ಧಾರವಾಡ: ಸೈಕ್ಲಿಂಗ್ ಹಾಗೂ ಹಾಕಿ ಪಟುಗಳು ಆಗಬೇಕಿದ್ದ ಗದಗ ಜಿಲ್ಲೆಯ ಮೂವರು ಮಹಿಳಾ ಕುಸ್ತಿಪಟುಗಳಿಗೆ ಎತ್ತರ ಇಲ್ಲದ ಕಾರಣ ಕುಸ್ತಿ ಕ್ರೀಡೆಗೆ ಬಂದು ಇದೀಗ ಚಿನ್ನ ಬೇಟೆಯಾಡಿ ಮಿಂಚುತ್ತಿದ್ದಾರೆ.
ನಗರದ ಕಡಪಾ ಮೈದಾನದಲ್ಲಿ ನಡೆದ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಚಿನ್ನ ಪಡೆದ ಪ್ರೇಮಾ ಎಚ್. ಹಾಗೂ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಚಿನ್ನ ಪಡೆದ ಬಷೀರಾ, 58 ಕೆ.ಜಿ. ವಿಭಾಗದಲ್ಲಿ ಚಿನ್ನ ಪಡೆದ ಶಹೀದಾ ಬಾಲಗರ ಈ ಸಾಧನೆ ಮಾಡಿದ್ದಾರೆ.
ಮುಂಡರಗಿಯ ಬಷೀರಾ ತಂದೆ ಬಾರ್ ಬೈಡಿಂಗ್ ಮಾಡುತ್ತಿದ್ದರೆ ಅಸುಂಡಿಯ ಪ್ರೇಮಾ ಎಚ್. ಅವಳದ್ದು ರೈತಾಪಿ ಕುಟುಂಬ. ಇನ್ನು ಶಾಹೀದಾ ವೆಂಕಟಾಪೂರ ಗ್ರಾಮದವಳಾಗಿದ್ದು, ಇವಳ ತಂದೆ ಗೌಂಡಿ ಕೆಲಸ ಮಾಡುತ್ತಿದ್ದಾರೆ.
ಬಡ ಕುಟುಂಬದಿಂದ ಬಂದಿರುವ ಈ ಮೂವರಿಗೆ ಲಕ್ಕುಂಡಿಯ ಶರಣಗೌಡ ಬೇಲಗೇರಿ ಅವರೇ ಆಶ್ರಯ ನೀಡಿ, ತರಬೇತಿ ನೀಡುತ್ತಿದ್ದಾರೆ. ಈ ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿದ್ದು, ಈ ಪೈಕಿ ಪ್ರೇಮಾ ಎಚ್. ಈಗಾಗಲೇ ಚಿನ್ನ ಪಡೆದು ಸೈ ಅನ್ನಿಸಿಕೊಂಡಿದ್ದಾಳೆ.
ಗದಗ ಕ್ರೀಡಾ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶರಣಗೌಡ ಕೋಚ್ ಆಗಿದ್ದು, ತಮ್ಮ ಮನೆಯಲ್ಲಿ ಆಶ್ರಯ ನೀಡಿ ಈ ಮೂವರಿಗೆ ತರಬೇತಿ ನೀಡುತ್ತಿದ್ದಾರೆ. ಎತ್ತರ ಇಲ್ಲದ ಕಾರಣ ಕುಸ್ತಿಪಟುವಾದ ನಮಗೆ ಕೋಚ್ ಶರಣಗೌಡ ಅವರ ಮಾರ್ಗದರ್ಶನಲ್ಲಿ ಮುನ್ನಡೆದಿದ್ದೇವೆ.
ಅವರು ತಮ್ಮ ಮನೆಯಲ್ಲಿ ಆಶ್ರಯ ನೀಡಿ ಸೂಕ್ತ ತರಬೇತಿ ನೀಡುತ್ತಿದ್ದು, ಅವರ ಮನೆಯ ಕುಟುಂಬದ ಪ್ರೋತ್ಸಾಹ ಫಲವಾಗಿ ಕುಸ್ತಿಯಲ್ಲಿ ಸಾಧನೆ ಮಾಡುವಂತಾಗಿದೆ ಎಂದು ಪ್ರೇಮಾ, ಬಷೀರಾ, ಶಹೀದಾ ಹೇಳಿದರು.