲಾವಿದ ರಘುನಾಥರಾವ್ ಪಾಂಚಾಳ ಅವರಿಗೆ ಹಾಗೂ ಪುಟ್ಟರಾಜ ಪ್ರಶಸ್ತಿಯನ್ನು ಅಂಧ ಕಲಾವಿದರಾದ ಶಿವಸ್ವಾಮಿ ಚೀನಕೇರಾ ಅವರಿಗೆ ನೀಡಿ ಗೌರವಿಸಲಾಯಿತು. ಕೊಪ್ಪಳದ ಬಾಲಕ ವೈಭವ್ ರೆಡ್ಡಿ ಅವರ ಪುಟ್ಟರಾಜ ಗವಾಯಿ ಪಾತ್ರದಲ್ಲಿ ಅಭಿನಯ ಗಮನ ಸೆಳೆಯಿತು.
ಈ ವೇಳೆ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಟಾಳೆ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಬಾಬು ವಾಲಿ, ಧನರಾಜ ಸ್ವಾಮಿ, ಸುರೇಶ ಮಾಶೆಟ್ಟಿ, ಪ್ರೊ| ಬಿ.ಎಸ್. ಬಿರಾದಾರ, ಲಕ್ಷ್ಮಣರಾವ್ ಆಚಾರ್ಯ, ಎಸ್.ಬಿ. ಕುಚಬಾಳ, ಪ್ರೊ| ದೇವೇಂದ್ರ ಕಮಲ, ಡಾ| ರಾಜಕುಮಾರ ಹೆಬ್ಟಾಳೆ, ಬಾಬುರಾವ್ ದಾನಿ, ಧರ್ಮವೀರ ಬಿರಾದಾರ, ಪ್ರಕಾಶ ಕನ್ನಾಳೆ, ಪಂಚಾಕ್ಷರಿ ಕಲ್ಮಠ ಮತ್ತು ಡಿ.ಎಸ್. ಜೋಶಿ ಇದ್ದರು.