ಬ್ರಿಸ್ಟಲ್: ವನಿತಾ ವಿಶ್ವಕಪ್ ಪಂದ್ಯಾವಳಿಯ ಮುನ್ನೂರು ಪ್ಲಸ್ ಮೊತ್ತದ ಭರ್ಜರಿ ಮೇಲಾಟದಲ್ಲಿ ಆತಿಥೇಯ ಇಂಗ್ಲೆಂಡ್ 68 ರನ್ನುಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ.
ಇದರೊಂದಿಗೆ ಎರಡೂ ತಂಡಗಳು 4 ಪಂದ್ಯಗಳನ್ನು ಮುಗಿಸಿವೆ. ಇಂಗ್ಲೆಂಡ್ 3 ಜಯದೊಂದಿಗೆ 3ನೇ ಸ್ಥಾನದಲ್ಲಿ, ದಕ್ಷಿಣ ಆಫ್ರಿಕಾ 2 ಗೆಲುವಿನೊಂದಿಗೆ 4ನೇ ಸ್ಥಾನದಲ್ಲಿದೆ.
ಆರಂಭಿಕ ಆಟಗಾರ್ತಿ ಟ್ಯಾಮಿ ಬೇಮಾಂಟ್ ಮತ್ತು ಕೀಪರ್ ಸಾರಾ ಟಯ್ಲರ್ ಅವರ ಶತಕ ಇಂಗ್ಲೆಂಡ್ ಸರದಿಯ ಆಕರ್ಷಣೆಯಾಗಿತ್ತು. ಟಾಸ್ ಗೆಲುವಿನ ಸಂಪೂರ್ಣ ಲಾಭವೆತ್ತಿದ ಇಂಗ್ಲೆಂಡ್ ಇವರಿಬ್ಬರ 275 ರನ್ ಜತೆಯಾಟದಿಂದ 5 ವಿಕೆಟಿಗೆ 373 ರನ್ ಸೂರೆಗೈದಿತು. ಇದು ವನಿತಾ ವಿಶ್ವಕಪ್ ಇತಿಹಾಸದ, ಸರ್ವಾಧಿಕ ಮೊತ್ತದ 4ನೇ ಜಂಟಿ ದಾಖಲೆಯಾಗಿದೆ.
ದಕ್ಷಿಣ ಆಫ್ರಿಕಾ ಇದನ್ನು ಬೆನ್ನಟ್ಟಿ ಗೆದ್ದರೆ ಅಲ್ಲೊಂದು ವಿಶ್ವದಾಖಲೆ ನಿರ್ಮಾಣವಾಗಲಿತ್ತು. ಆರಂಭಿಕರಾದ ಲಾರಾ ವೋಲ್ವಾರ್ಟ್ (67) ಮತ್ತು ಲೈಜೆಲ್ ಲೀ (72) ಮೊದಲ ವಿಕೆಟಿಗೆ 25.1 ಓವರ್‌ಗಳಿಂದ 128 ರನ್ ಪೇರಿಸಿದಾಗ ಇಂಥದೊಂದು ಸಾಧ್ಯತೆ ಗರಿಗೆದರಿದ್ದು ಸುಳ್ಳಲ್ಲ. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಆಂಗ್ಲ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದರು. ಬಳಿಕ ಕ್ಲೇ ಟ್ರಯಾನ್ (54), ಮಿಗ್ನನ್ ಡು ಪ್ರೀಝ್ (43) 75 ರನ್ ಜತೆಯಾಟವನ್ನು ನಿಭಾಯಿಸಿದರೂ ಗುರಿಯಿಂದ ದೂರವೇ ಉಳಿಯಬೇಕಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 9ಕ್ಕೆ 305 ರನ್ ಪೇರಿಸಿ ಶರಣಾಯಿತು. 3 ದಿನಗಳ ಹಿಂದೆ ಹರಿಣಗಳ ಇದೇ ಬೌಲಿಂಗ್ ಪಡೆ ವೆಸ್ಟ್ ಇಂಡೀಸನ್ನು 48 ರನ್ನಿಗೆ ಉಡಾಯಿಸಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಧಾರಾಕಾರ ರನ್ ಬಿಟ್ಟುಕೊಟ್ಟಿತು.
ಟ್ಯಾಮಿ ಬೇಮಾಂಟ್ 148 ರನ್ನಿಗೆ 145 ಎಸೆತ ತೆಗೆದುಕೊಂಡರು. ಬೀಸಿದ್ದು 22 ಬೌಂಡರಿ ಹಾಗೂ ಒಂದು ಸಿಕ್ಸರ್. ಇದು ಅವರ 3ನೇ ಶತಕ. ಸಾರಾ ಟಯ್ಲರ್ ಅವರ 147 ರನ್ ಕೇವಲ 104 ಎಸೆತಗಳಿಂದ ಬಂತು. ಇದು 24 ಬೌಂಡರಿಗಳನ್ನು ಒಳಗೊಂಡಿತ್ತು. ಇದು ಟಯ್ಲರ್ ಅವರ 2ನೇ ಶತಕ ಹಾಗೂ ಜೀವನಶ್ರೇಷ್ಠ ಸಾಧನೆ. ದಕ್ಷಿಣ ಆಫ್ರಿಕಾ ಪರ ಮರಿಜಾನ್ ಕಾಪ್ 77 ರನ್ನಿಗೆ 3 ವಿಕೆಟ್ ಉರುಳಿಸಿದರು.