Advertisement

ಮಹಿಳಾ ಯಕ್ಷಗಾನ ಬಳಗ: ಮುಂಬಯಿ ಪ್ರವಾಸಕ್ಕೆ ಚಾಲನೆ

03:01 PM Aug 01, 2018 | Team Udayavani |

ಥಾಣೆ: ನವೋದಯ ಕನ್ನಡ ಸಂಘವು ಸುವರ್ಣ ಮಹೋ ತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ. ಮುಂದಿನ ಹನ್ನೊಂದು ತಿಂಗಳ ಕಾಲ ನಡೆಯುವ ಸರಣಿ ಕಾರ್ಯಕ್ರಮಗಳಿಗೆ ತುಳು- ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ. ಇಂದು ನಮ್ಮ ಸಂಸ್ಥೆಯ ಸಭಾಗೃಹದಲ್ಲಿ ಮಹಿಳಾ ಯಕ್ಷಗಾನ ಬಳಗದ ಮುಂಬಯಿ ಪ್ರವಾಸಕ್ಕೆ ಚಾಲನೆ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಅಜೆಕಾರು ಕಲಾಭಿಮಾನಿ ಬಳಗದ ಕಲಾಸೇವೆ ಮೆಚ್ಚುವಂಥದ್ದಾಗಿದೆ. ಕಳೆದ 11 ವರ್ಷಗಳಿಂದ ನಮ್ಮ ಸಂಘದ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಾ ಬಂದಿರುವುದಲ್ಲದೆ, ಕಳೆದ ವರ್ಷದಿಂದ ನಮ್ಮ ಶಾಲಾ ಮಕ್ಕಳಿಗೆ ಯಕ್ಷಗಾನ ದೀಕ್ಷೆಯನ್ನು ನೀಡಿ ಅವರಲ್ಲಿ ಕಲಾಭಿಮಾನಿವನ್ನು ಬೆಳೆಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಲಾರಾಧನೆ ಮೆಚ್ಚುವಂಥದ್ದಾಗಿದೆ ಎಂದು ನವೋದಯ ಕನ್ನಡ ಸೇವಾ ಸಂಘ ಥಾಣೆ ಅಧ್ಯಕ್ಷ ಜಯ ಕೆ. ಶೆಟ್ಟಿ ಅವರು ನುಡಿದರು.

Advertisement

ಜು. 28 ರಂದು ಸಂಜೆ ಥಾಣೆ ನವೋದಯ ಇಂಗ್ಲೀಷ್‌ ಹೈಸ್ಕೂಲ್‌ ಮತ್ತು ಜ್ಯೂನಿಯರ್‌ ಕಾಲೇಜು ಸಂಚಾಲಿತ ನವೋದಯ ಕನ್ನಡ ಸೇವಾ ಸಂಘ ಇದರ ಆಶ್ರಯದಲ್ಲಿ ನವೋದಯ ಜೂನಿಯರ್‌ ಕಾಲೇಜು ಸಭಾಗೃಹದಲ್ಲಿ ಜರಗಿದ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನಗಳ ಮುಂಬಯಿ ಪ್ರವಾಸ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲೆ, ಸಂಸ್ಕೃತಿಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವಂತಹ ಇಂತಹ ಕಾರ್ಯಕ್ರಮಳಿಗೆ ಸಂಘದ ಪ್ರೋತ್ಸಾಹ, ಸಹಕಾರ ಸದಾಯಿದೆ. ಮಹಿಳಾ ಯಕ್ಷಗಾನ ಮಂಡಳಿಯ ಮುಂಬಯಿಯ ಪ್ರವಾಸವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರು ಮಾತನಾಡಿ, ಕಳೆದ 17 ವರ್ಷಗಳಿಂದ ತವರೂರ ಕಲಾವಿದರನ್ನು ನಗರಕ್ಕೆ ಆಹ್ವಾನಿಸಿ ಯಕ್ಷಗಾನ, ತಾಳಮದ್ದಳೆಗಳನ್ನು ಪ್ರದರ್ಶಿಸುತ್ತಿದ್ದರೆ, ಅದರ ಹಿಂದೆ ಮುಂಬಯಿ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಗಣ್ಯರು, ದಾನಿಗಳು, ಕಲಾಭಿಮಾನಿಗಳ ಕೊಡುಗೆ ಅಪಾರವಿದೆ. ಇವರೆಲ್ಲರ ಪ್ರೋತ್ಸಾಹ, ಸಹಕಾರದಿಂದಲೇ ತವರೂರ ಸಂಸ್ಕೃತಿ, ಕಲೆಯನ್ನು ಇಲ್ಲಿ ಉಳಿಸಿ-ಬೆಳೆಸಲು ಸಾಧ್ಯವಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಮುಂದೆಯೂ ಕೂಡಾ ಇದೇ ರೀತಿಯಲ್ಲಿ ಮುಂದುವರಿಯಲಿ. ತವರೂರುರ ಕಲಾವಿದರು ಇನ್ನಷ್ಟು ಬೆಳೆದು, ಕಲೆಯು ಅಜರಾಮರಗೊಳ್ಳಲಿ ಎಂದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ  ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ನಿರ್ದೇಶಕಿ, ತಂಡದ ಸಂಚಾಲಕಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪೂರ್ಣಿಮಾ ಯತೀಶ್‌ ರೈ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಮ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಸರಣಿ ಕಾರ್ಯಕ್ರಮಗಳ ಬಗ್ಗೆ ಸಂಘದ ಗೌರವ ಕಾರ್ಯದರ್ಶಿ ದಯಾನಂದ ಎಸ್‌. ಶೆಟ್ಟಿ ಮಾಹಿತಿ ನೀಡಿ, ಸಂಘವು ಮುಂದಿನ 12 ತಿಂಗಳಲ್ಲಿ ಹದಿಮೂರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವ ಆಚರಿಸುವ ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ. ಸಂಘವು ಇನ್ನಷ್ಟು ಪ್ರಗತಿಯನ್ನು ಕಾಣಲು ಸದಸ್ಯತನವನ್ನು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗೋಣ. ಸದಸ್ಯರಿಗೆ ಮುಂದಿನ ದಿನಗಳಲ್ಲಿ ಗುರುತಿನ ಕಾರ್ಡನ್ನು ನೀಡುವ ಯೋಜನೆಯನ್ನು ಹೊಂದಲಾಗಿದೆ ಎಂದು ನುಡಿದರು.

Advertisement

ವೇದಿಕೆಯಲ್ಲಿ ಸಂಘದ ಗೌರವ ಕೋಶಾಧಿಕಾರಿ ಸುನೀಲ್‌ ಎಸ್‌. ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವ ಸಾಹಿತಿ, ರಂಗನಟ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಸಂಘದ ಸುವರ್ಣ ಮಹೋತ್ಸವಕ್ಕಾಗಿ ರಚಿಸಿರುವ ಹಾಡನ್ನು ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ಗಾನ ಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಸಂಘದ ವತಿಯಿಂದ ಅಧ್ಯಕ್ಷ ಜಯ ಕೆ. ಶೆಟ್ಟಿ ಅವರು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ತಾಳಮದ್ದಳೆ ಅರ್ಥದಾರಿ, ಸಂಘದ ಸದಸ್ಯ ರವಿ ಹೆಗ್ಡೆ ಹೆರ್ಮುಂಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ  ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ಮದನಾಕ್ಷೀ ತಾರಾವಳಿ-ಶಿವಭಕ್ತ ವೀರಮಣಿ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next